ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಷಭಾವತಿ ಪುನಶ್ಚೇತನಕ್ಕೆ ‘ನೀರಿ’ ಸಹಭಾಗಿತ್ವ: ಒಪ್ಪಂದ ವಿವರ ಸಲ್ಲಿಸಲು ನಿರ್ದೇಶನ

ವೃಷಭಾವತಿ ನದಿ ಪುನಶ್ಚೇತನ ಯೋಜನೆಗೆ ‘ನೀರಿ’ ಸಹಭಾಗಿತ್ವ
Last Updated 3 ನವೆಂಬರ್ 2020, 18:52 IST
ಅಕ್ಷರ ಗಾತ್ರ

ಬೆಂಗಳೂರು: ವೃಷಭಾವತಿ ನದಿ ಪುನಶ್ಚೇತನ ಯೋಜನೆಯ ಅನುಷ್ಠಾನಕ್ಕೆ ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ಜತೆ ಮಾಡಿಕೊಂಡಿರುವ ಒಪ್ಪಂದ ಮತ್ತು ಆ ಸಂಸ್ಥೆಗೆ ಮಾಡಿರುವ ಹಣ ಪಾವತಿಯ ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಕೀಲರಾದ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ‘ನೀರಿ’ ಸಂಸ್ಥೆಯನ್ನೂ ಪ್ರತಿವಾದಿಗಳ ಪಟ್ಟಿಯಲ್ಲಿ ಸೇರಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ನದಿ ಪುನಶ್ಚೇತನ ಯೋಜನೆಯ ಅನುಷ್ಠಾನದ ಮೇಲುಸ್ತುವಾರಿ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.

ಯೋಜನೆಯ ಅನುಷ್ಠಾನ ಕೈಗೆತ್ತಿಕೊಳ್ಳಲು ‘ನೀರಿ’ ಸಂಸ್ಥೆಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ‘ನೀರಿ’ ಸಂಸ್ಥೆಗೆ ಶುಲ್ಕ ಪಾವತಿಸಲಿವೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ವಿಚಾರಣೆ ವೇಳೆ ತಿಳಿಸಿದರು.

ಯೋಜನೆ ಅನುಷ್ಠಾನದ ಭಾಗವಾಗಿ ವೃಷಭಾವತಿ ಕಣಿವೆಯಲ್ಲಿನ ಹಲವು ಕೈಗಾರಿಕೆಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.

‘ಯೋಜನೆ ಅನುಷ್ಠಾನದಲ್ಲಿ ಭಾಗಿಯಾಗುತ್ತಿರುವ ಎಲ್ಲ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರ ಒಪ್ಪಂದಗಳು ಹಾಗೂ ಹಣ ಪಾವತಿಗೆ ಸಂಬಂಧಿಸಿದ ವಿವರಗಳುಳ್ಳ ಪ್ರಮಾಣಪತ್ರವನ್ನು ಎರಡು ವಾರಗಳೊಳಗೆ ಸಲ್ಲಿಸಬೇಕು. ನದಿ ಮಾಲಿನ್ಯಕ್ಕೆ ಕಾರಣವಾದ ಕೈಗಾರಿಕೆಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಆಕ್ಷೇಪಣಾ ಹೇಳಿಕೆಯಲ್ಲಿ ವಿವರ ಒದಗಿಸಬೇಕು. ಮುಂದಿನ ವಿಚಾರಣೆ ವೇಳೆಗೆ ‘ನೀರಿ’ ಪ್ರತಿನಿಧಿಗಳು ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ಹಾಜರಿರಬೇಕು’ ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT