ಮಂಗಳವಾರ, ಏಪ್ರಿಲ್ 20, 2021
32 °C
ಪ್ರಧಾನಿ ಮೋದಿ ಅಹಂಕಾರದ ನೂರನೇ ದಿನ: ವಿಷಾದ

ಕೃಷಿ ಕಾಯ್ದೆಗಳು ಸತ್ತವು: ಯೋಗೇಂದ್ರ ಯಾದವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ದೆಹಲಿಯಲ್ಲಿ 100 ದಿನದಿಂದ ರೈತರು ನಿರಂತರ ಮುಷ್ಕರ ನಡೆಸುತ್ತಿರುವುದರಿಂದಾಗಿ ಮೂರು ಕರಾಳ ಕೃಷಿ ಕಾಯ್ದೆಗಳು ಸತ್ತವು. ಆದರೆ ಅವುಗಳ ಮರಣಪ್ರಮಾಣ ಪತ್ರ ಸಿಕ್ಕಿಲ್ಲ ಅಷ್ಟೇ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಮುಖಂಡ ಯೋಗೇಂದ್ರ ಯಾದವ್ ಪ್ರತಿಪಾದಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ರೈತ ಸಂಘವು ಶನಿವಾರ ಏರ್ಪಡಿಸಿದ್ದ ರೈತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಅವರು, ‘ಪ್ರಧಾನಿ ಮೋದಿ ತಮ್ಮ ಹಠಮಾರಿತನವನ್ನು ಮುಂದುವರಿಸಿದರೆ ಮುಷ್ಕರವನ್ನು ಇನ್ನೂರು ದಿನವೇನು, ಮುನ್ನೂರು ದಿನವಾದರೂ ಮುಂದುವರಿಸುತ್ತೇವೆ’ ಎಂದರು.

‘ದೆಹಲಿಯಲ್ಲಿ 100 ದಿನ ಮುಷ್ಕರ ನಡೆಸಿ ಏನು ಸಾಧಿಸಿದಿರಿ’ ಎಂದು ಪ್ರಶ್ನಿಸಿದ ರೈತರೊಬ್ಬರಿಗೆ ಪ್ರತಿಕ್ರಿಯಿಸಿದ ಅವರು, ‘ಮುಷ್ಕರವು ದೇಶದಲ್ಲಿರುವ ಎಲ್ಲ ರೈತರನ್ನು ಅಖಂಡವಾಗಿ ಒಗ್ಗೂಡಿಸಿತು. ರೈತರ ಶಕ್ತಿ ಏನೆಂದು ಸರ್ಕಾರಕ್ಕೆ ಗೊತ್ತಾಯಿತು. ಇನ್ನು ಮುಂದೆ ಬರುವ ಯಾವುದೇ ಸರ್ಕಾರವೂ ರೈತ ವಿರೋಧಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ’ ಎಂದರು.

‘100 ದಿನದ ಮುಷ್ಕರದ ಸಾಧನೆ ಏನು ಎಂಬ ಪ್ರಶ್ನೆಯನ್ನು ನೀವು ಪ್ರಧಾನಿ ಮೋದಿಯವರಿಗೇ ಕೇಳಬೇಕು. ಏಕೆಂದರೆ ಇದು ಕೇಂದ್ರ ಸರ್ಕಾರದ ಹಠಮಾರಿತನದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅಹಂಕಾರದ ನೂರನೇ ದಿನ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದಯತೆ ಮತ್ತು ದಮನ ಗುಣದ ನೂರನೇ ದಿನ’ಎಂದು ವಿಷಾದಿಸಿದರು.

‘100 ದಿನ ಕಳೆದರೆ ಎಲ್ಲರೂ ಉತ್ಸವವನ್ನು ಆಚರಿಸಿಕೊಳ್ಳುತ್ತಾರೆ. ಶುಭಾಶಯ ವಿನಿಯಮ ಮಾಡಿಕೊಳ್ಳುತ್ತಾರೆ. ಆದರೆ ನಾವು ಸೆಂಚುರಿ ಹೊಡೆದು ಸಂಭ್ರಮಿಸಲು ಬಂದಿಲ್ಲ. ಬೇಡಿಕೆಗಳು ಈಡೇರಿದ ಕೂಡಲೇ ನಮ್ಮ ಮನೆಗಳಿಗೆ ವಾಪಸು ಹೋಗುತ್ತೇವೆ. ಈಗ ದೆಹಲಿಯಲ್ಲಿ ಮೈಕೊರೆಯುವ ಚಳಿಯ ನಡುವೆ ಮುಷ್ಕರ ನಡೆಸುತ್ತಿದ್ದೇವೆ. ಹೀಗಾಗಿ ಇದು ನಮಗೆ ಸಂಭ್ರಮದ ದಿನವಲ್ಲ’ ಎಂದು ಹೇಳಿದರು.

‘ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವುದಕ್ಕಿಂತಲೂ ಹೆಚ್ಚು ಮುಳ್ಳು ಬೇಲಿಗಳನ್ನು ದೆಹಲಿಯ ಮುಷ್ಕರದ ಸ್ಥಳದಲ್ಲಿ ಹಾಕಲಾಗಿದೆ. ಇಂಥ ಅಮಾನವೀಯ ನಡೆಗಳನ್ನು ವಿರೋಧಿಸಲೆಂದೇ ದೇಶದಾದ್ಯಂತ ಕಪ್ಪು ಬಾವುಟ ಪ್ರದರ್ಶಿಸಲಾಗುತ್ತಿದೆ’ ಎಂದರು.

‘ಇದು ಯಾರೋ ಮೂವರು ರೈತರು ಮೂರು ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಹೋರಾಟವಲ್ಲ. ದೇಶದ ಎಲ್ಲ ರೈತರ ಘನತೆಗಾಗಿ ನಡೆಸುತ್ತಿರುವ ಹೋರಾಟ’ ಎಂದರು.

‘ಕಾಯ್ದೆಗಳ ವಿರುದ್ಧ ರೈತರ ಐತಿಹಾಸಿಕ ಆಂದೋಲನ ದೆಹಲಿಯಿಂದ ಆರಂಭವಾಗಿದೆ. ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಆಂದೋಲನವು ಕರ್ನಾಟಕದಿಂದ ಶುರುವಾಗುತ್ತಿದೆ. ಇದು ಕೂಡ ರಾಷ್ಟ್ರವ್ಯಾಪಿ ಆಂದೋಲನವಾಗಲಿದೆ’ ಎಂದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೆಂದ್ರ ಅಧ್ಯಕ್ಷತೆ ವಹಿಸಿದ್ದರು. ಪಂಜಾಬ್ ಕಿಸಾನ್ ಸಭಾ ಅಧ್ಯಕ್ಷ ಸತನಮ್ ಸಿಂಗ್, ಹರಿಯಾಣದ ಜೈ ಕಿಸಾನ್ ಅಂದೋಲನದ ಪ್ರಧಾನ ಕಾರ್ಯದರ್ಶಿ ದೀಪಕ್ ಲಂಬೊ, ವಿವಿಧ ಸಂಘಟನೆಗಳ ಮುಖಂಡರಾದ ಚಾಮರಸ ಮಾಲಿಪಾಟೀಲ, ಜೆ.ಎಂ.ವೀರಸಂಗಯ್ಯ, ಎಂ.ಶಂಕರಣ್ಣ, ರವಿಕಿರಣ ಪೂಣಚ್ಚು, ಯು ಬಸವರಾಜ್, ಬಿ.ಆರ್‌.ಪಾಟೇಲ್, ಎಸ್‌.ಆರ್‌.ಹಿರೇಮಠ್, ಆರ್.ಬಿ.ಯಾವಗಲ್, ಅಮ್ಜದ್ ಪಾಶ, ವಿ.ಎಂ.ಶಿವಶಂಕರ್, ಕುಮಾರ್ ಸಮತಳ, ಪೃಥ್ವಿರಾಜ್, ಜೆ.ಸತ್ಯಬಾಬು, ವಸಂತ ಕಾಳೆ, ಮಹಾರುದ್ರಗೌಡ, ಪಾಲಣ್ಣ, ಬಿ.ಗೋಣಿ ಬಸಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು