ಗುರುವಾರ , ಆಗಸ್ಟ್ 5, 2021
28 °C

ಡೆಲ್ಟಾ ಪ್ಲಸ್ ಎದುರಿಸಲು ತುರ್ತು ಕ್ರಮ ಅಗತ್ಯ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಮುಗಿಯುವ ಮೊದಲೇ ಡೆಲ್ಟಾ ಪ್ಲಸ್ ಎಂಬ ಇನ್ನಷ್ಟು ತೀವ್ರವಾದ ರೂಪಾಂತರಿ ವೈರಾಣು ಹರಡುವ ಭೀತಿ ಸೃಷ್ಟಿಯಾಗಿದೆ. ಅದನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ರೀತಿಯ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ದೇಶದ ಶೇ 80ರಷ್ಟು ಜನರಿಗೆ ಲಸಿಕೆ ನೀಡುವವರೆಗೆ ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸಬೇಕು. ಡೆಲ್ಟಾ ಪ್ಲಸ್ ಪತ್ತೆಯಾದ ಸ್ಥಳಗಳಲ್ಲಿ ನಿಗಾ ವಹಿಸಿ ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು. ಕೇಂದ್ರ– ರಾಜ್ಯ ಸರ್ಕಾರಗಳು ವ್ಯಾಪಕವಾಗಿ ಮತ್ತು ಉಚಿತವಾಗಿ ಸಾರ್ವಜನಿಕ ಆಂದೋಲನಗಳ ಮೂಲಕ ಲಸಿಕೆ ನೀಡಬೇಕು. ಲಸಿಕೆ ಉತ್ಪಾದಕ ಕಂಪನಿಗಳು ಪ್ರತಿ ದಿನ ಸರ್ಕಾರಕ್ಕೆ ಮತ್ತು ಖಾಸಗಿಯವರಿಗೆ ನೀಡಿದ ಲಸಿಕೆಗಳ ಕುರಿತು ಪ್ರಕಟಣೆ ಹೊರಡಿಸಬೇಕು’ ಎಂದು ಅವರು ಹೇಳಿದ್ದಾರೆ.

‘ಖಾಸಗಿ ಆಸ್ಪತ್ರೆಗಳು ಕಂಪನಿಗಳಿಂದ ಲಸಿಕೆಗಳನ್ನು ಸ್ವೀಕರಿಸಿ, ಗರಿಷ್ಠ 10 ದಿನ ಮಾತ್ರ ದಾಸ್ತಾನಿರಿಸಿಕೊಳ್ಳಬೇಕೆಂದು ಆದೇಶ ಹೊರಡಿಸುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ. ಈ ಕೆಲಸ ತುರ್ತಾಗಿ ಆಗಬೇಕು. ಮುಂದಿನ ಮೂರು- ನಾಲ್ಕು ತಿಂಗಳಲ್ಲಿ ಲಸಿಕೆ ಹಾಕುವಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಲಸಿಕೆಗಳ ಮೇಲಿನ ಪೇಟೆಂಟು ಕಿತ್ತು ಹಾಕಬೇಕು’ ಎಂದು ಸಲಹೆ ನೀಡಿದ್ದಾರೆ.

‘ಇದೇ 30ರಂದು ಮೋದಿ ‘ಕೋವಿನ್ ಗ್ಲೋಬಲ್ ಕಾನ್‍ಕ್ಲೇವ್’ ನಡೆಸಲು ಉದ್ದೇಶಿಸಿದ್ದಾರೆಂಬ ಮಾಹಿತಿ ಇದೆ. ದೇಶ ಕೋವಿಡ್‌ ಎದುರಿಸಿದ ರೀತಿಗಳನ್ನು ಈ ಸಮಾವೇಶದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಇದಂತೂ ಅತ್ಯಂತ ನಾಚಿಕೆಗೇಡಿನ ವಿಷಯ. ತಮ್ಮ ಸಾಧನೆಗಳ ಜಾಗತಿಕ ಸಮಾವೇಶ ನಡೆಸುವ ಬದಲು, ಲಸಿಕೆ ಮೇಲಿನ ಪೇಟೆಂಟುಗಳನ್ನು ತೆಗೆದು ಹಾಕುವಂತೆ ವಿಶ್ವದ ನಾಯಕರ ಮೇಲೆ ಒತ್ತಡಹೇರಬೇಕು’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು