ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಸಕ್ಕರೆ ಕಾರ್ಖಾನೆ ಪುನರಾರಂಭ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

Last Updated 9 ಮಾರ್ಚ್ 2021, 16:39 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಸಕ್ಕರೆ ಕಾರ್ಖಾನೆ (ಮೈ ಷುಗರ್ಸ್‌) ಪುನರಾರಂಭಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸ್ಥಳೀಯ ಜನಪ್ರತಿನಿಧಿಗಳ ಜತೆ ಉನ್ನತಮಟ್ಟದ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಪ್ರಶ್ನೆಗೆ ಸಕ್ಕರೆ ಸಚಿವ ಎಂ.ಟಿ.ಬಿ. ನಾಗರಾಜು ಉತ್ತರಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಈ ಭರವಸೆ ನೀಡಿದರು.

‘ಹೊಸ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ತಕ್ಷಣಕ್ಕೆ ₹ 15 ಕೋಟಿ ವೆಚ್ಚ ಮಾಡಿದರೆ ಕಾರ್ಖಾನೆಯಲ್ಲಿ ಕಬ್ಬು ನುರಿಯಲು ಆರಂಭಿಸಬಹುದು. ಆದರೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ 40 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಸರ್ಕಾರ ಹೊರಟಿದೆ. ಈ ವಿಚಾರದಲ್ಲಿ ಖಾಸಗಿಯವರ ಒತ್ತಡಕ್ಕೆ ಮಣಿಯಲಾಗಿದೆಯೆ’ ಎಂದು ಶ್ರೀಕಂಠೇಗೌಡ ಪ್ರಶ್ನಿಸಿದರು.

‘ಈ ಹಿಂದೆ ಮೈ ಷುಗರ್ಸ್ ಪುನಶ್ಚೇತನಕ್ಕಾಗಿ ₹ 200 ಕೋಟಿ ಅನುದಾನವನ್ನು ನಾನೇ ಒದಗಿಸಿದ್ದೆ. ಆದರೆ, ಕಾರ್ಖಾನೆಯಲ್ಲಿನ ಗುಂಪುಗಾರಿಕೆಯಿಂದ ಮತ್ತೆ ನಷ್ಟ ಸಂಭವಿಸಿದೆ. ಈಗಲೂ ಕಾರ್ಖಾನೆ ನಡೆಸಲಾಗದ ಸ್ಥಿತಿ ಇದೆ. ಶೀಘ್ರದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉತ್ತರಿಸಿದರು.

ಸಕ್ಕರೆ ಕಾರ್ಖಾನೆಯಿಂದ ₹ 30 ಕೋಟಿ ಆದಾಯ ತೆರಿಗೆ ಮತ್ತು ₹ 27 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಇದೆ. ಇತ್ತೀಚೆಗೆ ನಿವೃತ್ತರಾದ ನೌಕರರಿಗೆ ₹ 8 ಕೋಟಿ ಬಾಕಿ ಪಾವತಿಸಬೇಕಾಗಿದೆ. ಯಂತ್ರೋಪಕರಣಗಳ ದುರಸ್ತಿ, ಹೊಸ ಯಂತ್ರಗಳ ಅಳವಡಿಕೆಗೆ ತುರ್ತಾಗಿ ₹ 100 ಕೋಟಿ ಅಗತ್ಯವಿದೆ. ಈ ಎಲ್ಲವನ್ನು ಪರಿಗಣಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಮೈಷುಗರ್ಸ್ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡದಂತೆ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಕೂಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT