ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ, ಬೆಲೆ ಏರಿಕೆ, ತೆರಿಗೆ ವಸೂಲಿ: ಅಂಕಿ–ಅಂಶಗಳನ್ನು ನೀಡಿದ ಸಿದ್ದರಾಮಯ್ಯ

Last Updated 3 ಏಪ್ರಿಲ್ 2022, 15:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸರ್ಕಾರ ತನ್ನ ಎಲ್ಲಾ ವೈಫಲ್ಯಗಳನ್ನು ಮುಚ್ಚಿ ಹಾಕಲು ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿರ್ಬಂಧ, ಕಾಶ್ಮೀರಿ ಫೈಲ್ಸ್, ಹಲಾಲ್ ಮುಂತಾದವುಗಳ ಬಗ್ಗೆ ಮಾತ್ರ ಮಾತನಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

‘ಯುಗಾದಿ ಸಿಹಿ - ಕಹಿಗಳ ಹಬ್ಬ, ಆದರೆ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಚೀಲವೊಂದಕ್ಕೆ ₹150 ಏರಿಕೆ ಮಾಡುವ ಮೂಲಕ ನಾಡಿನ ರೈತರಿಗೆ ಬರೀ ಕಹಿಯನ್ನು ನೀಡಿದೆ. ದೇಶದ ರೈತರು ವರ್ಷದಲ್ಲಿ 1 ಕೋಟಿ 20 ಲಕ್ಷ ಟನ್ ರಸಗೊಬ್ಬರ ಬಳಕೆ ಮಾಡುತ್ತಾರೆ. ಕೇಂದ್ರ ಸರ್ಕಾರ ₹3,600 ಕೋಟಿ ಹಣವನ್ನು ರೈತರಿಂದ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದೆ. ಇದನ್ನು ಹಗಲು ದರೋಡೆ ಎಂದರೆ ತಪ್ಪೇನು?’ ಎಂದು ಪ್ರಶ್ನಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು 2022 ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು. ಕೀಟನಾಶಕಗಳ ಮೇಲೆ ಶೇ 18, ಕೃಷಿ ಯಂತ್ರೋಪಕರಣಗಳ ಮೇಲೆ ಶೇ 12, ರಸಗೊಬ್ಬರದ ಮೇಲೆ ಶೇ 5 ಜಿಎಸ್‌ಟಿ ವಿಧಿಸುವ ಮೂಲಕ ರೈತರಿಗೆ ಬರುತ್ತಿದ್ದ ಅಲ್ಪ ಆದಾಯಕ್ಕೂ ಕಲ್ಲು ಹಾಕಿದ್ದಾರೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಕಳೆದ ಬಾರಿ ರಾಗಿ ಬೆಳೆಗೆ ಉತ್ತಮ ಬೆಲೆ ಬಂದಿದ್ದರಿಂದ ಈ ಬಾರಿ ರಾಜ್ಯದ ರೈತರು 15 ಲಕ್ಷ ಮೆಟ್ರಿಕ್ ಟನ್ ರಾಗಿ ಬೆಳೆದಿದ್ದಾರೆ. ಇದರಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಖರೀದಿ ಮಾಡಿ ಎಂದು ರಾಗಿ ಬೆಳೆಗಾರರು ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರ ಮೌನವಾಗಿದೆ’ ಎಂದು ಆರೋಪಿಸಿದ್ದಾರೆ.

‘ರಾಜ್ಯ ಸರ್ಕಾರ ಕೇವಲ 2.1 ಮೆಟ್ರಿಕ್ ಲಕ್ಷ ಟನ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಕೊಳ್ಳಲು ನಿಗದಿ ಮಾಡಿ, ಈ ವರೆಗೆ 1.9 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದೆ. ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ರಾಗಿಗೂ, ಮಾರುಕಟ್ಟೆ ಬೆಲೆಗೂ ಸುಮಾರು ₹1,500 ವ್ಯತ್ಯಾಸವಿದೆ.ಈ ನಷ್ಟ ತುಂಬಿಕೊಡುವವರು ಯಾರು?’ ಎಂದು ಪ್ರಶ್ನಿಸಿದ್ದಾರೆ.

‘ಕಳೆದ 10 ದಿನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ರೂ. 7, ಮನೆಬಳಕೆ ಗ್ಯಾಸ್ ಬೆಲೆ ರೂ. 50, ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ರೂ. 250 ಜಾಸ್ತಿಯಾಗಿದೆ. ತೈಲ ಮಾರಾಟ ಮಾಡುವ ಸ್ವಾಯತ್ತ ಸಂಸ್ಥೆಗಳು ಅಂತರರಾಷ್ಟ್ರೀಯ ಕಚ್ಚಾ ತೈಲಬೆಲೆ ಏರಿಳಿತಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿವೆ ಎಂದು ಕೇಂದ್ರ ಸರ್ಕಾರ ಕುಂಟು ನೆಪ ಹೇಳುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಮಾಡುವುದು ಸ್ವಾಯತ್ತ ಸಂಸ್ಥೆಗಳಾಗಿದ್ದರೆ ಕಳೆದ ವರ್ಷ ನವೆಂಬರ್‌ನಿಂದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬರುವವರೆಗೆ ಅಂದರೆ ಮಾರ್ಚ್ ಹದಿನೈದರ ವರೆಗೆ ಏಕೆ ದರ ಏರಿಕೆ ಮಾಡಿಲ್ಲ ಎಂಬುದು ನನ್ನ ಪ್ರಶ್ನೆ?’ ಎಂದು ಟ್ವೀಟ್‌ ಮಾಡಿದ್ದಾರೆ.

'2014 ರ ಏಪ್ರಿಲ್ ನಲ್ಲಿ ಯುಪಿಎ ಸರ್ಕಾರದ ಕೊನೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ವೊಂದಕ್ಕೆ 108 ಡಾಲರ್ ಇತ್ತು, ಆಗ ಡೀಸೆಲ್ ಬೆಲೆ 55 ರೂಪಾಯಿ 49 ಪೈಸೆ, ಪೆಟ್ರೋಲ್ ಬೆಲೆ 71 ರೂಪಾಯಿ 41 ಪೈಸೆ ಇತ್ತು ಎನ್ನುವುದು‌‌ ನೆನಪಲ್ಲಿರಲಿ’ ಎಂದು ಹೇಳಿದ್ದಾರೆ.

‘ಯುಪಿಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ 3 ರೂಪಾಯಿ 46 ಪೈಸೆ, ಪೆಟ್ರೋಲ್ ಮೇಲೆ 9 ರೂಪಾಯಿ 20 ಪೈಸೆ ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪೆಟ್ರೋಲ್ ಮೇಲೆ 18 ರೂಪಾಯಿ 70 ಪೈಸೆ, ಡೀಸೆಲ್ ಮೇಲೆ 18 ರೂಪಾಯಿ 34 ಪೈಸೆ ಅಬಕಾರಿ ಸುಂಕ ಹೆಚ್ಚಿಸಿದ್ದಾರೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಶೇ 531, ಪೆಟ್ರೋಲ್ ಮೇಲೆ ಶೇ 203 ಏರಿಕೆ ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆ ಶೇ 35 ಇಂದ ಶೇ 23 ಗೆ ಇಳಿಸಿ, ಸಾಮಾನ್ಯ ಜನರ ಮೇಲೆ ತೆರಿಗೆ ಬರೆ ಹಾಕಲಾಗಿದೆ. ಇದೇನಾ ನರೇಂದ್ರ ಮೋದಿ ಅವರ ಅಚ್ಚೇದಿನ್?’ ಎಂದು ಕೇಳಿದ್ದಾರೆ.

‘ಕೇವಲ ಹೆಚ್ಚುವರಿ ಅಬಕಾರಿ ಸುಂಕವೊಂದನ್ನೇ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಕಳೆದ ಎಂಟು ವರ್ಷಗಳಲ್ಲಿ 26 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ. ನರೇಂದ್ರ ಮೋದಿ ಸರ್ಕಾರ ಕೊಳ್ಳೆ ಹೊಡೆದ ಈ ಹಣಕ್ಕೆ ಮೊದಲು ಲೆಕ್ಕ ಕೊಡಲಿ’ ಎಂದು ಒತ್ತಾಯಿಸಿದ್ದಾರೆ.

‘ಹಿಂದಿನ ಸರ್ಕಾರಗಳು ಸಾಲ ಮಾಡಿದ್ದವು. ಅದನ್ನು ತೀರಿಸಲು ಪೆಟ್ರೋಲ್ ಬೆಲೆ ಹೆಚ್ಚು ಮಾಡಬೇಕಾಯ್ತು ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಹಸಿ ಸುಳ್ಳು. ಬಿಜೆಪಿ ಸರ್ಕಾರ ಸಣ್ಣ ಸಾಲ ತೋರಿಸಿ ದೊಡ್ಡ ಸಾಗರವನ್ನೇ ಕೊಳ್ಳೆ ಹೊಡೆದಿದೆ’ ಎಂದು ಆರೋಪಿಸಿದ್ದಾರೆ.

‘ವಾಜಪೇಯಿ ಸರ್ಕಾರವೂ ಸೇರಿದಂತೆ ಹಿಂದಿನ ಸರ್ಕಾರಗಳು ಒಟ್ಟು ₹2 ಲಕ್ಷದ 20 ಸಾವಿರ ಕೋಟಿ ತೈಲ ಬಾಂಡ್ ಗಳ ಮೇಲೆ ಸಾಲ ಮಾಡಿದ್ದವು, ಅದರಲ್ಲಿ ನರೇಂದ್ರ ಮೋದಿ ಸರ್ಕಾರ ಪಾವತಿಸಿರುವ ಹಣ ₹3,500 ಕೋಟಿ ಮಾತ್ರ. ಆದರೆ ವಸೂಲಿ ಮಾಡಿದ್ದು 26 ಲಕ್ಷ ಕೋಟಿ ರೂಪಾಯಿ.‌ ಇದು‌ ಮೋಸ ಅಲ್ಲದೆ ಮತ್ತೇನು?’ ಎಂದು ಪ್ರಶ್ನಿಸಿದ್ದಾರೆ.

‘ಯುಪಿಎ ಸರ್ಕಾರ ಗ್ಯಾಸ್ ಮೇಲೆ ಶೇ 50 ಸಬ್ಸಿಡಿ ನೀಡುತ್ತಿದ್ದ ಪರಿಣಾಮ ಗ್ಯಾಸ್ ಬೆಲೆ ₹414 ಮಾತ್ರ ಇತ್ತು. ನರೇಂದ್ರ ಮೋದಿ ಅವರು 2020 ರಿಂದ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದ್ದರಿಂದ ಗ್ಯಾಸ್ ಬೆಲೆ ಈಗ ಸಾವಿರದ ಗಡಿಗೆ ಬಂದು ನಿಂತಿದೆ. ಅಚ್ಚೇದಿನ್ ಕಹಾ ಹೈ?’ ಎಂದು ಕೇಳಿದ್ದಾರೆ.

‘ಜನೌಷಧಿಗಳ ಬೆಲೆಯನ್ನು ಶೇ 10 ಏರಿಕೆ ಮಾಡಲಾಗಿದೆ. ಅಡುಗೆ ಎಣ್ಣೆ ಬೆಲೆ ₹220 ಆಗಿದೆ, ಕಬ್ಬಿಣ ಟನ್‌ಗೆ ₹90,000 ಆಗಿದೆ. ಈ ರೀತಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವುದರಿಂದ ಹಣದುಬ್ಬರ ಏರಿಕೆಯಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಪ್ರತೀ ಲೀಟರ್ ಡೀಸೆಲ್ ಮೇಲೆ ₹32, ಪೆಟ್ರೋಲ್ ಮೇಲೆ ₹47 ತೆರಿಗೆ ವಸೂಲಿ ಮಾಡುತ್ತಿವೆ. ಇದರಲ್ಲಿ ಅರ್ಧದಷ್ಟು ಕಡಿಮೆಯಾದರೂ ಕೋಟ್ಯಂತರ ಬಡ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು’ ಎಂದು ಟ್ವೀಟಿಸಿದ್ದಾರೆ.

‘ಬಿಜೆಪಿ ಸರ್ಕಾರ ತನ್ನ ಎಲ್ಲಾ ವೈಫಲ್ಯಗಳನ್ನು ಮುಚ್ಚಿ ಹಾಕಲು ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿರ್ಬಂಧ, ಕಾಶ್ಮೀರಿ ಫೈಲ್ಸ್, ಹಲಾಲ್ ಮುಂತಾದವುಗಳ ಬಗ್ಗೆ ಮಾತ್ರ ಮಾತನಾಡುತ್ತದೆ. ಜನರ ಕಷ್ಟಗಳ ಬಗ್ಗೆ ಬಿಜೆಪಿಯದು ದಿವ್ಯ ಮೌನ’ ಎಂದು ಟೀಕಿಸಿದ್ದಾರೆ.

‘ಕೇಂದ್ರ ಸರ್ಕಾರ ಎಪಿಎಂ‌ಸಿ ಕಾಯ್ದೆ ವಾಪಾಸು ಪಡೆದುಕೊಂಡರೂ ರಾಜ್ಯದಲ್ಲಿ ಏಕೆ ಕಾಯ್ದೆ ವಾಪಾಸು ಪಡೆದಿಲ್ಲ? ವರ್ಷಕ್ಕೆ ₹600 ಕೋಟಿ ಆದಾಯ ಗಳಿಸುತ್ತಿದ್ದ ರಾಜ್ಯದ ಎಪಿಎಂಸಿಗಳು ಇಂದು ಆದಾಯವಿಲ್ಲದೆ ಶಾಶ್ವತವಾಗಿ ಬಾಗಿಲು ಮುಚ್ಚಲು ಸಿದ್ಧವಾಗಿವೆ. ಇದಕ್ಕೆ ಹೊಣೆ ಯಾರು?’ ಎಂದು ಪ್ರಶ್ನಿಸಿದ್ದಾರೆ.

ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ನೋಟು ರದ್ದತಿ, ಜಿಎಸ್‌ಟಿ ಜಾರಿ ಮೊದಲು 11 ಕೋಟಿ ಉದ್ಯೋಗಗಳು ಇದ್ದವು, ಈಗದು 2.5 ಕೋಟಿಗೆ ಇಳಿದಿದೆ. ಇಂದು ಈ ಬಗ್ಗೆ ಚರ್ಚೆಯಾಗಬೇಕಿದೆ, ಹಲಾಲ್- ಜಟ್ಕಾ ಬಗ್ಗೆ ಅಲ್ಲ. ಮುಖ್ಯಮಂತ್ರಿಗಳು ಕೊರೊನಾ ನಿರ್ವಹಣೆಗೆ ಸರ್ಕಾರ ₹15,000 ಕೋಟಿ ಖರ್ಚು ಮಾಡಿದೆ ಎನ್ನುತ್ತಿದ್ದಾರೆ. ಕೇರಳ ಕೊರೊನಾ ನಿರ್ವಹಣೆಗೆ ₹40,000 ಕೋಟಿ, ತಮಿಳುನಾಡಿನವರು ₹30,000 ಕೋಟಿ ಖರ್ಚು ಮಾಡಿದ್ದಾರೆ. ಆ ರಾಜ್ಯಗಳೆಲ್ಲಾ ದಿವಾಳಿಯಾಗಿದ್ದಾವೆಯೇ’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT