ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ತೋಟಗಾರಿಕೆ ಅಧಿಕಾರಿಗಳ ನೇಮಕ: ‘ಆದೇಶ ಪತ್ರ’ಕ್ಕೆ ಬೇಕಿದೆ ಸಚಿವರ ಒಪ್ಪಿಗೆ!

ಸಹಾಯಕ ತೋಟಗಾರಿಕಾ ಅಧಿಕಾರಿಗಳ 309 ಹುದ್ದೆ: ಆಯ್ಕೆಯಾದವರ ಅಳಲು
Last Updated 7 ಡಿಸೆಂಬರ್ 2021, 3:45 IST
ಅಕ್ಷರ ಗಾತ್ರ

ಬೆಂಗಳೂರು: ಸಹಾಯಕ ತೋಟಗಾರಿಕೆ ಅಧಿಕಾರಿಗಳ309 (ಕಲ್ಯಾಣ ಕರ್ನಾಟಕದ 88) ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಆಯ್ಕೆಯಾಗಿ, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡರೂ ಅಭ್ಯರ್ಥಿಗಳಿಗೆ ತೋಟಗಾರಿಕೆ ಇಲಾಖೆ ನೇಮಕಾತಿ ಆದೇಶ ಪತ್ರ ನೀಡಿಲ್ಲ.

‘ನೇಮಕಾತಿಗೆ ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಆದರೆ, ಸರ್ಕಾರದ (ತೋಟಗಾರಿಕೆ ಸಚಿವ ಮುನಿರತ್ನ) ಅನುಮತಿ ಸಿಕ್ಕಿಲ್ಲ. ಹೀಗಾಗಿ, ನೇಮಕಾತಿ ಆದೇಶ ನೀಡಲು ಸಾಧ್ಯವಾಗಿಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ, ನೇಮಕಾತಿ ಆದೇಶ ನೀಡಲು ಹಣದ ಬೇಡಿಕೆ ಇಡಲಾಗುತ್ತಿದೆ. ಆದ್ದರಿಂದ ನೇಮಕಾತಿ ಆದೇಶ ಪತ್ರ ನೀಡುತ್ತಿಲ್ಲ ಎಂದು ಕೆಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅಂಕಪಟ್ಟಿ, ಮೀಸಲಾತಿ ಸಿಂಧುತ್ವ, ಪೊಲೀಸ್ ವರದಿ, ವೈದ್ಯಕೀಯ ತಪಾಸಣೆ ಇತ್ಯಾದಿ ದಾಖಲೆಗಳ ಪರಿಶೀಲನೆ ನಡೆಸಲು ಸಹಮತಿ ನೀಡಿದ್ದ ಆರ್ಥಿಕ ಇಲಾಖೆ, ನೇಮಕಾತಿ ಆದೇಶ ನೀಡುವುದಕ್ಕೂ ಮೊದಲು ಅನುಮತಿ ಪಡೆಯಬೇಕೆಂಬ ಷರತ್ತು ವಿಧಿಸಿತ್ತು. ನೇಮಕಾತಿ ಪೂರ್ವ ಎಲ್ಲ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದೆ. ಅಲ್ಲದೆ, ನೇಮಕಾತಿ ಮಾಡಿಕೊಳ್ಳುವಂತೆ ಆರ್ಥಿಕ ಇಲಾಖೆ ಅ.30 ರಂದು ಅನುಮತಿ ಕೂಡಾ ನೀಡಿದೆ.

ನೇಮಕಾತಿ ಆದೇಶ ನೀಡುವಂತೆ ಅಭ್ಯರ್ಥಿಗಳು ಮುಖ್ಯಮಂತ್ರಿ ಮತ್ತು ಸಚಿವ ಮುನಿರತ್ನ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರ ಬಳಿಯೂ ಅಂಗಲಾಚುತ್ತಿದ್ದಾರೆ. ಈ ಮಧ್ಯೆ, ಆಯ್ಕೆಯಾದ ಅಭ್ಯರ್ಥಿಯೊಬ್ಬರು (ಸುನೀಲ ಕಾಮಗೌಡ) ಆದೇಶ ಪತ್ರದ ನಿರೀಕ್ಷೆಯಲ್ಲಿರುವಾಗಲೇ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

‘ಆಯ್ಕೆಯಾದವರಲ್ಲಿ ಬಹುತೇಕರು ರೈತ ಸಮುದಾಯಕ್ಕೆ, ಮಧ್ಯಮ ವರ್ಗಕ್ಕೆ ಸೇರಿದವರು. ಶೈಕ್ಷಣಿಕ ಸಾಲ ಪಡೆದವರು. ಆದೇಶ ಪತ್ರದ ನಿರೀಕ್ಷೆಯಲ್ಲಿ ಬೇರೊಂದು ಕೆಲಸಕ್ಕೆ ಹೋಗಿಲ್ಲ. ಅಲ್ಲದೆ, ಮೂಲ ಪದವಿ ಪ್ರಮಾಣಪತ್ರಗಳನ್ನು ಪರಿಶೀಲನೆಗಾಗಿ 2021ರ ಆಗಸ್ಟ್‌ 9 ರಂದೇ ಇಲಾಖೆ ಪಡೆದುಕೊಂಡಿದ್ದು, ವಾಪಸು ಕೊಟ್ಟಿಲ್ಲ. ಹೀಗಾಗಿ, ಸ್ನಾತಕೋತ್ತರ ಪದವಿ, ಪಿಎಚ್‌.ಡಿ ವ್ಯಾಸಂಗಕ್ಕೆ ಸೇರಿಕೊಳ್ಳಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದ್ದೇವೆ’ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಸಹಾಯಕ ತೋಟಗಾರಿಕೆ ಅಧಿಕಾರಿ (ಗ್ರೂಪ್‌ ‘ಬಿ’) ಹುದ್ದೆಗಳಿಗೆ ಕೆಪಿಎಸ್‌ಸಿ 2018ರ ಡಿ. 6ರಂದು ಅಧಿಸೂಚನೆ ಹೊರಡಿಸಿತ್ತು. ಒಂದು ವರ್ಷದ ಬಳಿಕ (2019 ಡಿ. 16, 17) ಪರೀಕ್ಷೆ ನಡೆಸಿ, ಒಂದು ವರ್ಷದ ಬಳಿಕ (2020ರ ಡಿಸೆಂಬರ್‌) ತಾತ್ಕಾಲಿಕ ಪಟ್ಟಿ, 2021ರ ಜ. 19ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ಹುದ್ದೆಗಳ ಜೊತೆಗೆ ಅಧಿಸೂಚನೆ ಹೊರಡಿಸಿರುವ ಸಹಾಯಕ ತೋಟಗಾರಿಕೆ ನಿರ್ದೇಶಕರು, ವೈದ್ಯಕೀಯ ಸೇವಾ ಇಲಾಖೆಯಲ್ಲಿನ ವಿಮಾ ವೈದ್ಯಾಧಿಕಾರಿಗಳು, ಎಫ್‌ಡಿಎ, ಎಸ್‌ಡಿಎ, ಕೃಷಿ ಮಾರುಕಟ್ಟೆ ಅಧಿಕಾರಿಗಳು, ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಶು ವೈದ್ಯಕೀಯ ಇಲಾಖೆಯ ಹಲವು ಹುದ್ದೆಗಳಿಗೆ ಆಯ್ಕೆಯಾದವರಿಗೆ ಈಗಾಗಲೇ ನೇಮಕಾತಿ ಆದೇಶ ನೀಡಲಾಗಿದೆ.

‘ಅನುಮೋದನೆ ಸಿಕ್ಕಿದರೆ ನಾಳೆಯೇ ಆದೇಶ ಪತ್ರ’

‘ನೇಮಕಾತಿಯ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಆದೇಶ ಪತ್ರ ನೀಡುವ ಬಗ್ಗೆ ನಾವು ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಇಲಾಖೆಯ ಸಚಿವರು ಅನುಮತಿ ನೀಡಬೇಕು. ಅವರು ಅನುಮೋದನೆ ನೀಡಿದರೆ ನಾಳೆಯೇ ಆದೇಶ ಪತ್ರ ಕೊಡಲು ಸಿದ್ಧ’ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್‌ ಹೇಳಿದರು.

‘ಕೋವಿಡ್‌, ಲಾಕ್‌ಡೌನ್‌ ಕಾರಣದಿಂದ ವೈದ್ಯಕೀಯ ಪರೀಕ್ಷಾ ವರದಿ 3 ತಿಂಗಳು ವಿಳಂಬವಾಯಿತು. ಅಲ್ಲದೆ, ಬೀದರ್‌ ಜಿಲ್ಲೆ ಆರು ಮಂದಿ ಸೇರಿ 12 ಅಭ್ಯರ್ಥಿಗಳು ಇನ್ನೂ ಸಿಂಧುತ್ವ ಪ್ರಮಾಣಪತ್ರವನ್ನೇ ನೀಡಿಲ್ಲ. ಈ ಬಗ್ಗೆ ಆರ್ಥಿಕ ಇಲಾಖೆಗೆ ಮಾಹಿತಿ ನೀಡಿ, ಅಷ್ಟು ಮಂದಿಯನ್ನು ಹೊರತುಪಡಿಸಿ ಉಳಿದವರ ನೇಮಕಾತಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಕಡತ ಸಲ್ಲಿಸಲಾಗಿದೆ’ ಎಂದರು.

ನಿಯಮ ಉಲ್ಲಂಘನೆ

ಆಯ್ಕೆಗೊಂಡ ಅಭ್ಯರ್ಥಿಗಳ ಪೊಲೀಸ್‌ ವರದಿ, ವೈದ್ಯಕೀಯ ಪರೀಕ್ಷಾ ವರದಿ, ಮೀಸಲಾತಿ ಸಿಂಧುತ್ವದ ವರದಿಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಒಂದು ತಿಂಗಳ ಒಳಗೆ ನೇಮಕಾತಿ ಪ್ರಾಧಿಕಾರಗಳು ಪಡೆದುಕೊಳ್ಳಬೇಕು. ಸಿಂಧುತ್ವ ಪ್ರಮಾಣಪತ್ರ ಪಡೆಯಲು ವಿಳಂಬವಾದರೆ, ಸಿಂಧುತ್ವ ಪ್ರಮಾಣಪತ್ರ ಅನ್ವಯಿಸದ ಅಭ್ಯರ್ಥಿಗಳಿಗೆ ಮತ್ತು ಸಿಂಧುತ್ವದ ಪ್ರಮಾಣಪತ್ರ ಸ್ವೀಕೃತವಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು. ಕರ್ನಾಟಕ ಸಿವಿಲ್‌ ಸೇವಾ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಆಯ್ಕೆ ಮೂಲಕ ನೇರ ನೇಮಕಾತಿ (ಸಾಮಾನ್ಯ) ನಿಯಮಗಳ 2006 ರ ಅನ್ವಯ ಆಯ್ಕೆ ಪಟ್ಟಿ‌ ಒಂದು ವರ್ಷ ಮಾತ್ರ ಜಾರಿಯಲ್ಲಿರುತ್ತದೆ. ಆದ್ದರಿಂದ, ಆಯ್ಕೆ ಪಟ್ಟಿ ‍ಪ್ರಕಟಗೊಂಡ ಒಂದು ವರ್ಷದ ಒಳಗೆ ನೇಮಕಾತಿ ಆದೇಶ ನೀಡಬೇಕು ಎಂದು 2018 ಫೆ. 15 ರಂದೇ ಸರ್ಕಾರ ಸುತ್ತೋಲೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT