ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲ್ಫ್ ದೇಶಗಳಲ್ಲಿನ ಭಾರತೀಯರನ್ನು ಸುಡುತ್ತಿರುವ ಬಿಜೆಪಿ ರಾಜಕಾರಣ: ಕಾಂಗ್ರೆಸ್

ಅಕ್ಷರ ಗಾತ್ರ

ಬೆಂಗಳೂರು: ಪ್ರವಾದಿ ಮಹಮ್ಮದ್‌ ಕುರಿತ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ಭಾರತದ ರಾಯಭಾರಿಯೊಬ್ಬರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಥಾ ಅವಮಾನ ಆಗುತ್ತಿರುವುದು ಇದೇ ಮೊದಲು. ಬಿಜೆಪಿಯವರ ದ್ವೇಷ ರಾಜಕಾರಣದ ಫಲ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತಿದೆ. ವಿಶ್ವಗುರುವೆಂದು ವಾಟ್ಸ್‌ಆ್ಯಪ್ ಅಲ್ಲಿ ಬೊಗಳೆ ಬಿಡುವುದಲ್ಲ ಆಡಳಿತದ ಮೂಲಕ ಸಾಬೀತು ಪಡಿಸಬೇಕು. ಒಟ್ಟಾರೆ ಮೋದಿ ಸರ್ಕಾರ ಜಗತ್ತಿನ ಮುಂದೆ ಭಾರತದ ಮಾನ ಕಳೆಯುತ್ತಿದೆ' ಎಂದು ಹರಿಹಾಯ್ದಿದೆ.

‘ಬಿಜೆಪಿಯವರ ಈ ಕೊಳಕು ರಾಜಕಾರಣದ ಪರಿಣಾಮ ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ಕೇಳಿ ಬರುತ್ತಿದೆ. ಪ್ರಧಾನಿ ವಿದೇಶ ಸುತ್ತಿದರೇ ವಿನಃ ವಿದೇಶಾಂಗ ವ್ಯವಹಾರದ ಜ್ಞಾನವಂತೂ ಅವರಿಗಾಗಲಿ, ಅವರ ಸರ್ಕಾರಕ್ಕಾಗಲಿ ಇದ್ದಂತಿಲ್ಲ. ಯಾವುದಕ್ಕೂ ಮೋದಿಯವರು ಆಡಳಿತದ ಪಾಠವನ್ನು ಮನಮೋಹನ್ ಸಿಂಗ್ ಅವರಿಂದ ಹೇಳಿಸಿಕೊಂಡರೆ ಉತ್ತಮ’ ಎಂದು ಕಾಂಗ್ರೆಸ್‌ ತಿಳಿಸಿದೆ.

‘ಬಿಜೆಪಿಯ ಸದಸ್ಯರೊಬ್ಬರು ಪ್ರವಾದಿ ಮಹಮ್ಮದರ ಬಗ್ಗೆ ಕೆಳಮಟ್ಟದ ಹೇಳಿಕೆ ನೀಡಿದ ಬೆನ್ನಲ್ಲೇ ಗಲ್ಫ್ ರಾಷ್ಟ್ರಗಳಲ್ಲಿನ ಸೂಪರ್, ಹೈಪರ್ ಮಾರ್ಕೆಟ್‍ಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಅಲ್ಲಿನ ಜನ ತಿರಸ್ಕರಿಸುತ್ತಿದ್ದಾರೆ. ಇದು ವಿದೇಶಗಳಲ್ಲಿ ಭಾರತಕ್ಕೆ ಆಗುತ್ತಿರುವ ಹೀನಾಯ ಅವಮಾನ. ಭಾರತ ಇಂಥ ಅವಮಾನ ಅನುಭವಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು’ ಎಂದು ಟೀಕಿಸಿದೆ.

‘ಭಾರತೀಯ ಉತ್ಪನ್ನಗಳ ಬಹಿಷ್ಕಾರ ಒಂದೆಡೆಯಾದರೆ ಇನ್ನೂ ಕತಾರ್ ಮತ್ತು ಕುವೈತ್ ದೇಶಗಳು ಅಲ್ಲಿನ ಭಾರತೀಯ ರಾಯಭಾರಿಗಳಿಗೆ ಛೀಮಾರಿ ಹಾಕಿವೆ. ಒಂದು ಕಡೆ ಆತ್ಮನಿರ್ಭರ್ ಹೆಸರಲ್ಲಿ ಫೋಟೊಶೂಟ್ ಮಾಡಿಸಿಕೊಳ್ಳುವುದು ಮತ್ತೊಂದು ಕಡೆ ದ್ವೇಷ ಉಗುಳಿ ಅದೇ ಆತ್ಮನಿರ್ಭರತೆಯನ್ನು ಹಾಳುಗೆಡವಿ ವಿದೇಶಗಳಲ್ಲಿ ಭಾರತದ ಮಾನ ಕಳೆಯುವುದೇ ಬಿಜೆಪಿಗರ ಸಾಧನೆಯಾಗಿದೆ’ ಎಂದು ಕೆಪಿಸಿಸಿ ಹೇಳಿದೆ.

‘ತನ್ನ ಮನೆಯೊಳಗಣ ಕಿಚ್ಚು ತನ್ನ ಮನೆಯ ಸುಡುವುದಲ್ಲದೆ ನೆರೆಮನೆಯ ಸುಡುವುದೆ ಕೂಡಲಸಂಗಮದೇವಾ ಎಂಬ ಬಸವಣ್ಣನವರ ವಚನದಂತೆ ಬಿಜೆಪಿಗರ ದ್ವೇಷ ರಾಜಕಾರಣ ಗಲ್ಫ್ ರಾಷ್ಟ್ರಗಳಲ್ಲಿನ ಭಾರತೀಯರನ್ನು ಸುಡುತ್ತಿದೆ. ಗಲ್ಫ್ ದೇಶಗಳಲ್ಲಿ ಬದುಕುತ್ತಿರುವ 2 ಲಕ್ಷ ಭಾರತೀಯರ ಜೀವನದ ಮೇಲೆ ಬಿಜೆಪಿಗರ ದ್ವೇಷ ರಾಜಕಾರಣ ಕರಿನೆರಳು ತರಲಿದೆ’ ಎಂದು ವಾಗ್ದಾಳಿ ನಡೆಸಿದೆ.

‘ಈಗಾಗಲೇ ಭಾರತದ ರಫ್ತಿನ ಮೇಲೆ, ಭಾರತೀಯ ವಸ್ತುಗಳ ಮೇಲೆ ನಿಷೇಧ ಹೇರಬೇಕೆಂಬ ಕೂಗು ಕೇಳಿ ಬರುತ್ತಿದೆ. ಭಾರತದ ರಫ್ತಿನ ಪ್ರಮಾಣ ಆಮದು ಪ್ರಮಾಣಕ್ಕಿಂತ ಕಡಿಮೆ ಇದೆ. ಸದ್ಯದ ಸ್ಥಿತಿಯಲ್ಲಿ ಆಮದು ಹೆಚ್ಚಾಗಿ ರಫ್ತಿನ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಇಂಥ ಸಮಯದಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ನಿಷೇಧ ಹೇರಿದರೆ ಭಾರತ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಎಚ್ಚರಿಸಿದೆ.

‘ಭಾರತದ ಸಾಲದ ಪ್ರಮಾಣ ವಿಪರೀತ ಹೆಚ್ಚಾಗಿರುವ ಈ ಕಾಲದಲ್ಲಿ ಭಾರತ ನಿಟ್ಟುಸಿರು ಬಿಡುವುದಕ್ಕೆ ಸಾಧ್ಯವಾಗಿರುವುದು ವಿದೇಶಿ ವಿನಿಮಯ ಮೀಸಲು ಸಂಗ್ರಹ ಹೆಚ್ಚಿರುವುದರಿಂದ. ಇದರಲ್ಲಿ ಯುಎಇ ಮತ್ತು ಸೌದಿ ಅರೇಬಿಯಾ ದೇಶಗಳ ಕೊಡುಗೆ ಕೂಡ ಅಪಾರ ಪ್ರಮಾಣದ್ದು. ಈ ಎರಡು ದೇಶಗಳು ಭಾರತದಲ್ಲಿ ಅಪಾರ ಪ್ರಮಾಣದ ಹೂಡಿಕೆ ಮಾಡಿವೆ’ ಎಂದು ಟ್ವೀಟಿಸಿದೆ.

‘ಬಿಜೆಪಿಯವರ ಈ ಕೊಳಕು ದ್ವೇಷ ರಾಜಕಾರಣದ ಫಲವಾಗಿ ಈ ದೇಶಗಳೇನಾದರೂ ತಮ್ಮ ಬಂಡವಾಳ ಹಿಂಪಡೆದರೆ ಭಾರತದ ಗತಿ ಏನು? ಈಗಾಗಲೇ ಕೇಂದ್ರ ಬಿಜೆಪಿ ಸರ್ಕಾರ ಭಾರತದ ಆರ್ಥಿಕತೆಯನ್ನು ಮಕಾಡೆ ಮಲಗಿಸಿದೆ. ಇಂಥ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳು ಭಾರತದಿಂದ ತಮ್ಮ ಬಂಡವಾಳ ಹಿಂಪಡೆದರೆ ಶ್ರೀಲಂಕಾ ಪರಿಸ್ಥಿತಿ ಭಾರತಕ್ಕೆ ಎದುರಾಗಲಿದೆ’ ಎಂದು ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT