ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಅಧಿಕಾರದಿಂದ ದೂರ ಉಳಿದ ತಿಪಟೂರು ಬಿಜೆಪಿ ಶಾಸಕ ಬಿ.ಸಿ ನಾಗೇಶ್

Last Updated 1 ಡಿಸೆಂಬರ್ 2020, 2:26 IST
ಅಕ್ಷರ ಗಾತ್ರ

ತುಮಕೂರು: ತಿಪಟೂರು ಶಾಸಕ ಬಿ.ಸಿ.ನಾಗೇಶ್ ಅವರಿಗೆ ಎರಡು ಬಾರಿ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದರೂ ಈವರೆಗೂ ಅಧಿಕಾರ ವಹಿಸಿಕೊಂಡಿಲ್ಲ. ಸಣ್ಣ–ಪುಟ್ಟ ಅವಕಾಶ ನೀಡಲಾಗಿದೆ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ.

ಮೊದಲಿಗೆ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಸ್ಥಾನವನ್ನೂ ಒಪ್ಪಿಕೊಂಡಿರಲಿಲ್ಲ. ಈಗ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಈ ಸ್ಥಾನವನ್ನೂ ಒಪ್ಪಿಕೊಂಡಿಲ್ಲ. ಅಧಿಕಾರ ವಹಿಸಿಕೊಳ್ಳುವುದು ಅನುಮಾನ ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿವೆ.

ತಿಪಟೂರು ಕ್ಷೇತ್ರದಿಂದ ನಾಲ್ಕು ಬಾರಿ ಸ್ಪರ್ಧಿಸಿ ಎರಡು ಸಲ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಜಿಲ್ಲೆಯ ಮಟ್ಟಿಗೆ ಬಿಜೆಪಿಯಲ್ಲಿ ಹಿರಿಯ ನಾಯಕ. ಆರಂಭದಿಂದಲೂ ಸಂಘ ಪರಿವಾರದ ಮೂಲಕ ಬೆಳೆದುಬಂದಿದ್ದು, ಅಲ್ಲೂ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

‘ಪ್ರಬಲ’ ಮಂಡಳಿ, ನಿಗಮದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ನಿಗಮವಷ್ಟೇ ಅಲ್ಲದೆ ಬೇರೆ ರೂಪದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ಕಾದುಕುಳಿತಿದ್ದರು. ಆದರೆ ಸಣ್ಣ–ಪುಟ್ಟ, ಹೆಚ್ಚು ‘ಶಕ್ತಿ’ಯುತವಲ್ಲದ ನಿಗಮಗಳಿಗೆ ನೇಮಕ ಮಾಡಿದ್ದು ಸಹಜವಾಗಿ ಕೋಪವನ್ನು ತರಿಸಿದೆ. ಆದರೆ ಈ ಅಸಮಾಧಾನವನ್ನು ಬಹಿರಂಗವಾಗಿ ತೋರ್ಪಡಿಸಿಲ್ಲ. ಅಧಿಕಾರ ವಹಿಸಿಕೊಳ್ಳದೆ ದೂರ ಉಳಿಯುವ ಮೂಲಕ ಪರೋಕ್ಷವಾಗಿ ‘ಉತ್ತರ’ ರವಾನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬದಲಾವಣೆ ಸಮಯ: ಒಂದು ವೇಳೆ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಬದಲಾವಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾದರೆ ಒಂದು ಅವಕಾಶ ಸಿಗಬಹುದು. ಮುಂದಿನ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಸಮಯದಲ್ಲಿ ಮಾಧುಸ್ವಾಮಿ ಅವರನ್ನು ಬದಲಾವಣೆ ಮಾಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಿಲ್ಲೆಯ 11 ಕ್ಷೇತ್ರಗಳಲ್ಲಿ ಐವರು ಬಿಜೆಪಿ ಶಾಸಕರಿದ್ದು, ಮಾಧುಸ್ವಾಮಿ ಹೊರತುಪಡಿಸಿದರೆ ನಾಗೇಶ್ ಹಿರಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಜಿಲ್ಲೆಗೆ ಸಚಿವ ಸ್ಥಾನ ನೀಡುವ ಸಮಯ ಎದುರಾದಾಗ ಹಿರಿಯರಾದ ನಾಗೇಶ್ ಅವರಿಗೆ ಅದೃಷ್ಟ ಒಲಿದು ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಮುಂದಿನ ಬದಲಾವಣೆಗಳು, ಪರಿಸ್ಥಿತಿಯ ‘ಲಾಭ’ಕ್ಕಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

ಸಬೂಬು: ವಿವಿಧ ನಿಗಮಗಳಿಗೆ ನೇಮಕಗೊಂಡವರು ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ನಾಗೇಶ್ ಮಾತ್ರ ‘ಇನ್ನೂ ಆದೇಶ ಪತ್ರ ಬಂದಿಲ್ಲ. ಅದಕ್ಕಾಗಿ ಕಾಯುತ್ತಿದ್ದೇನೆ’ ಎಂದು ಹೇಳುತ್ತಿದ್ದಾರೆ.

***

ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವ ಆದೇಶ ಪತ್ರ ಇನ್ನೂ ಬಂದಿಲ್ಲ. ಆದೇಶ ಪ್ರತಿ ಸಿಕ್ಕಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.

- ಬಿ.ಸಿ.ನಾಗೇಶ್, ತಿಪಟೂರು ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT