ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಕಾಲಕ್ಕೆ ಶಿಕ್ಷಣ ನೀತಿ ಬದಲಾವಣೆ ಅಗತ್ಯ: ಹಿರಿಯ ಸಾಹಿತಿಗಳ ಸಲಹೆ

Last Updated 21 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

ಧಾರವಾಡ: ‘ಇಡೀ ಜಗತ್ತು ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ನೀತಿಗಳು ಪ್ರತಿ ಹತ್ತು ವರ್ಷಗಳಿಗೊಮ್ಮೆ ಬದಲಾಗಬೇಕು. ಜತೆಗೆ ಇಂಥ ನೀತಿಗಳಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂಬ ಅಭಿಪ್ರಾಯವನ್ನು ಹಿರಿಯ ಸಾಹಿತಿಗಳು ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ನಡೆಸಿದ ಸಂವಾದದಲ್ಲಿ ಪಾಲ್ಗೊಂಡ ಹಿರಿಯ ಸಾಹಿತಿಗಳು ಸಭೆಯಲ್ಲಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.

‘ಬದಲಾಗುತ್ತಿರುವ ಪರಿಸ್ಥಿತಿಗೆ ಶಿಕ್ಷಣ ನೀತಿಯಲ್ಲಿ ಬದಲಾವಣೆ ಅಗತ್ಯ. ಆದರೆ ದೇಶದ ಅಭಿವೃದ್ಧಿಗಾಗಿ ಸಂಶೋಧನಾಧಾರಿತ ಶಿಕ್ಷಣವನ್ನು ಜಾರಿಗೊಳಿಸಬೇಕು’ ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ತಮ್ಮ ಅಭಿಪ್ರಾಯವನ್ನು ತಿಳಿಸಿ, ಲಿಖಿತದಲ್ಲಿ ದಾಖಲಿಸಿದರು.

ಹರ್ಷ ಡಂಬಳ ಅವರು, ‘ನರ್ಸರಿಯಿಂದ ಸ್ನಾತಕೋತ್ತರ ಕೋರ್ಸ್‌ವರೆಗೆ ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರುವ ಬೋಧಕ ಸಿಬ್ಬಂದಿಯ ಕಡ್ಡಾಯ ಮೌಲ್ಯಮಾಪನ ಅಗತ್ಯ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ಅಶ್ವತ್ಥನಾರಾಯಣ ಅವರು, ‘ಶಿಕ್ಷಣದಲ್ಲಿ ಸಮಾನತೆ ತರುವ ಉದ್ದೇಶದಿಂದ ಶಿಕ್ಷಣ ನೀತಿ ರೂಪಿತವಾಗಿದೆ.ಕಲಿಕೆಯೊಂದಿಗೆ ಜ್ಞಾನ ಹಾಗೂ ಕೌಶಲ ಎರಡನ್ನೂ ಕಲಿಸುತ್ತ ವಿದ್ಯಾರ್ಹತೆಯೊಂದಿಗೆ ಉದ್ಯೋಗಾರ್ಹತೆಗೂ ಹೆಚ್ಚು ಮಹತ್ವ ನೀಡಲಾಗುತ್ತದೆ. ಶಿಕ್ಷಣ ನೀತಿಯ ಸಮರ್ಪಕ ಜಾರಿಗೆ ಸರ್ಕಾರ ಬದ್ಧವಾಗಿದೆ’ ಎಂದರು.

ಶಿಕ್ಷಣ ತಜ್ಞ ಗೋಪಾಲಕೃಷ್ಣ ಜೋಶಿ ಮಾತನಾಡಿ, ‘21ನೇ ಶತಮಾನಕ್ಕೆ ಯುವಕರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಅಗತ್ಯವಾಗಿದೆ. ಇದಕ್ಕೆ ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ’ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ,ಡಾ. ಡಿ.ಎಂ.ಹಿರೇಮಠ, ಡಾ. ಶಾಂತಿನಾಥ ದಿಬ್ಬದ, ಡಾ. ಬಾಳಣ್ಣ ಶೀಗಿಹಳ್ಳಿ, ಡಾ. ವಿಜಯಕುಮಾರ ಗಿಡ್ನವರ, ಡಾ. ಪಜ್ಞಾ ಮತ್ತಿಹಳ್ಳಿ, ಡಾ. ಜಿನದತ್ತ ಹಡಗಲಿ, ಡಾ. ಪ್ರಕಾಶ ಗರುಡ, ಕೆ.ಎಚ್.ನಾಯಕ, ಶಂಕರ ಕುಂಬಿ ಇದ್ದರು.

ನಂತರ ಹಿರಿಯ ಸಾಹಿತಿ ಡಾ. ಚೆನ್ನವೀರ ಕಣವಿ ಅವರ ಮನೆಗೆ ಭೇಟಿ ನೀಡಿ ಶಿಕ್ಷಣ ನೀತಿ ಕುರಿತು ಸಚಿವರು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಸಿದ ಡಾ. ಕಣವಿ, ‘ಕನ್ನಡಕ್ಕೆಹಾಗೂ ಮಾತೃಭಾಷೆ ಶಿಕ್ಷಣಕ್ಕೆಎಲ್ಲೂ ಧಕ್ಕೆ ಆಗದಂತೆ ಜಾರಿ ಆಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT