ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದ ಮುಸ್ಲಿಂ ವಿದ್ಯಾರ್ಥಿಗಳು: ಶಿಕ್ಷಣ ಸಚಿವ

Last Updated 4 ಏಪ್ರಿಲ್ 2022, 11:07 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿರುವುದು ಮಾತ್ರವಲ್ಲ, ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟು ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್‌ ಧರಿಸದೇ ಪರೀಕ್ಷೆ ಬರೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪರೀಕ್ಷಾ ಕೇಂದ್ರದೊಳಗೆ ಯಾರೂ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯುತ್ತಿಲ್ಲ. ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಹಿಜಾಬ್‌ ವಿಚಾರವಾಗಿ ಮೊದಲ ದಿನ ಸಮಸ್ಯೆ ಆಗಿತ್ತು. ಆ ಬಳಿಕ ಮುಸ್ಲಿಂ ವಿದ್ಯಾರ್ಥಿನಿಯರು ಸರ್ಕಾರ ಆದೇಶ ಪಾಲಿಸುತ್ತಿದ್ದು, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪರೀಕ್ಷೆಗೆ ಇತರೆ ಧರ್ಮೀಯ ವಿದ್ಯಾರ್ಥಿಗಳು ಶೇ 97.8 ರಷ್ಟು ಹಾಜರಾಗಿದ್ದರೆ, ಮುಸ್ಲಿಂ ವಿದ್ಯಾರ್ಥಿಗಳು ಶೇ 98.2 ರಷ್ಟು ಹಾಜರಾಗಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ಬರೆಯುತ್ತಿರುವುದು ಮಾತ್ರವಲ್ಲ, ಇತರ ಧರ್ಮದವರಿಗಿಂತ ಮುಸ್ಲಿಂ ಧರ್ಮದ ಅಕ್ಕ– ತಂಗಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಈ ವಿಚಾರದಲ್ಲಿ ಯಾವುದೇ ಊಹಾಪೋಹಗಳಿಗೆ ಬೆಲೆ ಇಲ್ಲ ಎಂದೂ ನಾಗೇಶ್‌ ಹೇಳಿದರು.

ಕಳೆದ ವರ್ಷ ಎಲ್ಲರಿಗೂ ಉತ್ತೀರ್ಣ ಮಾಡುತ್ತೇವೆ ಎಂದಿದ್ದಕ್ಕೆ 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ವರ್ಷವೂ 8 ಲಕ್ಷ ಜನ ಬಂದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಾಕಷ್ಟು ವಿದ್ಯಾರ್ಥಿಗಳು ಗೈರಾಗಿದ್ದರು. ಇಂಗ್ಲಿಷ್‌ ವಿಷಯದಲ್ಲೇ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT