ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದರಸಾದ 12 ವಿದ್ಯಾರ್ಥಿಗಳ ‘ನೀಟ್‌’ ಸಾಧನೆ: ವೈದ್ಯಕೀಯ ಶಿಕ್ಷಣ ಪ್ರವೇಶದ ನಿರೀಕ್ಷೆ

Last Updated 13 ಸೆಪ್ಟೆಂಬರ್ 2022, 14:11 IST
ಅಕ್ಷರ ಗಾತ್ರ

ಬೆಂಗಳೂರು: ಬೀದರ್‌ನ ಶಾಹೀನ್‌ ಕಾಲೇಜಿನಲ್ಲಿ ವಿಶೇಷ ಶಿಕ್ಷಣ ಪಡೆದ ರಾಜ್ಯದ ವಿವಿಧ ಮದರಸಾಗಳ 12 ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ವೈದ್ಯಕೀಯ ಶಿಕ್ಷಣ ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ.

9ನೇ ತರಗತಿಯವರೆಗೂ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದ ನೂರಾರು ವಿದ್ಯಾರ್ಥಿಗಳನ್ನು ಶಾಹೀನ್‌ ಶಿಕ್ಷಣ ಸಂಸ್ಥೆ ಕರೆತಂದು ಒಂದು ವರ್ಷ ವಿಶೇಷ ತರಬೇತಿ ನೀಡಿದ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿಸಿ, ತೇರ್ಗಡೆಯಾದ ನಂತರ ಅಲ್ಲೇ ಪಿಯು ಶಿಕ್ಷಣ ನೀಡಿತ್ತು. ಪಿಯುನಲ್ಲೂ ಉತ್ತಮ ಸಾಧನೆ ಮಾಡಿದ್ದ ಅವರಲ್ಲಿ 12 ವಿದ್ಯಾರ್ಥಿಗಳು ನೀಟ್‌ನಲ್ಲೂ ಉನ್ನತ ರ್‍ಯಾಂಕ್‌ಗಳನ್ನು ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್‌ ಖಾದೀರ್ ಖಾನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂತಸ ಹಂಚಿಕೊಂಡರು.

ಸಂಸ್ಥೆ 12 ವರ್ಷಗಳಿಂದ ನಿರಂತರವಾಗಿ ಇಂತಹ ಪ್ರಯತ್ನ ಮಾಡಿದೆ. ಮದರಸಾಗಳಲ್ಲಿ ಧಾರ್ಮಿಕ ವಿದ್ಯಾಭ್ಯಾಸಕ್ಕೆ ಸೇರಿ ಅರ್ಧಕ್ಕೆ ಶಿಕ್ಷಣ ತೊರೆದ ವಿದ್ಯಾರ್ಥಿಗಳನ್ನು ಕರೆತಂದು ಇತರರಂತೆ ಶಾಲಾ ಶಿಕ್ಷಣ ನೀಡಲಾಗಿದೆ. ಅಂತಹ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್‌ ಪ್ರವೇಶ ಪಡೆದು ವೈದ್ಯರಾಗಿದ್ದಾರೆ. ಮದರಸಾ ವಿದ್ಯಾರ್ಥಿಗಳೂ ಸೇರಿದಂತೆ ಈ ಬಾರಿ ಶಾಹೀನ್‌ನಲ್ಲಿ ಶಿಕ್ಷಣ ಪಡೆದ ಸುಮಾರು 450 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮದರಸಾಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಂಡಳಿ ರಚಿಸುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಲ್ಲಿನ ಮಕ್ಕಳೂ ಇತರರಂತೆ ಸಾಮಾನ್ಯ ಶಿಕ್ಷಣ ಪಡೆಯಬೇಕು ಎನ್ನುವುದೇ ಸಂಸ್ಥೆಯ ಧ್ಯೇಯ. ಅದಕ್ಕಾಗಿ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಮದರಸಾಗಳಿಗೆ ತೆರಳಿ ಸಂಸ್ಥೆಯ ಶಿಕ್ಷಕರು ಸಾಮಾನ್ಯ ಶಿಕ್ಷಣ ನೀಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.

ಶಿಕ್ಷಣ ತೊರೆದಿದ್ದ ವಿದ್ಯಾರ್ಥಿ 834ನೇ ರ್‍ಯಾಂಕ್‌
ಇತರಂತೆ ಸಾಮಾನ್ಯ ಶಿಕ್ಷಣ ಪಡೆದು 5ನೇ ತರಗತಿಗೆ ಶಾಲೆ ಬಿಟ್ಟಿದ್ದೆ. ನಂತರ ಶಿವಾಜಿನಗರದ ಮದರಸಾದಲ್ಲಿ ಧಾರ್ಮಿಕ ಶಿಕ್ಷಣ ಪಡೆದೆ. ಶಾಹೀನ್‌ ಸಂಸ್ಥೆ ನನ್ನನ್ನು ಗುರುತಿಸಿ, ನೇರವಾಗಿ 10ನೇ ತರಗತಿ ಪರೀಕ್ಷೆ ಬರೆಯಲು ವಿಶೇಷ ಶಿಕ್ಷಣ ನೀಡಿತು. ನಂತರ ಬೀದರನಲ್ಲೇ ಪಿಯು ಮುಗಿಸಿದೆ. ನೀಟ್‌ನಲ್ಲಿ ರಾಷ್ಟ್ರಕ್ಕೆ 834ನೇ ರ್‍ಯಾಂಕ್‌ ಪಡೆದಿರುವೆ. ಈಗ ವೈದ್ಯನಾಗುವ ಅವಕಾಶ ಸಿಕ್ಕಿದೆ ಎನ್ನುವುದೇ ಅಚ್ಚರಿ. ಇಂತಹ ಅವಕಾಶ ಮದರಸಾಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೂ ದೊರಕಬೇಕು ಎಂದು ಬೆಂಗಳೂರಿನ ಶಿವಾಜಿನಗರದ ಮಹಮದ್‌ ಅಲಿ ಇಕ್ಬಾಲ್‌ ಮನದ ಮಾತು ಬಿಚ್ಚಿಟ್ಟರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT