ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿಗೆ ಮೈಸೂರು ವಿ.ವಿ ಗೌರವ ಡಾಕ್ಟರೇಟ್

Last Updated 13 ಮಾರ್ಚ್ 2022, 12:33 IST
ಅಕ್ಷರ ಗಾತ್ರ

ಮಂಡ್ಯ: ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಕಟಿಸಿದೆ.

ಖ್ಯಾತ ವಿಜ್ಞಾನಿ ಡಾ.ವಿ.ಕೆ.ಆತ್ರೆ ಹಾಗೂ ದಿವಂಗತ ನಟ ಪುನೀತ್ ಕುಮಾರ್ ಅವರಿಗೂ ಮರಣೋತ್ತರ ಗೌರವ ಡಾಕ್ಟರೇಟ್ ಪ್ರಕಟಿಸಲಾಗಿದೆ.

ಮಾರ್ಚ್ 22ರಂದು ಮೈಸೂರಿನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನಮಾಡಲಾಗುವುದು ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಜನಪದ ಗೀತೆಗಳನ್ನೇ ಉಸಿರಾಡುವ ಮಹಾದೇವಸ್ವಾಮಿ ಅವರು ಮಳವಳ್ಳಿಯ ಬಸ್‌ ನಿಲ್ದಾಣದಲ್ಲಿ ಹಾಡುತ್ತಾ, ಭಿಕ್ಷೆ ಬೇಡುತ್ತಾ ಊರೂರು ಸುತ್ತಿದವರು. ಅವರ ಬದುಕೇ ಜನಪದ ಗೀತೆಗಳ ಭಂಡಾರ, ಸಾವಿರಾರು ಗೀತೆಗಳನ್ನು ಉಸಿರಾಡುವ ಅವರು ಕೇಳುಗರ ಮನಸೂರೆಗೊಂಡವರು. ನೀಲಗಾರರ ಸಂಪ್ರದಾಯದ ಜೊತೆಗೆ ದೇವರಗುಡ್ಡ ಸಂಪ್ರದಾಯದ ಮಲೆ ಮಹಾದೇಶ್ವರ ಗೀತೆಗಳನ್ನೂ ಮೈಗೂಡಿಸಿಕೊಂಡು ರಾಜ್ಯದಾದ್ಯಂತ ತಮ್ಮ ನಾದ ಸುಧೆ ಹರಿಸಿದ್ದಾರೆ.

ಮಹಾದೇವಸ್ವಾಮಿ ಅವರು 7 ರಾತ್ರಿಗಳ ಕಾಲ ಮಲೆ ಮಹಾದೇಶ್ವರನ 7 ಅಧ್ಯಾಯದ ಕತೆ ಹೇಳುತ್ತಾರೆ. 4 ರಾತ್ರಿಗಳ ಕಾಲ ಮಂಟೆಸ್ವಾಮಿ ಕತೆ ಬಿಚ್ಚಿಡುತ್ತಾರೆ. ಸಂಕಮ್ಮ, ನಂಜುಂಡೇಶ್ವರ, ಬಿಳಿಗಿರಿ ರಂಗನಾಥ, ನೀಲವೇಣಿ, ಚಾಮುಂಡೇಶ್ವರಿ ಮುಂತಾದ ಜನಪದ ಕತೆಗಳನ್ನು ತಮ್ಮ ನೆನಪಿನ ಅಂಗಳದಲ್ಲಿ ತುಂಬಿಕೊಂಡಿದ್ದಾರೆ. ಹೆಗಲ ಮೇಲೆ ತಂಬೂರಿ, ಬೆರಳಲ್ಲಿ ಗಗ್ರ ಹಿಡಿದು ಕೂತರೆ ಹಗಲು– ರಾತ್ರಿಗಳ ವ್ಯತ್ಯಾಸ ಮರೆತು ಹೋಗುತ್ತದೆ.

ಮಹಾದೇವಸ್ವಾಮಿ ಅವರು ಬಸ್‌ ಹತ್ತಿ ಪ್ರಯಾಣಿಕರಿಂದ ಭಿಕ್ಷೆ ಪಡೆದು ಹೊಟ್ಟೆ ಪಾಡು ಮಾಡುತ್ತಿದ್ದರು. ಹಳ್ಳಿಗಳಿಗೆ ತೆರಳಿ ಬೀದಿಬೀದಿಯಲ್ಲಿ ಹಾಡಿ ದವಸ ಧಾನ್ಯ ಸಂಗ್ರಹಿಸುತ್ತಿದ್ದರು. ಜನರು ಅವರನ್ನು ಮನೆಗೆ ಕರೆದುಕೊಂಡು ಹೋಗಿ ತಮ್ಮ ಮನೆದೇವರ ಮೇಲೆ ಪದ ಕಟ್ಟಿ ಹಾಡಿಸುತ್ತಿದ್ದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT