ಗುರುವಾರ , ಏಪ್ರಿಲ್ 22, 2021
22 °C
* ಸ್ಯಾಂಡಲ್‌ವುಡ್‌ನಲ್ಲಿ ಅವ್ಯಾಹತವಾದ ‘ಡ್ರಗ್ಸ್‌’ ದಂಧೆ  * ಧಾರಾವಾಹಿ ಕಲಾವಿದೆಯರಿಗೂ ಸರಬರಾಜು

ಅಂದ, ಯೌವನಕ್ಕಾಗಿ ಡ್ರಗ್ಸ್: ನಟಿಯರಿಂದಲೇ ಹೆಚ್ಚು ಬೇಡಿಕೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಎನ್ನಲಾದ ‘ಡ್ರಗ್ಸ್‌’ ದಂಧೆಯಲ್ಲಿ ಅಗೆದಷ್ಟು ಮಾಹಿತಿ ಹೊರಬೀಳುತ್ತಿದೆ. ‘ನಟರಿಗಿಂತ ನಟಿಯರಿಗೇ ಹೆಚ್ಚು ಡ್ರಗ್ಸ್ ಪೂರೈಕೆ ಆಗುತ್ತಿದೆ’ ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ.

ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು ಬೆಂಗಳೂರಿನ ಕಲ್ಯಾಣನಗರದಲ್ಲಿರುವ ‘ರಾಯಲ್ ಸೂಟ್ಸ್ ಹೋಟೆಲ್’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ ಮೇಲೆ ದಾಳಿ ಮಾಡಿ ಡ್ರಗ್ಸ್ ದಂಧೆ ಭೇದಿಸಿದ್ದಾರೆ. ದಂಧೆಯ ಕಿಂಗ್‌ಪಿನ್ ಎನ್ನಲಾದ ಡಿ. ಅನಿಕಾ, ಹಲವು ನಟ–ನಟಿಯರು ಹಾಗೂ ಸಂಗೀತ ನಿರ್ದೇಶಕರ ಹೆಸರುಗಳನ್ನು ಬಾಯ್ಬಟ್ಟಿದ್ದಾಳೆ. ಆಕೆ ಸಹಚರರಾದ ಮೊಹಮ್ಮದ್ ಅನೂಪ್ ಹಾಗೂ ರಾಜೇಶ್ ರವೀಂದ್ರನ್ ಸಹ ಗ್ರಾಹಕರ ಪಟ್ಟಿಯನ್ನೇ ಎನ್‌ಸಿಬಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಡ್ರಗ್ಸ್ ಮಾತ್ರೆಗಳಿಗೆ ನಟರಿಗಿಂತ ನಟಿಯರಿಂದಲೇ ಬೇಡಿಕೆ ಜಾಸ್ತಿ ಇದೆ. ಹೀಗಾಗಿ, ದಂಧೆಯನ್ನು ಮಹಿಳೆಯೇ ಆದ ಅನಿಕಾ ನಡೆಸುತ್ತಿದ್ದಳು. ಕನ್ನಡದ ಹೆಸರಾಂತ ನಟಿಯರು, ಧಾರಾವಾಹಿ ಕಲಾವಿದೆಯರು ಸಹ ‘ಡ್ರಗ್ಸ್‌’ಗೆ ಕಾಯಂ ಗ್ರಾಹಕರಾಗಿದ್ದಾರೆ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಡಾರ್ಕ್‌ನೆಟ್ ಹಾಗೂ ಬಿಟಾ ಕಾಯಿನ್ ಮೂಲಕ ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದೊಂದು ಅಂತರರಾಜ್ಯ ಜಾಲವೆಂಬ ಶಂಕೆ ಇದ್ದು, ಅದೇ ಆಯಾಮದಲ್ಲೇ ಎನ್‌ಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಅಂದ ಹೆಚ್ಚಿಸಲು ಡ್ರಗ್ಸ್‌; ಕೆಲ ನಟಿಯರು, ತಾವು ಅಂದವಾಗಿ ಕಾಣಬೇಕು ಹಾಗೂ ಯೌವನ ಹಾಗೇ ಇರಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಡ್ರಗ್ಸ್ ತೆಗೆದುಕೊಳ್ಳಬೇಕೆಂಬ ಮನೋಭಾವ ಅವರಲ್ಲಿದೆ. ಹೀಗಾಗಿ, ಸಾಲು ಸಾಲು ನಟಿಯರು ಡ್ರಗ್ಸ್ ದಾಸರಾಗುತ್ತಿದ್ದಾರೆ. ಅಂಥವರಿಗೆ ಅನಿಕಾ, ಉಡುಗೊರೆ ಹಾಗೂ ಇತರೆ ರೂಪದಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದಳು. ಅನಿಕಾ ಮಹಿಳೆಯಾಗಿದ್ದರಿಂದ, ನಟಿಯರು ಆಕೆಯನ್ನು ಹೆಚ್ಚು ನಂಬುತ್ತಿದ್ದರು. ಆಕೆಯ ಸಂಪರ್ಕದಲ್ಲಿದ್ದು, ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು ಎಂಬ ಮಾಹಿತಿಯೂ  ಹೊರಬಿದ್ದಿದೆ.

ನಟ–ನಟಿಯರ ಮೇಲೆ ನಿಗಾ: ಮೂವರು ಅರೋಪಿಗಳನ್ನು ಬಂಧಿಸುತ್ತಿದ್ದಂತೆ ಸ್ಯಾಂಡಲ್‌ವುಡ್‌ನ ಕೆಲ ನಟ–ನಟಿಯರು ಹಾಗೂ ಸಂಗೀತ ನಿರ್ದೇಶಕರ ಮೇಲೂ ಎನ್‌ಸಿಬಿ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಡ್ರಗ್ಸ್ ಗ್ರಾಹಕರಾಗಿದ್ದವರ ಪಟ್ಟಿಯೊಂದನ್ನು ಸಿದ್ಧಪಡಿಸಿ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪಾರ್ಟಿಗಳಿಂದಲೇ ‘ಡ್ರಗ್ಸ್‌’ ಅಮಲು

‘ಸ್ಯಾಂಡಲ್‌ವುಡ್‌ನ ನಟ–ನಟಿಯರು ಹಾಗೂ ಸಂಗೀತ ನಿರ್ದೇಶಕರು, ಬೆಂಗಳೂರು ಸೇರಿದಂತೆ ಹಲವು ಕಡೆ ಪಾರ್ಟಿ ಮಾಡುತ್ತಿದ್ದರು. ಅಂಥ ಪಾರ್ಟಿಗಳಿಗೂ ಆರೋಪಿಗಳು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಕೆಲ ನಟಿಯರು, ಅಂಥ ಪಾರ್ಟಿಗಳಲ್ಲೇ ಮೊದಲಿಗೆ ಡ್ರಗ್ಸ್ ತೆಗದುಕೊಂಡಿದ್ದರು.  ನಂತರ, ಅವರೆಲ್ಲ ಕಾಯಂ ಗ್ರಾಹಕರೇ ಆಗಿಬಿಟ್ಟಿದ್ದಾರೆ’ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಕೊರೊನಾ ಲಾಕ್‌ಡೌನ್‌ನಿಂದ ಪಾರ್ಟಿಗಳ ಆಯೋಜನೆ ಕಡಿಮೆ ಆಗಿದೆ. ಹೀಗಾಗಿ, ಆರೋಪಿಗಳು ಕೆಲವರಿಗೆ ಮನೆಗಳಿಗೇ ಡ್ರಗ್ಸ್ ಪೂರೈಕೆ ಮಾಡಿದ್ದಾರೆ. ಆ ಮಾಹಿತಿಯೂ ಎನ್‌ಸಿಬಿ ಅಧಿಕಾರಿಗಳ ಬಳಿ ಇದೆ.

ಅನಿಕಾ ರಂಪಾಟ

ಬಂಧನ ಹಾಗೂ ವಿಚಾರಣೆ ವೇಳೆ ಆರೋಪಿ ಅನಿಕಾ, ಎನ್‌ಸಿಬಿ ಅಧಿಕಾರಿಗಳ ಎದುರು ರಂಪಾಟ ಮಾಡಿದ್ದಾಳೆ. ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ ಮೇಲೆ ಅಧಿಕಾರಿಗಳು ದಾಳಿ ಮಾಡಿದಾಗ ಅವರನ್ನೇ ಅನಿಕಾ ನಿಂದಿಸಿದ್ದಳು.

‘ನಾನು ಮಹಿಳೆ. ಪುರುಷರು ನನ್ನನ್ನು ಮಾತನಾಡಿಸಬೇಡಿ. ಮಹಿಳಾ ಅಧಿಕಾರಿಗಳು ಮಾತ್ರ ನನ್ನ ಬಳಿ ಬರಲಿ’ ಎಂದು ಕೂಗಾಡಿದ್ದಳು. ವಿಚಾರಣೆ ವೇಳೆಯಲ್ಲೂ ಇದೇ ವರ್ತನೆ ಮುಂದುವರಿಸಿದ್ದಳು ಎಂದು ಗೊತ್ತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು