ಶನಿವಾರ, ಸೆಪ್ಟೆಂಬರ್ 19, 2020
22 °C

ನವೀನ್ ಕಾಂಗ್ರೆಸ್ ಕಾರ್ಯಕರ್ತ: ಡಿಕೆಶಿಗೆ ತಿರುಗೇಟು ಕೊಟ್ಟ ಡಿಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಮತ್ತು ಕಾವಲ್‌ ಭೈರಸಂದ್ರದಲ್ಲಿ ನಡೆದ ಗಲಭೆ ಸದ್ಯಕ್ಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಫೇಸ್‌ಬುಕ್‌ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಯುವಕ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಗ್ಗೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರ ನಡೆ ಸರಿ ಇಲ್ಲ. ನವೀನ್ ಬಿಜೆಪಿ ಕಾರ್ಯಕರ್ತ ಅಲ್ಲ. ಕಾಂಗ್ರೆಸ್ ಕಾರ್ಯಕರ್ತ. ಈ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ಕೊರತೆ ಇದೆ. ಒಂದು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ಮಾತಾಡೋದು ಸರಿಯಲ್ಲ ಎಂದರಲ್ಲದೆ, ಶಿವಕುಮಾರ್ ಅವರಿದ್ದ ಪೋಸ್ಟರ್’ನಲ್ಲಿ ನವೀನ್  ಇರುವ ಫೋಟೋವನ್ನು ಪ್ರದರ್ಶನ ಮಾಡಿದರು.

ಸರಕಾರ ಮತ್ತು ಬಿಜೆಪಿ ವಿರುದ್ಧ ಡಿಕೆಶಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ಮತ್ತು ಎಸ್ ಡಿಪಿಐ ನಡುವೆ  ಗುದ್ದಾಟ ಪ್ರಾರಂಭವಾಗಿದೆ. ಗಲಭೆ ಉಂಟಾಗಲು ಇದೇ ಕಾರಣ. ಅದನ್ನು ಮುಚ್ಚಿಟ್ಟುಕೊಳ್ಳಲು ಅವರು ಹೀಗೆ ಮಾಡುತ್ತಿದ್ದಾರೆ. ಪ್ರತಿ ಹಬ್ಬಕ್ಕೂ ನವೀನ್ ಪೋಸ್ಟ್ ಹಾಕ್ತಿದ್ದ. ಆತನ ಫೇಸ್ ಬುಕ್ ನೋಡಿದರೆ ನಿಮಗೆ ಎಲ್ಲಾ ಗೊತ್ತಾಗುತ್ತದೆ. ನವೀನ್ ‌ಕಾಂಗ್ರೆಸ್ ಕಾರ್ಯಕರ್ತ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಗಲಭೆಕೋರರಿಂದಲೇ ನಷ್ಟ ಭರ್ತಿ: ಗಲಭೆ ಮಾಡಿದ ಕಿಡಿಗೇಡಿಗಳಿಂದಲೇ ಆಗಿರುವ ನಷ್ಟವನ್ನು ವಸೂಲಿ ಮಾಡಲಾಗುವುದು. ದೊಂಬಿ ಎಬ್ಬಿಸಿ ಸರಕಾರಿ ಆಸ್ತಿಗಳನ್ನು ಹಾನಿ ಮಾಡಿದ ಕಿಡಿಗೇಡಿಗಳನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಪೊಲೀಸರ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಪೊಲೀಸ್ ಠಾಣೆಗೆ ಬೆಂಕಿ ಇಡಲಾಗಿದೆ. ಅನೇಕ ಬಡವರು ತಮ್ಮ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಈ ಎಲ್ಲ ನಷ್ಟವನ್ನು ದುಷ್ಕರ್ಮಿಗಳಿಂದಲೇ ವಸೂಲಿ ಮಾಡುತ್ತೇವೆ. ಪೈಸೆಪೈಸೆಯೂ ವಸೂಲಾಗುತ್ತದೆ. ಇದಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿ ತರುವ ಕೆಲಸವನ್ನು ಸರಕಾರ ಮಾಡುತ್ತದೆ ಎಂದು ಡಿಸಿಎಂ ಸ್ಪಷ್ಟವಾಗಿ ಹೇಳಿದರು.

ಸಂಚು ರೂಪಿಸಿ ದಾಳಿ: ಗಲಭೆಕೋರರು ಪೂರ್ವಯೋಜಿತವಾಗಿ ದಾಳಿ ನಡೆಸಿದ್ದಾರೆ. ಯಾರ ಮಾತನ್ನು ಕೇಳದೆ ಉದ್ರೇಗಕ್ಕೆ ಒಳಗಾಗಿ ಬೆಂಕಿ ಇಟ್ಟಿದ್ದಾರೆ. ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಡಲು ಹೋಗಿದ್ದು ನೋಡಿದರೆ ಪೊಲೀಸ್ ಸಿಬ್ಬಂದಿಯನ್ನು ಕೊಲ್ಲುವುದು ಅವರ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗಿ ತಿಳಿಯುತ್ತೆ. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಮತ್ತೆ ಎಲ್ಲೂ ಗಲಭೆ ಅಗಿಲ್ಲ. ಸರ್ಕಾರ ಮತ್ತಷ್ಟು ಕಟ್ಟೆಚ್ಚರ ವಹಿಸಿದೆ. ಗಲಭೆಗೆ ಕಾರಣರಾದವರನ್ನು ಹುಡುಕುವ ಕೆಲಸ ಇನ್ನೂ ನಡೆಯುತ್ತಿದೆ. ಮತ್ತೆ ಹೀಗೆ ಆಗದಂತೆ ಎಲ್ಲವನ್ನು ಕ್ಲೀನ್ ಮಾಡಲಾಗುತ್ತಿದೆ. ಇನ್ನೆಂದೂ ಇಂಥ ಗಲಭೆಗಳಿಗೆ ಅವಕಾಶವೇ ಇಲ್ಲದಂತೆ ಬಿಗಿ ಮಾಡಲಾಗುತ್ತಿದೆ. ಜತೆಗೆ, ಜಿಹಾದಿ ಕೆಲಸ ಮಾಡೋದಕ್ಕೂ ನಮ್ಮ ಸರಕಾರ ಅವಕಾಶ ಕೊಡೊದಿಲ್ಲ ಎಂದು ಡಿಸಿಎಂ ಖಡಕ್ಕಾಗಿ ಹೇಳಿದರು.

ಬ್ಯಾನ್ ಬಗ್ಗೆಯೂ ಪರಿಶೀಲನೆ: ಎಸ್‌ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಹಿಂದಿನ ಘಟನೆಗಳಿಗೂ ಸಾಕ್ಷಿಗಳು ಇವೆ. ಅದರ ಹಿನ್ನೆಲೆಯಲ್ಲಿ  ಇಂತಹ ಸಂಘಟನೆಗಳನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸರಕಾರ ದಿಟ್ಟ ಕ್ರಮ ತೆಗೆದುಕೊಳ್ಳುತ್ತದೆ. ಅಗತ್ಯ ಸಾಕ್ಷ್ಯಗಳ ಸಂಗ್ರಹ ಮಾಡಿದ ನಂತರ ಈ  ಸಂಘಟನೆಯನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಜೊತೆಯಲ್ಲೂ ಆರೋಪಿ ಪಾಷಾ ಕಾಣಿಸಿಕೊಂಡಿರುವ ಫೋಟೋ ಬಗ್ಗೆಯೂ ತನಿಖೆ ನಡೆಯುತ್ತಿದೆ. ಎಲ್ಲ ಕೋನಗಳಲ್ಲೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖೆಯಲ್ಲಿ ಎಲ್ಲವೂ ತಿಳಿಯಲಿದೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು