ಮಂಗಳವಾರ, ಸೆಪ್ಟೆಂಬರ್ 21, 2021
21 °C
ರಾಜ್ಯ ಸರ್ಕಾರದ ಸಾಧನೆಗಳ ಪಟ್ಟಿ ಮುಂದಿಟ್ಟ ಬಿಜೆಪಿ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಡಳಿತವನ್ನು ಹೊಗಳಿದ ನಳಿನ್‌ ಕುಮಾರ್‌ ಕಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ನೆರೆ ಹಾವಳಿ, ಕೋವಿಡ್‌ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅದ್ಭುತ ಆಡಳಿತ ನೀಡಿದ್ದಾರೆ. ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಜನರ ಕಣ್ಣೀರು ಒರೆಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರ್ಕಾರ ಎರಡು ವರ್ಷಗಳಲ್ಲಿ ಮಾಡಿದ ಸಾಧನೆಗಳ ಪಟ್ಟಿಯನ್ನು ಮುಂದಿಟ್ಟರು. ಯಡಿಯೂರಪ್ಪ ಪಕ್ಷ ಕಟ್ಟಿದ ಬಗೆ, ಹೋರಾಟದ ಬದುಕಿನ ಕ್ಷಣಗಳನ್ನು ನೆನಪಿಸಿಕೊಂಡರು.

‘ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಯಡಿಯೂರಪ್ಪ ಪಾದಯಾತ್ರೆ ಮೂಲಕ ಪಕ್ಷ ಸಂಘಟಿಸಿದರು. ಹಳ್ಳಿ–ಹಳ್ಳಿಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದರು. ಜನರ ಕಷ್ಟಗಳನ್ನು ಸಮೀಪದಿಂದ ಕಂಡಿದ್ದ ಅವರಿಗೆ ಕಣ್ಣೀರು ಒರೆಸುವುದು ಕಷ್ಟವಾಗಲಿಲ್ಲ. ಎರಡು ವರ್ಷ ಸಮರ್ಥವಾಗಿ ಆಡಳಿತ ನಡೆಸಿದ ಅವರನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮೇಕೆದಾಟು, ಮಹದಾಯಿ ವಿವಾದಗಳನ್ನು ಬಗೆಹರಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಎರಡು ವರ್ಷಗಳ ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಶ್ವೇತಪತ್ರ ಹೊರಡಿಸಲು ಸಿದ್ಧರಿದ್ದೇವೆ. ಐದು ವರ್ಷದ ಆಡಳಿತದ ಬಗ್ಗೆ ಕಾಂಗ್ರೆಸ್‌ ಶ್ವೇತಪತ್ರ ಹೊರಡಿಸುತ್ತದೆಯೇ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದಾಗ ರಾಜ್ಯ ನೆರೆ ಹಾವಳಿಗೆ ಸಿಲುಕಿತ್ತು. ನೆರೆಪೀಡಿತ ಪ್ರದೇಶ ಸುತ್ತಿದ ಯಡಿಯೂರಪ್ಪ, ಸಂತ್ರಸ್ತರ ಕಣ್ಣೀರು ಒರೆಸಿದರು. ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ಘೋಷಿಸಿದರು. ಕೋವಿಡ್‌ ಸಂಕಷ್ಟದಲ್ಲಿ ಜನರಿಗೆ ವಿಶ್ವಾಸ ತುಂಬುವ ಕೆಲಸ ಮಾಡಿದರು. ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‌, ನೇಕಾರರು, ಮೀನುಗಾರರಿಗೂ ಪರಿಹಾರ ನೀಡಿದರು’ ಎಂದರು.

‘ಕೋವಿಡ್‌ ಆರಂಭದಲ್ಲಿ ಎರಡು ಪ್ರಯೋಗಾಲಯ ಮಾತ್ರ ರಾಜ್ಯದಲ್ಲಿದ್ದವು. ಈ ಪ್ರಯೋಗಾಲಯಗಳ ಸಂಖ್ಯೆ 145ಕ್ಕೆ ಏರಿಕೆಯಾಗಿದೆ. ಪ್ರತಿ ಜಿಲ್ಲೆಗೆ ಸರಾಸರಿ ಹತ್ತು ಆಮ್ಲಜನಕ ಟ್ಯಾಂಕರ್‌ಗಳನ್ನು ನೀಡಲಾಗಿದೆ. ವೆಂಟಿಲೇಟರ್‌, ಐಸಿಯು ಹಾಸಿಗೆ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಎಂಟು ವೈದ್ಯಕೀಯ ಕಾಲೇಜು ತೆರೆಯುವ ನಿರ್ಧಾರ ಕೈಗೊಳ್ಳಲಾಗಿದೆ. ಅವರೊಬ್ಬ ಜನನಾಯಕ ಎನ್ನುವಲ್ಲಿ ಅನುಮಾನವಿಲ್ಲ’ ಎಂದು ಹೊಗಳಿದರು.

‘ಎಚ್‌.ಡಿಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಾಸಕರ ನಿಧಿ ಬಿಡುಗಡೆ ಆಗಿರಲಿಲ್ಲ. ಯಡಿಯೂರಪ್ಪ ಅವರು ಎಲ್ಲ ಶಾಸಕರಿಗೂ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ರಸ್ತೆ, ಕುಡಿಯುವ ನೀರು ಸೌಲಭ್ಯಕ್ಕೆ ಅನುದಾನದ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ಅವರ ಆಡಳಿತದ ಕೊಡುಗೆಗಳನ್ನು ಸ್ಮರಿಸಲೇಬೇಕು’ ಎಂದು ಹೇಳಿದರು.

ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್‌, ಕೆ.ಪೂರ್ಣಿಮಾ, ಚಿದಾನಂದಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು