ಶುಕ್ರವಾರ, ಮೇ 20, 2022
19 °C
ಸಚಿವ ಬಿ.ಸಿ.ನಾಗೇಶ್‌ ಹೇಳಿಕೆ; ಕಾರ್ಯಪಡೆ ವರದಿ ಆಧರಿಸಿ ಕ್ರಮ

ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ, ಮುಂದಿನ ವರ್ಷವೇ ಜಾರಿ: ಬಿ.ಸಿ.ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರಾಥಮಿಕ ಶಿಕ್ಷಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಲಾಗುತ್ತದೆ. ಇದಕ್ಕೆ ಸಿದ್ಧತೆಗಳೂ ನಡೆಯುತ್ತಿವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಬುಧವಾರ ಮಾತನಾಡಿದರು. 

‘ಎನ್‌ಇಪಿ ಜಾರಿ ಸಂಬಂಧ ಕಾರ್ಯಪಡೆ ರಚಿಸಲಾಗಿದೆ. ನೀತಿಯನ್ನು ಯಾವ ತರಗತಿಯಿಂದ ಹೇಗೆ ಅನುಷ್ಠಾನಗೊಳಿಸಬೇಕು ಎಂಬುದರ ಕುರಿತು ಕಾರ್ಯಪಡೆಯ ತಜ್ಞರು ವರದಿ ನೀಡಲಿದ್ದಾರೆ. ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಎನ್‌ಇಪಿಯಲ್ಲಿ ಅಡಕವಾಗಿರುವ ಹಲವು ಅಂಶಗಳ ಬಗ್ಗೆ ಅರಿಯದೆಯೇ ಅದನ್ನು ಹಲವರು ವಿರೋಧಿಸುತ್ತಿದ್ದಾರೆ. ಹಾಗೆ ವಿರೋಧಿಸುವವರನ್ನು ಮೂರು ಗುಂಪುಗಳನ್ನಾಗಿ ವಿಭಾಗಿಸಬಹುದು. ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪಗಳಿವೆ. ಅದು ಬದಲಾಗಬೇಕು. ಅದು ಇಂದಿನ ಅಗತ್ಯ ಕೂಡ’ ಎಂದು ತಿಳಿಸಿದರು. 

‘ಈಗಿನ ಶಿಕ್ಷಣ ಪದ್ಧತಿ ಕುಟುಂಬಗಳನ್ನು ವಿಭಾಗಿಸುವ ವ್ಯವಸ್ಥೆಗೆ ನಾಂದಿ ಹಾಡುತ್ತಿದೆ. 75 ವರ್ಷಗಳ ಶಿಕ್ಷಣ ವ್ಯವಸ್ಥೆಯು ಸ್ವಾರ್ಥದ ಬದುಕನ್ನು ಕಲಿಸಿಕೊಟ್ಟಿದೆ. ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಈ ಶಿಕ್ಷಣ ವ್ಯವಸ್ಥೆಯನ್ನು ಅಂದೇ ಟೀಕಿಸಿದ್ದರು. ಪಂಚಶೀಲ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಆಗ್ರಹಿಸಿದ್ದ ಅವರು ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿದ್ದರು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು