ಭಾನುವಾರ, ಏಪ್ರಿಲ್ 18, 2021
24 °C
ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಸಹಕಾರಿಗಳ ಅಧ್ಯಯನ ತಂಡ ಭೇಟಿ

ದ.ಕ.: ಸಹಕಾರ ಕ್ಷೇತ್ರ ಅಧ್ಯಯನಕ್ಕೆ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರದ ಅಧ್ಯಯನಕ್ಕೆ ನಬಾರ್ಡ್ ನಿಯೋಜಿತ ವಿವಿಧ ಜಿಲ್ಲೆಗಳ ಸಹಕಾರಿಗಳನ್ನು ಒಳಗೊಂಡ ತಂಡ ಬಂದಿದೆ. ಶುಕ್ರವಾರದಿಂದ ಎರಡು ದಿನಗಳ ಕಾಲ ಈ ತಂಡ, ಜಿಲ್ಲೆಯ ವಿವಿಧ ಸಹಕಾರ ಸಂಘಗಳು, ಸ್ವ ಸಹಾಯ ಸಂಘಗಳ ಮಳಿಗೆಗಳಿಗೆ ಭೇಟಿ ನೀಡಿ ಅಧ್ಯಯನ ಪ್ರಾರಂಭಿಸಿದೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌(ಎಸ್‌ಸಿಡಿಸಿಸಿ)ಗೆ ಭೇಟಿ ನೀಡಿ, ಬ್ಯಾಂಕಿನ ಸಮಗ್ರ ಪ್ರಗತಿಯ ಬಗ್ಗೆ ಮಾಹಿತಿ ಕಲೆ ಹಾಕಿತು. ಬ್ಯಾಂಕಿನ ವ್ಯವಹಾರ ಚಟುವಟಿಕೆಗಳ ವೈವಿಧ್ಯ, ಕ್ರೆಡಿಟ್ ಮಾನಿಟರಿಂಗ್, ಕೃಷಿ ಸಾಲ ಮರುಪಾವತಿಯಲ್ಲಿ ಕಳೆದ 25 ವರ್ಷಗಳಿಂದ ಆಗುತ್ತಿರುವ ಶೇ 100ರ ಸಾಧನೆಗಳ ಬಗ್ಗೆ ಮಾಹಿತಿ ಪಡೆಯಿತು.

‘ಎಸ್‌ಸಿಡಿಸಿಸಿ ಬ್ಯಾಂಕ್ ಆಧುನಿಕ ಬ್ಯಾಂಕಿಂಗ್ ಸೇವೆಯ ಜೊತೆಗೆ ಕೃಷಿಕರು, ಗ್ರಾಹಕರ ಸೇವೆಯಲ್ಲಿ ಜನಮನ್ನಣೆ ಗಳಿಸಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಕೋರ್ ಬ್ಯಾಂಕಿಂಗ್‌ ಸೇವೆಯು 105 ಶಾಖೆಗಳಲ್ಲಿ ದೊರೆಯುತ್ತಿದೆ. ಬ್ಯಾಂಕ್ ₹ 4686.74 ಕೋಟಿ ಠೇವಣಿ ಹೊಂದಿದ್ದು, ಮುಂದೆ ₹ 5000 ಕೋಟಿ ಠೇವಣಿ ಹೊಂದುವ ಗುರಿ ಹೊಂದಿದೆ. ಬ್ಯಾಂಕ್ ₹ 4963 ಕೋಟಿ ಸಾಲ ವಿತರಿಸಿದೆ. ನೇರ ಸಾಲ ನೀಡುವ ಗುರಿಯನ್ನು ₹ 2000 ಕೋಟಿಗೆ ತಲುಪಿಸುವ ಕಾರ್ಯ ಯೋಜನೆ ಇದೆ. ಪ್ರತಿ ತಾಲ್ಲೂಕಿನಲ್ಲಿ ಎಟಿಎಂ ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್‌ನೊಂದಿಗೆ ನೇರ ಸಂಪರ್ಕ ಹಾಗೂ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ನೊಂದಿಗೆ ನೇರ ಸಂಪರ್ಕ ಹೊಂದುವ ಏಕರೂಪದ ತಂತ್ರಾಂಶದ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ತಿಳಿಸಿದರು.

ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್, ವಿವಿಧ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಜಯ್‌ಕುಮಾರ್ ಸರನಾಯ್ಕ್ (ಬಾಗಲಕೋಟೆ), ರಾಜಕುಮಾರ್ ಪಾಟೀಲ್‌ (ಕಲಬುರ್ಗಿ), ಸಿ.ಅಶ್ವತ್ಥ್ (ಮಂಡ್ಯ), ಡಿ. ಹನುಮಂತಯ್ಯ (ಬೆಂಗಳೂರು), ಜಗದೀಶಪ್ಪ ಬಣಕಾರ್ (ದಾವಣಗೆರೆ), ಲಿಂಗರಾಜ ಚಪ್ಪರದಳ್ಳಿ (ಧಾರವಾಡ), ಕೊಡಂದೇರ ಗಣಪತಿ (ಕೊಡಗು), ಚೆನ್ನವೀರಪ್ಪ (ಶಿವಮೊಗ್ಗ), ಅಪೆಕ್ಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್.ದೇವರಾಜ್, ಮುಖ್ಯ ಮಹಾಪ್ರಬಂಧಕ ಎನ್.ಎಸ್.ಕೃಷ್ಣಮೂರ್ತಿ, ವ್ಯವಸ್ಥಾಪಕ ಎಲ್.ಜಗದೀಶ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಎಸ್.ಆರ್.ಗಿರೀಶ್ ಮೊದಲಾದವರು ಅಧ್ಯಯನ ತಂಡದಲ್ಲಿದ್ದಾರೆ. 

‘ಎಸ್‌ಸಿಡಿಸಿಸಿ ರಾಜ್ಯಕ್ಕೆ ಮಾದರಿ’

‘ಎಸ್‌ಸಿಡಿಸಿಸಿ ಬ್ಯಾಂಕ್, ಅಪೆಕ್ಸ್‌ ಬ್ಯಾಂಕ್‌ಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದೆ. ಇತರ ಡಿಸಿಸಿ ಬ್ಯಾಂಕ್‌ಗಳು ಅಳವಡಿಸಿಕೊಳ್ಳಬೇಕಾದ ಅನೇಕ ವಿಚಾರಗಳು ಇಲ್ಲಿವೆ. ಅಪೆಕ್ಸ್‌ ಬ್ಯಾಂಕ್ ಉಳಿದ ಬ್ಯಾಂಕ್‌ಗಳಿಗೆ ತಾಯಿಯಂತಿದ್ದರೆ, ಎಸ್‌ಸಿಡಿಸಿಸಿ ಬ್ಯಾಂಕ್ ಇದಕ್ಕೆ ತಾಯಿಯಂತೆ ಕೆಲಸ ಮಾಡುತ್ತಿದೆ. 33 ಸಾವಿರ ಸ್ವ ಸಹಾಯ ಗುಂಪುಗಳನ್ನು ರಚಿಸಿ, ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆಯ ಕ್ರಾಂತಿ ಮೂಡಿಸಿದ ಹೆಗ್ಗಳಿಕೆ ಈ ಬ್ಯಾಂಕ್‌ನದ್ದಾಗಿದೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.