ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ನಾಟಕ ಶಾಲೆ: 4 ತಿಂಗಳಾದರೂ ಸಂದರ್ಶನ ಇಲ್ಲ

ಎನ್‌ಎಸ್‌ಡಿ: ತರಗತಿ ಆರಂಭಿಸಲು ಕೋವಿಡ್ ಅಡ್ಡಿ l ಗೊಂದಲದಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು
Last Updated 3 ಡಿಸೆಂಬರ್ 2020, 20:23 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರ ನಡೆಸುವ ಒಂದು ವರ್ಷದ ಅಭಿನಯ ಕೋರ್ಸ್‌ಗೆ ದೇಶದ ವಿವಿಧೆಡೆಯಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದಿವೆ. ಆದರೆ, ಕೋವಿಡ್ ಕಾರಣ ಈವರೆಗೂ ಸಂದರ್ಶನ ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಎನ್ಎಸ್‌ಡಿ ಬೆಂಗಳೂರು ಕೇಂದ್ರವು ಸಂಗೀತ, ನೃತ್ಯ, ಸಾಹಸಕಲೆ, ಅಭಿನಯ ಸೇರಿದಂತೆ ವಿವಿಧ ಕೌಶಲಗಳನ್ನು ಒಂದು ವರ್ಷದ ಅವಧಿಯಲ್ಲಿ ಕಲಿಸುತ್ತಿದೆ. ಈ ಕೋರ್ಸ್ ಪ್ರವೇಶಕ್ಕೆ ದಕ್ಷಿಣ ಭಾರತದ ರಾಜ್ಯಗಳ ಅಭ್ಯರ್ಥಿಗಳ ಜತೆಗೆ ಉತ್ತರ ಭಾರತದ ಅಭ್ಯರ್ಥಿಗಳು ಕೂಡ ಸ್ಪರ್ಧಿಸುತ್ತಿದ್ದಾರೆ. 2020–21ನೇ ಸಾಲಿನ ಪ್ರವೇಶಕ್ಕೆ ಜುಲೈನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಬಾರಿ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 150ಕ್ಕೂ ಅಧಿಕ ಅರ್ಜಿಗಳು ಉತ್ತರ ಭಾರತದ ರಾಜ್ಯಗಳಿಂದ ಬಂದಿದ್ದವು.

ಪ್ರವೇಶಾತಿ ಪ್ರಕ್ರಿಯೆ ನಡೆಸಿ, ತರಗತಿ ಆರಂಭಿಸಲು ಅವಕಾಶ ನೀಡುವಂತೆ ಇಲ್ಲಿನ ಕೇಂದ್ರದ ಮುಖ್ಯಸ್ಥರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಕೊರೊನಾ ಸೋಂಕು ದೆಹಲಿ ಸೇರಿದಂತೆ ವಿವಿಧ ರಾಜ್ಯಗಲ್ಲಿ ಮತ್ತೆ ಏರುಗತಿ ಪಡೆದ ಕಾರಣ ಕೇಂದ್ರ ಸಂಸ್ಕೃತಿ ಸಚಿವಾಲಯವು ಎನ್‌ಎಸ್‌ಡಿ ಕೇಂದ್ರಗಳಿಗೆ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಿಲ್ಲ. ಇದರಿಂದಾಗಿ ಪ್ರಸಕ್ತ ಸಾಲಿನ ಪ್ರವೇಶಾತಿಗೆ ಬಂದಿರುವ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆ ಕೂಡ ನಡೆದಿಲ್ಲ.

ತರಗತಿ ನಡೆಸುವುದು ಸವಾಲು: ಕೇಂದ್ರ ಸರ್ಕಾರವು ಒಂದು ವೇಳೆ ಜನವರಿಯಿಂದ ತರಗತಿಗಳನ್ನು ಆರಂಭಿಸಲು ಅವಕಾಶ ನೀಡಿದರೂ ಮುಂದಿನ ಸಾಲಿನ ಪ್ರವೇಶಾತಿ ಪ್ರಕ್ರಿಯೆಗೆ ಸಮಸ್ಯೆಯಾಗಲಿದೆ. ಪ್ರಾಯೋಗಿಕ ಶಿಕ್ಷಣ ಆಗಿರುವ ಕಾರಣ ಅಲ್ಪಾವಧಿಯಲ್ಲಿ ಕೋರ್ಸ್ ಪೂರ್ಣಗೊಳಿಸಲು ಸಾಧ್ಯ
ವಾಗದು. ಇದರಿಂದಾಗಿ ಕೇಂದ್ರ ಸರ್ಕಾರ ಅನುಮತಿ ನೀಡಲು ಇನ್ನಷ್ಟು ದಿನ ವಿಳಂಬ ಮಾಡಿದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮುಂದಿನ ಸಾಲಿಗೆ ಪರಿಗಣಿಸಲು ಎನ್‌ಎಸ್‌ಡಿ ಬೆಂಗಳೂರು ಕೇಂದ್ರ ಚಿಂತನೆ ನಡೆಸಿದೆ.

‘ಈ ಬಾರಿ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ. ತರಗತಿ ಆರಂಭಿಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. 10 ತಿಂಗಳ ಕೋರ್ಸ್‌ನಲ್ಲಿ 4 ತಿಂಗಳು ಕಳೆದಿವೆ. ಉಳಿದ ಅವಧಿಯಲ್ಲಿ ಅಭಿನಯದ ತರಬೇತಿ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವಕಾಶ ನೀಡಿದಲ್ಲಿ ಸಂದರ್ಶನ ಪ್ರಕ್ರಿಯೆ ನಡೆಸಿ, ಮುಂದಿನ ಸಾಲಿಗೆ ಪರಿಗಣಿಸಬೇಕಾಗುತ್ತದೆ’ ಎಂದು ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT