ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ಆಯ್ಕೆ ಅನಿವಾರ್ಯ ಏಕೆ: 7 ಪದಕ ವಿಜೇತೆ ಲಮ್ಯಾ ಬೇಸರ

Last Updated 22 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಮೈಸೂರು: ‘ಜೀವನ ಪದ್ಧತಿ ಹಾಗೂ ಶಿಕ್ಷಣ– ಇವೆರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಂದು ಹೇಳಿರುವುದರಿಂದ ಬದುಕು ಅಯೋಮಯವಾಗಿದೆ. ಇಂಥ ಆಯ್ಕೆಯ ಅನಿವಾರ್ಯ ನಮಗ್ಯಾಕೆ?’

–ಮೈಸೂರು ವಿಶ್ವವಿದ್ಯಾಲಯವು ಮಂಗಳವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ 7 ಸ್ವರ್ಣ ಪದಕ ಹಾಗೂ 2 ದತ್ತಿ ಬಹುಮಾನ ಪಡೆದ ಮಂಗಳೂರಿನ ಲಮ್ಯಾ ಮಜೀದ್‌ ಅವರ ಬೇಸರದ ನುಡಿಗಳಿವು. ಎಂ.ಎಸ್ಸಿ ಸಸ್ಯವಿಜ್ಞಾನದಲ್ಲಿ ಅವರು ಸಾಧನೆ ಮಾಡಿದ್ದಾರೆ.

‘ಹಿಜಾಬ್‌ ಹಕ್ಕು ಕಸಿದುಕೊಂಡಿರುವುದು ನನ್ನ ಮನ ನೋಯಿಸಿದೆ. ಹಿಜಾಬ್‌ ಧರಿಸಿಯೇ ನಾನು ಶಾಲೆ–ಕಾಲೇಜಿಗೆ ಹೋಗಿದ್ದೆ. ನನ್ನಂಥ ಹಲವು ಹುಡುಗಿಯರ ಅವಕಾಶವನ್ನೇ ಈಗ ಕಿತ್ತುಕೊಂಡು ಅನ್ಯಾಯವೆಸಗಿದ್ದಾರೆ ಎಂಬ ಭಾವನೆ ಮೂಡಿದೆ’ ಎಂದರು. ಅವರಿಗೆ ವಿಜ್ಞಾನಿಯಾಗುವ ಗುರಿ ಇದೆ.

‘ಎಸ್ಸೆಸ್ಸೆಲ್ಸಿ ಬಳಿಕದ ತರಗತಿಗಳಿಗಾದರೂ ಹಿಜಾಬ್‌ ಧರಿಸಲು ಅವಕಾಶ ನೀಡಬೇಕಿತ್ತು. ನಮಗೂ ಒಂದು ಜೀವನ ಶೈಲಿಯಿದ್ದು, ಅದನ್ನು ಗೌರವಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಹೊರಗಡೆ ಹಿಜಾಬ್‌ ಧರಿಸಿ ಓಡಾಡುವವರನ್ನೂ ಅನುಮಾನದಿಂದ ನೋಡುವಂಥ ಪರಿಸ್ಥಿತಿ ತಂದಿಟ್ಟಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಪಿಸಿಎಲ್‌ನ ನಿವೃತ್ತ ಉದ್ಯೋಗಿಯಾಗಿರುವ ತಂದೆ ಎಸ್‌.ಎ.ಮಜೀದ್‌ ಹಾಗೂ ತಾಯಿ ಆಫಿಯಾ ಶೇಕ್‌ ಮಗಳ ಮಾತಿಗೆ ದನಿಗೂಡಿಸಿದರು. ಈ ದಂಪತಿಯ ಇನ್ನಿಬ್ಬರ ಪುತ್ರಿಯರು ಎಂಜಿನಿಯರ್‌ಗಳಾಗಿದ್ದಾರೆ.

ಎಂ.ಎ ಕನ್ನಡದ‌ಲ್ಲಿ 14 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆದ ಚಾಮರಾಜನಗರ ಜಿಲ್ಲೆ ನಾಗವಳ್ಳಿಯ ಪಿ.ಮಹದೇವಸ್ವಾಮಿ ಬಡತನದಲ್ಲೇ ಬೆಳೆದವರು. ಬಿಡುವು ಸಿಕ್ಕಾಗ ಗಾರೆ ಕೆಲಸ, ಪೇಂಟಿಂಗ್‌ ಮಾಡಿ ಸಂಪಾದನೆಯನ್ನು ವ್ಯಾಸಂಗಕ್ಕೆ ಬಳಸಿಕೊಳ್ಳುತ್ತಿದ್ದಾರೆ.

‘ದಲಿತ ಸಮುದಾಯದ ನಾನು ಸಂಕಷ್ಟದಲ್ಲೇ ಬೆಳೆದೆ. ತಂದೆ ತೀರಿಕೊಂಡ ಮೇಲೆ ಶಾಲೆ ಬಿಟ್ಟು ಕೆಲಸಕ್ಕೆ ಹೋಗಬೇಕೆಂಬ ಒತ್ತಡವಿತ್ತು. ತಾಯಿ ನಾಗಮ್ಮ ಕೂಲಿ ಮಾಡಿ ಓದಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೆಎಎಸ್‌ ಅಧಿಕಾರಿಯಾಗಬೇಕೆಂಬ ಆಸೆ ಇದೆ. ದಾನಿಗಳ ನೆರವು ಅಗತ್ಯವಿದೆ’ ಎಂದು ಮಹದೇವಸ್ವಾಮಿ ನುಡಿದರು.

ಬಿ.ಎ ಕೋರ್ಸ್‌ನಲ್ಲಿ 9 ಚಿನ್ನದ ಪದಕ, 10 ದತ್ತಿ ಬಹುಮಾನ ಪಡೆದಿರುವ ಕೊಳ್ಳೇಗಾಲ ತಾಲ್ಲೂಕಿನ ವಿ.ತೇಜಸ್ವಿನಿ ಪಿಯುಸಿಗೆ ಬರುವಷ್ಟರಲ್ಲಿ ತಂದೆ–ತಾಯಿಯನ್ನು ಕಳೆದುಕೊಂಡು ವಿದ್ಯಾಭ್ಯಾಸ ತೊರೆಯಲು ಮುಂದಾಗಿದ್ದರು. ಕಣ್ಣೀರಿಡು
ತ್ತಲೇ ಸಾಧನೆ ಹಂಚಿಕೊಂಡ ಅವರು, ‘ಪೋಷಕರಿದ್ದರೆ ನನ್ನ ಸಾಧನೆ ಕಂಡು ಖುಷಿಪಡುತ್ತಿದ್ದರು. ಈಗ ಹಾಸ್ಟೆಲ್‌ನಲ್ಲಿದ್ದು ಓದುತ್ತಿದ್ದೇನೆ. ಐಎಎಸ್‌ ಅಧಿಕಾರಿಯಾಗಬೇಕೆಂಬ ಗುರಿ ಇದೆ’ ಎಂದರು.‌

ಅಫ್ಗಾನಿಸ್ತಾನದ ವಿದ್ಯಾರ್ಥಿ ಸೈಯದ್‌ ಕುದ್ರತ್‌ ಹಾಶಿಮಿ, ಎಲ್‌ಎಲ್‌ಎಂ–ಅಂತರರಾಷ್ಟ್ರೀಯ ಕಾನೂನು ವಿಭಾಗದಲ್ಲಿ ರ‍್ಯಾಂಕ್‌ ಪಡೆದಿದ್ದಾರೆ. ‘ತಾಯ್ನಾಡಿನಲ್ಲಿ ಕುಟುಂಬ ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದೆ. ಯುದ್ಧದ ಪರಿಸ್ಥಿತಿ, ಹಿಂಸಾಚಾರ ನೆಲೆಸಿದೆ. ಮುಂದೇನಾಗುತ್ತೋ ಗೊತ್ತಿಲ್ಲ. ನನಗೆ ಇಲ್ಲಿ ವಿದ್ಯಾರ್ಥಿವೇತನ ಸಿಗುತ್ತಿದ್ದು, ವಿದ್ಯಾಭ್ಯಾಸ ಸಾಧ್ಯವಾಗಿದೆ’ ಎಂದು ಹೇಳಿದರು.

ಕೋವಿಡ್‌ ಮತ್ತು ರ‍್ಯಾಂಕ್‌!
ಬೆಂಗಳೂರಿನಲ್ಲಿ ನೆಲೆಸಿರುವ,ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವನಹಳ್ಳಿಯ ಗಣೇಶ್‌ ನಾಡಿಗ, ಎಂ.ಟೆಕ್‌ (ನಗರ ಹಾಗೂ ಪ್ರಾದೇಶಿಕ ಯೋಜನೆ) ಕೋರ್ಸ್‌ನಲ್ಲಿ 16 ಚಿನ್ನದ ಪದಕಕ್ಕೆ ಭಾಜನರಾದರು.

‘‍ಪ‍್ರಾಧ್ಯಾಪಕರು ಹಾಗೂ ಪೋಷಕರು ಈ ಸಾಧನೆಗೆ ಕಾರಣ. ಮೈಸೂರಲ್ಲಿ ಚಿಕ್ಕಪ್ಪನ ಮನೆಯಲ್ಲಿದ್ದು ಓದುತ್ತಿದ್ದೆ. ಕೋವಿಡ್‌ ಕಾರಣ ಬೆಂಗಳೂರಿನಿಂದಲೇ ಆನ್‌ಲೈನ್‌ ಪಾಠ ಕೇಳಿದೆ. ಎಂ.ಟೆಕ್‌ ಎರಡನೇ ವರ್ಷದ ಆರಂಭದಲ್ಲಿ ನನಗೆ, ತಂದೆ ಎನ್‌.ವಿ.ಧನಂಜಯ ರೆಡ್ಡಿ, ತಾಯಿ ಎ.ತನುಜಾ ಕೊರೋನಾ ಸೋಂಕಿಗೆ ಒಳಗಾದೆವು. ತುಂಬಾ ಕಷ್ಟ ಎದುರಾಯಿತು. ಹಟ ಹಿಡಿದು ಓದಿದೆ’ ಎಂದರು.

‘ನಗರ ಯೋಜನೆ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುವ ಗುರಿ ಇಟ್ಟುಕೊಂಡಿದ್ದು, ಬೆಂಗಳೂರು ಸಂಚಾರ ವ್ಯವಸ್ಥೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಕನಸಿದೆ’ ಎಂದು ಹೇಳಿದರು.

ಇವರು ಮಂಡಿಸಿದ ‘ಇಂಟಿಗ್ರೇಷನ್‌ ಆಫ್‌ ಲ್ಯಾಂಡ್‌ ಯೂಸ್‌ ಅಂಡ್‌ ಟ್ರಾನ್ಸ್‌ಪೋರ್ಟೇಷನ್‌ ಫಾರ್‌ ಸೆಟಿಲೈಟ್‌ ಟೌನ್‌ ರಿಂಗ್‌ ರೋಡ್‌ ಆಫ್‌ ಬೆಂಗಳೂರು’ ಮಹಾಪ್ರಬಂಧಕ್ಕೆ ಈಚೆಗೆ ನವದೆಹಲಿಯ ಐಟಿಪಿಐ ಸಂಸ್ಥೆಯು ರಾಷ್ಟ್ರೀಯಮಟ್ಟದ ಪ್ರಶಸ್ತಿ ‍ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT