ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ರಾಷ್ಟ್ರೀಯ ಶಿಕ್ಷಣ ನೀತಿ... ನೆಲದೊಂದಿಗೆ ಬೆಸುಗೆಯೇ? ಆತುರದ ಜಾರಿಯೇ?

Last Updated 24 ಆಗಸ್ಟ್ 2021, 22:00 IST
ಅಕ್ಷರ ಗಾತ್ರ

ಮೂರು ದಶಕಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ರೀತಿಯು ರೂಪುಗೊಂಡಿದೆ. ಕೇಂದ್ರ ಸರ್ಕಾರವು ಭಾರಿ ಮಹತ್ವಾಕಾಂಕ್ಷೆಯಿಂದ ರೂಪಿಸಿದ ಈ ನೀತಿಯ ಜಾರಿಗೆ ಕರ್ನಾಟಕ ಸರ್ಕಾರವು ಚಾಲನೆ ಕೊಟ್ಟಿದೆ. ಹೊಸ ಶಿಕ್ಷಣ ನೀತಿಯು ಕಲಿಕೆಯನ್ನು ಈ ನೆಲದೊಂದಿಗೆ ಬೆಸೆಯಲಿದೆ ಎಂದು ಶಿಕ್ಷಣ ತಜ್ಞರಲ್ಲಿ ಕೆಲವರು ಭಾವಿಸಿದ್ದಾರೆ. ನೀತಿಯಲ್ಲಿ ಇರುವ ಹಲವು ಅಂಶಗಳ ಬಗ್ಗೆ ಆಮೂಲಾಗ್ರ ಚರ್ಚೆ ಆಗಬೇಕಿದೆ. ನೀತಿಯ ಜಾರಿಗೆ ಆತುರ ಮಾಡಲಾಗಿದೆ ಎಂದು ಪ್ರತಿಪಾದಿಸುವ ಶಿಕ್ಷಣ ಪರಿಣತರೂ ಇದ್ದಾರೆ. ರಾಜ್ಯದ ಪರಿಣತರ ಅಭಿಪ್ರಾಯ ಇಲ್ಲಿದೆ

ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆ

ಈ ತನಕ ಬ್ರಿಟಿಷ್ ಮಾದರಿಯ ನಾಲ್ಕು ಗೋಡೆಗಳ ನಡುವಿನ ಶಿಕ್ಷಣ ಪದ್ಧತಿ ಇತ್ತು. ಹೊಸ ನೀತಿಯು ಯುವಜನತೆಯ ಕೌಶಲ, ಬುದ್ಧಿಮತ್ತೆ, ವ್ಯಕ್ತಿತ್ವ ವಿಕಸನ ಸೇರಿದಂತೆ ಬಹುಶಿಸ್ತೀಯ ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳನ್ನು ಒದಗಿಸಲಿದೆ.ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣವು ಇದರ ಇನ್ನೊಂದು ವಿಶೇಷ. ಇದು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ, ಯಾವುದೇ ನೀತಿಯು ಎಷ್ಟೇ ಉತ್ತಮವಾಗಿದ್ದರೂ, ಅನುಷ್ಠಾನವು ಪರಿಣಾಮಕಾರಿಯಾದಾಗ ಮಾತ್ರ ಪ್ರತಿಫಲ ದೊರೆಯಲು ಸಾಧ್ಯ.

ಡಾ. ಮಾಧವ ಎಂ.ಕೆ., ಸಂಯೋಜಕರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳೂರು ವಿಶ್ವವಿದ್ಯಾಲಯ

ಪ್ರದರ್ಶನಕ್ಕಿಂತ ‘ದರ್ಶನ’ ಮುಖ್ಯ

ಪ್ರಜಾತಂತ್ರದಲ್ಲಿ ಯಾವುದೇ ನೀತಿಯು ಸಂವಾದ, ಭಾಗವಹಿಸುವಿಕೆ, ಚರ್ಚೆಗಳ ಮೂಲಕ ಅನುಷ್ಠಾನಗೊಳ್ಳುವುದು ಸಹಜ. ಹೀಗಾಗಿ, ಎನ್‌ಇಪಿಯನ್ನು ಕೋವಿಡ್–19 ಸಂಕಷ್ಟದ ನಡುವೆಯೂ ಧಾವಂತದಲ್ಲಿ ಅನುಷ್ಠಾನಗೊಳಿಸುವ ಬದಲಾಗಿ, ಇನ್ನಷ್ಟು ಚರ್ಚೆಗೆ ತೆರೆದಿಟ್ಟರೆ ಉತ್ತಮ.ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಸೌಕರ್ಯಗಳ (ಕಟ್ಟಡ, ಅಂತರ್ಜಾಲ ಇತ್ಯಾದಿ) ಕೊರತೆ ಇದೆ. ಪೂರಕ ಮೂಲಸೌಕರ್ಯ ಇಲ್ಲದೇ ಎನ್ಇಪಿ ಪರಿಣಾಮಕಾರಿಯಾದೀತೇ ಎಂಬ ಆತಂಕವು ಶೈಕ್ಷಣಿಕ ವಲಯದಲ್ಲಿದೆ.

ಐವನ್‌ ಫ್ರಾನಿಸ್‌ ಲೋಬೊ,ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು,

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುತ್ತೂರು

ಕ್ರೆಡಿಟ್‌ ಗಳಿಕೆಯ ಗೋಜಲು

ಪದವಿ ಕೋರ್ಸ್‌ಗಳನ್ನು ಕ್ರೆಡಿಟ್ ಗಳಿಕೆಯ ಗೋಜಲಿಗೆ ತಳ್ಳಲಾಗಿದೆ. ಮೂರು ವಿಷಯಗಳನ್ನು ಓದುವ ಬದಲು ಒಂದು ಅಥವಾ ಎರಡು ವಿಷಯಗಳಿಗೆ ಮಾತ್ರವೇ ಪದವಿ ಕೋರ್ಸನ್ನು ಸೀಮಿತಗೊಳಿಸಲಾಗಿದೆ. ಕನ್ನಡ ಭಾಷೆಯ ಕಲಿಕೆಯನ್ನು ಒಂದು/ಎರಡು ವರ್ಷಕ್ಕೆ ಸೀಮಿತಗೊಳಿಸಿರುವುದರಿಂದ ಭಾಷಾ ಕಲಿಕೆ, ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಸುಭಾಷ್‌ ಜೋಯಪ್ಪ,ಎಐಡಿಎಸ್‌ಓ ರಾಜ್ಯ ಸಮಿತಿ ಸದಸ್ಯ

ಏಕೀಕೃತ ವಿವಿಗಳ ಮೇಲೆ ಪ್ರಯೋಗ ಏಕೆ?

ಆಧುನಿಕ ಕಾಲಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ. ಆದರೆ, ರಾಜ್ಯ ಸರ್ಕಾರ ಅತ್ಯಂತ ಅವಸರಕ್ಕೆ ಒಳಗಾಗಿ ಇದೇ ಶೈಕ್ಷಣಿಕ ವರ್ಷದಿಂದ ನೂತನ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವುದು ಅನುಮಾನಾಸ್ಪದವಾಗಿದೆ. ವಿದ್ಯಾರ್ಥಿಗಳು, ಪೋಷಕರ ಅಭಿಪ್ರಾಯ ಸಂಗ್ರಹಿಸದೇ ಹೊಸ ನೀತಿ ಜಾರಿಗೊಳಿಸುತ್ತಿರುವುದು ಸರಿಯಾದ ಕ್ರಮವಲ್ಲ. ಏಕೀಕೃತ ವಿವಿಗಳ ಮೇಲೆ ಏಕೆ ಪ್ರಯೋಗ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಮೂಡಿದೆ.ಶಾಲಾ, ಕಾಲೇಜುಗಳಲ್ಲಿ ಸಂವಾದ, ಕಾರ್ಯಾಗಾರ, ಉಪನ್ಯಾಸಗಳು ನಡೆಯಬೇಕಾಗಿತ್ತು.

ಡಾ.ಎನ್‌.ಎಸ್‌.ಶಂಕರೇಗೌಡ
ಸಹಾಯಕ ಪ್ರಾಧ್ಯಾಪಕ, ಮಂಡ್ಯ ಏಕೀಕೃತ ವಿಶ್ವವಿದ್ಯಾಲಯ, ಮಂಡ್ಯ

ಕೈ ಕೆಸರಾದರೆ ಬಾಯಿ ಮೊಸರು ಪರಿಕಲ್ಪನೆ

ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಪರಿಕಲ್ಪನೆಯ ಆಧಾರದ ಮೇಲೆಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. ಇಷ್ಟು ವರ್ಷಗಳ ಕಾಲ ಬೌದ್ಧಿಕ ಜ್ಞಾನಕ್ಕೆ ಮಾತ್ರ ಮಹತ್ವ ನೀಡಲಾಗಿತ್ತು. ಇದರಿಂದಾಗಿ ಅಸಮತೋಲನ ಸೃಷ್ಟಿಯಾಗಿತ್ತು. ಅದನ್ನು ಬದಲಾಯಿಸಲು, ಹೊಸ ನೀತಿಯಲ್ಲಿ ವಿದ್ಯೆ ಮತ್ತು ತರಬೇತಿ ಎರಡಕ್ಕೂ ಸಮಾನ ಮಹತ್ವ ನೀಡಲಾಗಿದೆ. ಬುದ್ಧಿ ಹಾಗೂ ಕೌಶಲ ಜೊತೆಜೊತೆಯಾಗಿ ಹೋಗಬೇಕು. ಇದರ ಪ್ರತಿಫಲವನ್ನು ಮುಂಬರುವ ವರ್ಷಗಳಲ್ಲಿ ನಾವು ಕಾಣಲಿದ್ದೇವೆ.

ಪ್ರೊ. ತೇಜಸ್ವಿ ಕಟ್ಟಿಮನಿ,ಕುಲಪತಿ
ಆಂಧ್ರಪದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ

ಅಷ್ಟೊಂದು ತರಾತುರಿಯೇಕೆ?

ದಕ್ಷಿಣ ಭಾರತದಲ್ಲಿ ಯಾವ ರಾಜ್ಯವೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಆತುರ ತೋರುತ್ತಿಲ್ಲ. ಅಂಥದರಲ್ಲಿ ಕರ್ನಾಟಕ ಸರ್ಕಾರ ಇಷ್ಟೊಂದು ತರಾತುರಿಯಲ್ಲಿ ಜಾರಿಗೆ ತರುವ ಅಗತ್ಯವಾದರೂ ಏನಿತ್ತು?

ಮುಖ್ಯವಾಗಿ ಎನ್‌ಇಪಿಯಿಂದ ಭಾಷೆಗಳಿಗೆ ಕಂಟಕ ಎದುರಾಗಲಿದೆ. ಇದನ್ನು ಉಳಿಸಿಕೊಂಡು ಹೋಗುವ ಬಗೆಯನ್ನು ತಿಳಿಸಿಲ್ಲ. ವರ್ಷದ ಹಿಂದೆ 400ಕ್ಕೂ ಅಧಿಕ ಪುಟಗಳ ಕರಡು ಪ್ರತಿಯನ್ನು ಕಳುಹಿಸಿ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿ ಎಂದು ಹೇಳಿದ್ದರು.ಆದರೆ, ಎಷ್ಟು ಜನ ಉಪನ್ಯಾಸಕರಿಗೆ ಆ ಬಗ್ಗೆ ಮಾಹಿತಿ ಇದೆ ಎಂಬುದನ್ನು ಅರಿಯಲು ಸರ್ಕಾರ ಪ್ರಯತ್ನಿಸಿದೆಯೇ?

ಒಟ್ಟಾರೆ ಇದು ಜಾಗತಿಕ ಮಾರುಕಟ್ಟೆಗೆ ಕೆಲವೇ ಕೆಲವು ಉದ್ಯೋಗಿಗಳನ್ನು ತಯಾರು ಮಾಡಿಕೊಡಲು ರೂಪುಗೊಂಡಿದೆ. ಮೊದಲಿದ್ದ ಶಿಕ್ಷಣ ನೀತಿ ಹಳೆಯದಾಗಿದೆ. ಹೊಸದಾಗಿ ರೂಪುಗೊಳ್ಳಬೇಕು ಎಂಬುದನ್ನು ಒಪ್ಪುತ್ತೇನೆ. ಆದರೆ, ಈ ಬಗ್ಗೆ ಸಮಗ್ರ ಚರ್ಚೆಯನ್ನೇ ನಡೆಸದೇ ಕೇಂದ್ರ ಸರ್ಕಾರದ ಮೂಗಿನಡಿಯಲ್ಲಿ ರೂಪಿಸಿರುವುದರ ಹಿಂದಿನ ಕಾರಣವೇನು?

ಡಾ.ಮೀನಾಕ್ಷಿ ಬಾಳಿ

ಪ್ರಾಧ್ಯಾಪಕಿ, ವಿ.ಜಿ. ಮಹಿಳಾ ಕಾಲೇಜು, ಕಲಬುರ್ಗಿ

ಜ್ಞಾನಾಧಾರಿತ ಶಿಕ್ಷಣಕ್ಕೂ ಬೇಕಿದೆ ಒತ್ತು

ನೂತನ ರಾಷ್ಟ್ರೀಯ ಶಿಕ್ಷಣದ ಅಂಶಗಳಲ್ಲಿ ಮುಖ್ಯವಾಗಿ ತಾಂತ್ರಿಕ ಹಾಗೂ ಔದ್ಯೋಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಅದರ ಜೊತೆಗೆ ಜ್ಞಾನಾಧಾರಿತ ಅಥವಾ ಸಂಶೋಧನೆಯನ್ನು ಮುಖ್ಯವಾಗಿಸಿಕೊಂಡ ಪಠ್ಯಕ್ರಮ ರೂಪಿಸುವ ಮೂಲಕ ಶಿಕ್ಷಣ ನೀತಿಯ ವ್ಯಾಪ್ತಿಯನ್ನು ಹಿಗ್ಗಿಸಬೇಕಾಗಿದೆ. ಸೆಮಿಸ್ಟರ್‌ಗಳಿಗೆ ವಿಸ್ತರಿಸಬೇಕು. ಪಠ್ಯಕ್ರಮ ರಚನೆಯಲ್ಲಿ ಎಲ್ಲ ಭಾಗದ ತಜ್ಞರಿಗೂ ಅವಕಾಶ ನೀಡಬೇಕು.

ಹೊಸ ಜ್ಞಾನದ ಸೃಷ್ಟಿಗೆ ಪೂರಕವಾಗಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು.

ಡಾ.ವಿಕ್ರಮ ವಿಸಾಜಿ
ಸಹ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿ.ವಿ. ಕಲಬುರ್ಗಿ

ಜ್ಞಾನದ ಯುಗಕ್ಕೆ ಪೂರಕ

ಹೊಸ ಶಿಕ್ಷಣ ನೀತಿಯು 21ನೇ ಶತಮಾನದ ಜ್ಞಾನ ಯುಗಕ್ಕೆ ಪೂರಕವಾಗಿದೆ. ವಿದ್ಯಾರ್ಥಿಯು ವಿಷಯವಾರು ಕಲಿಕೆಯ ಜತೆಗೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ಕೌಶಲ ಬೆಳೆಸಿಕೊಂಡು ವೃತ್ತಿಪರತೆ ಗಳಿಸಿಕೊಳ್ಳಲು ನೆರವಾಗಲಿದೆ. ಮೌಲ್ಯ ಅಳವಡಿಸಿಕೊಳ್ಳಲು ಪೂರಕವಾಗಿದೆ.ಯಾವುದೇ ವಿದ್ಯಾರ್ಥಿ ಜಾಗತಿಕ ಮಟ್ಟದಲ್ಲಿ ಭಾಗವಹಿಸಲು, ಸ್ಪರ್ಧೆ ಒಡ್ಡಲು ಬೇಕಾದ ಜ್ಞಾನವನ್ನು ಹೊಸ ಶಿಕ್ಷಣ ನೀತಿಯಲ್ಲಿ ಪಡೆದುಕೊಳ್ಳಲು ಅವಕಾಶಗಳಿವೆ.

ಪ್ರೊ.ವೈ.ಎಸ್.ಸಿದ್ದೇಗೌಡ,ಕುಲಪತಿ, ತುಮಕೂರು ವಿಶ್ವವಿದ್ಯಾನಿಲಯ

ಚರ್ಚೆಗಳು ಹೆಚ್ಚು ನಡೆಯಬೇಕು

ಹೊಸಶಿಕ್ಷಣ ನೀತಿಯ ಬಗ್ಗೆ ಹೆಚ್ಚು ಚರ್ಚೆಗಳು ಸಮಾಜದಲ್ಲಿ ನಡೆಯಬೇಕು. ಆಶಯಗಳು ಕಾರ್ಯಗತವಾಗಲು ಸೂಕ್ತ ಶೈಕ್ಷಣಿಕ ಕ್ರಿಯಾಯೋಜನೆಗಳನ್ನು ಜತೆಯಲ್ಲಿಯೇ ಜಾರಿಗೊಳಿಸಬೇಕು. ಕಲಿಕೆಯಲ್ಲಿ ಸಮತೆಯನ್ನು ತರಬೇಕು. ಪ್ರತಿಯೊಂದು ಮಗುವನ್ನು ಒಳಗೊಳ್ಳುವ ಭಾರತೀಯ ಸಾಂಸ್ಕೃತಿಕ, ಪರಂಪರೆಯ ಮೌಲ್ಯಗಳು ಹಾಗೂ ಸಂವಿಧಾನದ ಮೌಲ್ಯಗಳು, ಜೀವನಕೌಶಲಗಳನ್ನು ಪಠ್ಯದಲ್ಲಿ ಅಳವಡಿಸುವುದು ಆದ್ಯತೆಯ ವಿಷಯವಾಗಬೇಕು.

ಪ್ರೊ.ಕೋಡಿ ರಂಗಪ್ಪ,ಶಿಕ್ಷಣ ತಜ್ಞರು, ಚಿಕ್ಕಬಳ್ಳಾಪುರ

ವಿದ್ಯಾರ್ಥಿಸ್ನೇಹಿ ನೀತಿ

ವಿದ್ಯಾರ್ಥಿಗಳು ತಮ್ಮ ಇಚ್ಛೆಗೆ ಅನುಗುಣವಾಗಿ ಯಾವುದೇ ವಿಭಾಗದ (ಕಲೆ, ವಾಣಿಜ್ಯ, ವಿಜ್ಞಾನ) ವಿಷಯವನ್ನು ಆಯ್ಕೆ ಮಾಡಲು ಅವಕಾಶವಿದೆ. ಈ ಮೊದಲು ವಿದ್ಯಾರ್ಥಿಯು ಕೋರ್ಸ್ ಅರ್ಧಕ್ಕೆ ಬಿಟ್ಟು, ಮರಳಿ ಸೇರಬೇಕೆಂದರೆ ಮೊದಲಿನಿಂದಲೇ ಆರಂಭಿಸಬೇಕಿತ್ತು. ಆದರೆ ನೂತನ ಪದ್ಧತಿಯಲ್ಲಿ ವಿದ್ಯಾರ್ಥಿ ಸ್ನೇಹಿಯನ್ನಾಗಿಸಲಾಗಿದೆ. ಇಷ್ಟು ಮಾತ್ರವಲ್ಲ, ಈಗ ಎನ್‌ಸಿಸಿ, ಎನ್‌ಎಸ್‌ಎಸ್‌, ಕ್ರೀಡೆ, ಸಂಗೀತ, ನಾಟಕಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇಲ್ಲಿನ ಸಾಧನೆ ಅಂಕಗಳು ಅಂತಿಮ ಫಲಿತಾಂಶಕ್ಕೆ ಸೇರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.

ಪ್ರೊ. ಕೆ.ಬಿ. ಗುಡಸಿ,ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

‘ಶಿಕ್ಷಣ ವ್ಯಾಪಾರೀಕರಣದ ಅಪಾಯ’

ರಾಷ್ಟ್ರೀಯ ಶಿಕ್ಷಣ ನೀತಿಯು ಕೇಂದ್ರ ಸರ್ಕಾರದ ಸಿದ್ಧಾಂತದಿಂದ ಪ್ರಭಾವಿತವಾಗಿದೆ. ಸಂಸತ್ತು ಮತ್ತು ಸಂಬಂಧಪಟ್ಟ ಜನರು ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಪ್ರಜಾತಾಂತ್ರಿಕ ಚರ್ಚೆ ಮಾಡದೇ ಜಾರಿಗೊಳಿಸಲಾಗುತ್ತಿದೆ. ನಮ್ಮ ನವೋದಯ ಚಳವಳಿ, ಸ್ವಾತಂತ್ರ್ಯ ಹೋರಾಟದ ಶ್ರೀಮಂತ ಪರಂಪರೆಯನ್ನು ಎಲ್ಲಿಯೂ ಗುರುತಿಸಿಲ್ಲ. ಎನ್ಇಪಿಯು ವಾಣಿಜ್ಯೀಕರಣ, ಕೇಂದ್ರೀಕರಣ ಮತ್ತು ಶಿಕ್ಷಣದ ಕೋಮುವಾದವನ್ನು ಗುರಿಯಾಗಿರಿಸಿಕೊಂಡಿದೆ. ಇದು ತಾರತಮ್ಯ, ಬಡವರ ವಿರೋಧಿ ಮತ್ತು ಕಾರ್ಪೊರೇಟ್ ಪರವಾಗಿದೆ. ಶಿಕ್ಷಣವು ಸರ್ಕಾರಿ ಮತ್ತು ಖಾಸಗಿಯವರ ಜವಾಬ್ದಾರಿಯಾಗಿದೆ ಎಂದು ಎನ್ಇಪಿ ಹೇಳುತ್ತಿರುವುದು ಆಘಾತಕಾರಿ.

ಎಚ್.ಟಿ.ಭರತಕುಮಾರ,ಶಿಕ್ಷಣ ತಜ್ಞ, ವಿಜಯಪುರ

ನೆಲಕ್ಕೆ ಅಂಟಿಕೊಂಡು ಜಾಗತಿಕವಾಗುವ ನೀತಿ

ರಾಷ್ಟ್ರೀಯ ಶಿಕ್ಷಣ ನೀತಿ ಬಹುವಾದ ಆಶಯಗಳನ್ನು ಒಳಗೊಂಡಿದೆ. ಇಪ್ಪತ್ತೊಂದನೇ ಶತಮಾನದ ಕೌಶಲಗಳನ್ನು ವಿದ್ಯಾರ್ಥಿ ಕೇಂದ್ರಿತವಾಗಿ ಕಲಿಸುವ ಯೋಚನೆ, ಯೋಜನೆಗಳಿವೆ.

ಅವುಗಳನ್ನು ಅರ್ಥೈಸಿಕೊಳ್ಳಲು ನಾಲ್ಕನೇ ಅಧ್ಯಾಯವನ್ನು ಬಿಡಿಯಾಗಿ, ಒಟ್ಟಾರೆ ನೀತಿಯನ್ನು ಇಡಿಯಾಗಿ ಅಧ್ಯಯನ ಮಾಡಿದಲ್ಲಿ ಆಶಯಗಳು ಮತ್ತು ಅನುಷ್ಠಾನದ ಜೈವಿಕ ಬೆಳವಣಿಗೆ ತಿಳಿಯುತ್ತದೆ. ಹಲವರು ಪರ–ವಿರೋಧಗಳನ್ನು ಮೇಲುಸ್ತರದಲ್ಲಿ ನೋಡಿಕೊಂಡ ಪ್ರತಿಕ್ರಿಯೆಗಳೇ ಹೆಚ್ಚಾಗಿ ಮಾಧ್ಯಮಗಳಲ್ಲಿ ಕಾಣುತ್ತಿರುವುದು ಬೇಸರದ ವಿಷಯ. ನಿವೃತ್ತ ಕುಲಪತಿಗಳು, ಪ್ರಾಧ್ಯಾಪಕರು, ಎಲ್ಲದರ ಮೇಲೂ ಮಾತಾಡುವ ಸಾಹಿತಿಗಳು ನೀತಿಯನ್ನು ಸಮಗ್ರವಾಗಿ ಅರಿಯದೆ ಪ್ರತಿಕ್ರಿಯಿಸಿ ಆರೋಗ್ಯಕರ ಚರ್ಚೆಯು ಹಾದಿ ತಪ್ಪುವಂತೆ ಮಾಡಿದ್ದು ನೋವಿನ ಸಂಗತಿ.ನೀತಿಯು ಭಾರತವನ್ನು ಈ ನೆಲಕ್ಕೆ ಬೆಸೆದು, ಸ್ಥಳೀಯ ಜಾನಪದ, ಜೀವನಕ್ಕೂ ಬೆಸೆಯುವುದರ ಜತೆಗೆ ಅಂತರರಾಷ್ಟ್ರೀಯ ಬೇಡಿಕೆಗೂ ಸಿದ್ಧಪಡಿಸುವಂತಿದೆ.

ಡಾ.ಹರಿಪ್ರಸಾದ್ ಜಿ.ವಿ.
ರಾಷ್ಟ್ರೀಯ ಶಿಕ್ಷಣ ನೀತಿ ಆಧಾರಿತ ಶಾಲಾ ಪಠ್ಯಕ್ರಮ ಅಧ್ಯಯನಕಾರರು, ಶಿವಮೊಗ್ಗ

ಅವಸರದ ಕ್ರಮ

ಹಲವು ವರ್ಷಗಳ ಬಳಿಕ ಶಿಕ್ಷಣ ನೀತಿ ಬದಲಾಗುವುದು ಸರಿ. ಆದರೆ, ರಾಜ್ಯದಲ್ಲಿ ಅವುಗಳನ್ನು ಜಾರಿ ಮಾಡಲು ಅವಸರ ಮಾಡಲಾಗಿದೆ ಹೊಸ ಶಿಕ್ಷಣ ನೀತಿಯಲ್ಲಿ ಕೆಲವು ಒಳ್ಳೆಯ ಅಂಶಗಳು ಇವೆ. ಇನ್ನು ಕೆಲವು ಅಂಶಗಳ ಬಗ್ಗೆ ತಿಳಿಯಬೇಕಿದೆ.

ಹೊಸ ನೀತಿ ಪ್ರಕಾರ ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯ ಆಯ್ಕೆ ಮಾಡಬಹುದು. ಇಷ್ಟವಾಗದ್ದನ್ನು ಬಿಡಬಹುದು. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ಇತಿಹಾಸ, ಭೌತವಿಜ್ಞಾನ, ಸಂಗೀತ ಆಯ್ಕೆ ಮಾಡಿಕೊಳ್ಳಬಹುದು. ತರಗತಿಗೆ ಯಾವಾಗ ಬೇಕಾದರೂ ಬರಬಹುದು. ಆದರೆ, ನಮ್ಮ ಕಾಲೇಜುಗಳಲ್ಲಿ ಕಲಾವಿಭಾಗ ಅಂದರೆ ಕಲೆಯ ವಿಷಯಗಳನ್ನಷ್ಟೇ ಕಲಿಸಲಾಗುತ್ತಿದೆ. ಹಾಗಾಗಿ ಇಲ್ಲಿವರೆಗೆ ಯಾರು ಏನು ಕಲಿತರೂ ಆಳವಾಗಿ ಕಲಿಯುತ್ತಿದ್ದರು. ಯಾವಾಗ ಬೇಕಾದರೂ ಬಂದು ಹೋಗುವ ಪದ್ಧತಿ ನಮ್ಮದಲ್ಲ. ಸರಿಯಾದ ಸಮಯಕ್ಕೆ ಬರಬೇಕು ಎಂಬುದು ನಮ್ಮ ಶಿಕ್ಷಣದ ಶಿಸ್ತು.

ಅದಕ್ಕಾಗಿ ಮೊದಲು ಯಾವುದಾದರೂ ಒಂದು ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡು, ಎರಡು ವರ್ಷ ಪರಾಂಬರಿಸಬೇಕು. ಹಿತ/ಅಹಿತಗಳ ಅಧ್ಯಯನಾ ನಂತರ ಉಳಿದೆಡೆ ಜಾರಿ ಮಾಡುವುದು ಸರಿಯಾದ ಮಾರ್ಗ.

ಡಾ. ಎಂ.ಜಿ. ಈಶ್ವರಪ್ಪ, ಶಿಕ್ಷಣ ತಜ್ಞರು, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT