ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲೇ ಪಾಠ–ಸವಾಲಿನಲ್ಲಿ ಯಶಸ್ಸು: 19 ಚಿನ್ನದ ಪದಕ ಪಡೆಯಲಿರುವ ಭಾವನಾ

Last Updated 21 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌ನಿಂದಾಗಿ ನಾಲ್ಕು ಸೆಮಿಸ್ಟರ್‌ಗಳಲ್ಲಿ ಮೂರು ಸೆಮಿಸ್ಟರ್‌ ಆನ್‌ಲೈನ್‌ನಲ್ಲೇ ಪಾಠ ಕೇಳಬೇಕಾಯಿತು. ನಗರದಲ್ಲಿದ್ದರೂ ಒಮ್ಮೊಮ್ಮೆ ನೆಟ್‌ವರ್ಕ್ ಸಿಗದೆ ಕಷ್ಟವಾಗುತಿತ್ತು. ಬೇರೆ ಆಯ್ಕೆಯೇ ಇರಲಿಲ್ಲ. ಉಳಿದವರಿಗಿಂತ ಹೆಚ್ಚು ಶ್ರಮ ಹಾಕಿ ಓದಿದೆ. ಮನೆಯಲ್ಲಿ ಅಪ್ಪ–ಅಮ್ಮ ಯಾವುದೇ ಕೆಲಸ ನೀಡದ್ದು ನೆರವಾಯಿತು’

–ಮೈಸೂರು ವಿಶ್ವವಿದ್ಯಾಲಯವು ಮಂಗಳವಾರ ಇಲ್ಲಿ ಆಯೋಜಿಸಿರುವ 102ನೇ ಘಟಿಕೋತ್ಸವದಲ್ಲಿ 19 ಚಿನ್ನ ಪದಕ ಹಾಗೂ 2 ದತ್ತಿ ಬಹುಮಾನ ಪಡೆಯಲಿರುವ ಜಿ.ಎಂ.ಭಾವನಾ ಅವರ ಮಾತುಗಳಿವು.

ಈ ಬಾರಿ ಅತಿ ಹೆಚ್ಚು ಚಿನ್ನದ ಪದಕ ಪಡೆಯುತ್ತಿರುವ ಅಭ್ಯರ್ಥಿ ಕೂಡ. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪದಕ ಪ್ರದಾನ ಮಾಡಲಿದ್ದಾರೆ.

ಎಂ.ಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಈ ಸಾಧನೆ ಮಾಡಿರುವ ಅವರು ಐಎಎಸ್‌ ಅಧಿಕಾರಿಯಾಗುವ ಗುರಿ ಹೊಂದಿದ್ದಾರೆ.

‌‘ನಮ್ಮೂರು ಕೆ.ಆರ್‌.ಪೇಟೆ ತಾಲ್ಲೂಕಿನ ಗೋವಿಂದನಹಳ್ಳಿ ಗ್ರಾಮ. ತಾಯಿ ಡಿ.ಬಿ.ಭಾಗ್ಯಾ ಪದವಿ ಓದಿದ್ದಾರೆ. ಗುತ್ತಿಗೆದಾರರಾಗಿರುವ ತಂದೆ ಜಿ.ಎಂ.ಮಹಾದೇವ್‌ ಹೆಚ್ಚು ಓದಿಲ್ಲ. ಆದರೆ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಇಡೀ ಕುಟುಂಬವನ್ನೇ ಮೈಸೂರು ನಗರಕ್ಕೆ ಸ್ಥಳಾಂತರ ಮಾಡಿದರು. ಆಗ ನಾನು ಐದನೇ ತರಗತಿ ಓದುತ್ತಿದ್ದೆ. ಈಗ ಅವರ ಕನಸು ನನಸಾಗಿದ್ದು, ತುಂಬಾ ಖುಷಿಯಾಗಿದ್ದಾರೆ. ತಮ್ಮ ಎಂಜಿನಿಯರಿಂಗ್‌ ಓದುತ್ತಿದ್ದಾನೆ’ ಎಂದು ಭಾವನಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎಂ.ಎಸ್ಸಿ ಎರಡು ವರ್ಷಗಳ ವ್ಯಾಸಂಗದಲ್ಲಿ ಮೊದಲ ಸೆಮಿಸ್ಟರ್‌ ಮಾತ್ರ ತರಗತಿಗೆ ಹೋಗಿ ಪಾಠ ಕೇಳಿದೆವು. ಆನಂತರ ಕೋವಿಡ್‌ನಿಂದಾಗಿ ಮನೆಯಲ್ಲೇ ಬಂದಿಯಾದೆವು. ಆನ್‌ಲೈನ್‌ನಲ್ಲಿ ವಿಜ್ಞಾನ ಪಾಠ ಕೇಳಿ ಅರ್ಥ ಮಾಡಿಕೊಳ್ಳಲು ಕಷ್ಟವಾಗುತಿತ್ತು. ಬೋಧಕರು ಪಿಪಿಟಿ ಮೂಲಕ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದರು. ಆನ್‌ಲೈನ್‌ನಲ್ಲೇ ಒಂದು ತಿಂಗಳು ಹೆಚ್ಚುವರಿ ತರಗತಿ ನಡೆಸಿ ಮನದಟ್ಟು ಮಾಡಿದರು. ಆನ್‌ಲೈನ್‌ ತರಗತಿ, ನೆಟ್‌ವರ್ಕ್‌ ವಿಚಾರವಾಗಿ ಗ್ರಾಮಾಂತರ ಪ್ರದೇಶದ ಸ್ನೇಹಿತರಿಗೆ ತುಂಬಾ ಕಷ್ಟ ಎದುರಾಯಿತು’ ಎಂದರು.

‘ಪೋಷಕರು, ಬೋಧಕರು ಹಾಗೂ ಸ್ನೇಹಿತರಿಗೆ ಈ ಪದಕ ಅರ್ಪಿಸುತ್ತೇನೆ’ ಎಂದು ಭಾವನಾ ಭಾವುಕರಾಗಿ ನುಡಿದರು.

ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ (ಲೈಫ್‌ ಸೈನ್ಸ್‌) ಪದವಿಯಲ್ಲೂ ಭಾವನಾ ರ‍್ಯಾಂಕ್‌ ಪಡೆದಿದ್ದಾರೆ. ಸದ್ಯ ಭಾವನಾ ಅವರು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT