ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಇಂದಿನಿಂದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಜಾರಿ

ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಹಸಿರು ನಿಶಾನೆ
Last Updated 23 ಆಗಸ್ಟ್ 2021, 11:52 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಸೋಮವಾರದಿಂದ (ಆ. 23) ಜಾರಿಗೆ ಬಂದಿದೆ. ಆ ಮೂಲಕ, ಕರ್ನಾಟಕ ಇಡೀ ದೇಶದಲ್ಲಿ ಈ ನೀತಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ದೆಹಲಿಯಿಂದಲೇ ವರ್ಚುವಲ್ ಮೂಲಕ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕಲಿಕೆಗೆ ಉನ್ನತ ಶಿಕ್ಷಣ ವಿಭಾಗದಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಪ್ರದಾನ್‌ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಹೊಸ ಮನ್ವಂತರ ಆರಂಭವಾಗಿದೆ’ ಎಂದೂ ಘೋಷಿಸಿದರು. ‘ಈ ನೀತಿಯು, ಬಹುಶಿಸ್ತಿಯ ಹಾಗೂ ಬಹುಆಯ್ಕೆಯ ಕಲಿಕೆಗೆ ಉತ್ತೇಜನ ನೀಡಲಿದೆ. ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯ ಮುಕ್ತವಾಗಿ ಅಧ್ಯಯನ ಮಾಡಬಹುದು’ ಎಂದರು.

ಮುಖ್ಯಮಂತ್ರಿ ಮಾತನಾಡಿ, ‘ಅ. 1ರಿಂದ ಪದವಿ ಮೊದಲ ವರ್ಷದ ತರಗತಿಗಳು ಆರಂಭವಾಗಲಿವೆ. ಮೊದಲ ವರ್ಷದ ಪದವಿಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೂ ಸರ್ಕಾರದ ವತಿಯಿಂದ ಉಚಿತವಾಗಿ ಟ್ಯಾಬ್ಲೆಟ್ ಪಿಸಿ ನೀಡಲಾಗುವುದು. ಅಲ್ಲದೆ, ರಾಜ್ಯದ ಡಿಜಿಟಲ್ ನೀತಿ ಹಾಗೂ ಸಂಶೋಧನೆ- ಅಭಿವೃದ್ಧಿ ನೀತಿಯನ್ನೂ ಈ ವರ್ಷದಿಂದಲೇ ಜಾರಿ ಮಾಡಲಾಗುವುದು’ ಎಂದು ಪ್ರಕಟಿಸಿದರು.

‘ಮುಂದಿನ ದಿನಗಳಲ್ಲಿ ಡಿಜಿಟಲ್ ಕಲಿಕೆ ಉತ್ತೇಜಿಸಲು, ಅಂತರ್ಜಾಲದಿಂದ ಪ್ರತಿ ಹಳ್ಳಿಯನ್ನು ಬೆಸೆಯಲು ಸರ್ಕಾರ ಬದ್ಧವಾಗಿದ್ದು, ಈ ಉದ್ದೇಶದಿಂದ ಹೊಸ ಡಿಜಿಟಲ್ ನೀತಿ ಜಾರಿಗೆ ತರಲಾಗುವುದು’ ಎಂದರು.

‘ಶೈಕ್ಷಣಿಕವಾಗಿ ಅದರಲ್ಲೂ ವೈಜ್ಞಾನಿಕ ಅಧ್ಯಯನ ಕ್ಷೇತ್ರದಲ್ಲಿ ಮೊದಲಿನಿಂದಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಹೀಗಾಗಿ ನೂತನ ʼಸಂಶೋಧನೆ ಮತ್ತು ಅಭಿವೃದ್ಧಿ ನೀತಿʼಯನ್ನು ಜಾರಿಗೆ ತರಲಾಗುವುದು. ಈ ಮೂಲಕ ವೈಜ್ಞಾನಿಕ ಸಂಶೋಧನೆ, ಅಭಿವೃದ್ಧಿಗೆ ಅತಿ ಹೆಚ್ಚು ಆದ್ಯತೆ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.

ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಗೆ ಚಾಲನೆ: ‘ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ‘ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆʼ ಎಂಬ ವಿದ್ಯಾರ್ಥಿಗಳ ದಾಖಲಾತಿ ವ್ಯವಸ್ಥೆಗೂ ಮುಖ್ಯಮಂತ್ರಿ ಚಾಲನೆ ನೀಡಿದರು.

ವೆಬ್ ಮತ್ತು ಸಹಾಯವಾಣಿ: ನೀತಿಯ ಜಾರಿ ಸಂದರ್ಭದಲ್ಲಿ ಯಾವುದೇ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಕಾಲೇಜು ಶಿಕ್ಷಣ ಇಲಾಖೆ ಶಿಕ್ಷಣ ನೀತಿಗೆ ಸಂಬಂಧಿಸಿದ ವೆಬ್‌ಸೈಟ್‌ ಮತ್ತು ಸಹಾಯವಾಣಿ (080-24486666) ರೂಪಿಸಿದೆ.

ಒಪ್ಪಂದ: ಹೊಸ ನೀತಿಯಡಿ ಉನ್ನತ ಶಿಕ್ಷಣವನ್ನು ಜಾಗತೀಕರಣಗೊಳಿಸುವ ಉದ್ದೇಶದಿಂದ ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಂಟಿಗೋಮೆರಿ ಕಮ್ಯುನಿಟಿ ಕಾಲೇಜಿನ ಜತೆ ಕಾಲೇಜು ಶಿಕ್ಷಣ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಈ ದಾಖಲೆ ಪತ್ರಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅನಾವರಣಗೊಳಿಸಿದರು.

ನೀತಿ ನಿರೂಪಕರಿಗೆ ಸನ್ಮಾನ: ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಕಸ್ತೂರಿ ರಂಗನ್, ಶಿಕ್ಷಣ ತಜ್ಞರಾದ ಪ್ರೊ.ಎಂ.ಕೆ. ಶ್ರೀಧರ್, ಪ್ರೊ.ಟಿ.ವಿ. ಕಟ್ಟೀಮನಿ ಮತ್ತು ಅನುರಾಗ್ ಬೇಹರ್ ಅವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ , ಕಾಲೇಜು ಇಲಾಖೆಯ ಆಯುಕ್ತ ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT