ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ಉಲ್ಬಣಿಸಿದರಷ್ಟೇ ಆಸ್ಪತ್ರೆಗೆ ದಾಖಲು: ಆರೋಗ್ಯ ಇಲಾಖೆ ಸೂಚನೆ

ಕೋವಿಡ್‌ ರೋಗಿಗಳ ಚಿಕಿತ್ಸೆ: ಹೊಸ ಮಾರ್ಗಸೂಚಿ ಪ್ರಕಟ lಪರಿಸ್ಥಿತಿ ನಿರ್ವಹಣೆ–ಪ್ರತಿಪಕ್ಷಗಳ ತರಾಟೆ
Last Updated 20 ಏಪ್ರಿಲ್ 2021, 18:02 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಮಂಗಳವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, ರೋಗ ಲಕ್ಷಣಗಳು ಉಲ್ಬಣಿಸಿದವರನ್ನು ಮಾತ್ರವೇ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸೂಚನೆ ನೀಡಿದೆ.

ಹೋಂ ಕ್ವಾರಂಟೈನ್‌, ಆಸ್ಪತ್ರೆಗೆ ದಾಖಲಾತಿ, ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರ, ಆಸ್ಪತ್ರೆಯಿಂದ ಬಿಡುಗಡೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯಲ್ಲಿ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಲಾಗಿದೆ. ರೋಗ ಲಕ್ಷಣವೇ ಇಲ್ಲದವರು ಅಥವಾ ಕಡಿಮೆ ರೋಗಲಕ್ಷಣ ಇರುವವರನ್ನು ಒಬ್ಬ ಸಹಾಯಕರ ನೆರವಿನಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ.

‘38 ಡಿಗ್ರಿಗಿಂತ ಕಡಿಮೆ ಜ್ವರ ಹೊಂದಿರುವ ಹಾಗೂ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ 95ಕ್ಕಿಂತ ಕಡಿಮೆ ಇಲ್ಲದಿದ್ದರೆ ಅಂತಹವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಬಹುದು. 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ತೀವ್ರ ಸ್ವರೂಪದ ಕಾಯಿಲೆಗಳನ್ನು ಹೊಂದಿರುವವರನ್ನು ವೈದ್ಯರ ಅಭಿಪ್ರಾಯ ಪಡೆದ ಬಳಿಕವೇ ಹೋಂ ಕ್ವಾರಂಟೈನ್‌ನಲ್ಲಿ ಇಡಬಹುದು. ಹಾಲುಣಿಸುವ ತಾಯಂದಿರನ್ನೂ ವೈದ್ಯರ ಸಲಹೆಯ ಆಧಾರದ ಮೇಲೆ ಹೋಂ ಕ್ವಾರಂಟೈನ್‌ನಲ್ಲಿ ಇರಿಸಬಹುದು’ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಎರಡು ವಾರಗಳೊಳಗೆ ಹೆರಿಗೆಯಾಗಬಹುದಾದ ಗರ್ಭಿಣಿಯರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸುವಂತಿಲ್ಲ. ಮನೆಯಲ್ಲಿ ಹೆಚ್ಚು ಗಾಳಿಯಾಡುವ ಪ್ರತ್ಯೇಕ ಕೊಠಡಿ ಮತ್ತು ಪ್ರತ್ಯೇಕ ಶೌಚಾಲಯ ಹೊಂದಿರುವವರಿಗೆ ಮಾತ್ರವೇ ಹೋಂ ಕ್ವಾರಂಟೈನ್‌ನಲ್ಲಿ ಇರಲು ಸಮ್ಮತಿಸಬಹುದು ಎಂದು ನಿರ್ದೇಶನ ನೀಡಿದ್ದಾರೆ.

ಹೋಂ ಕ್ವಾರಂಟೈನ್‌ ಆಯ್ಕೆ ಮಾಡಿಕೊಂಡ ವ್ಯಕ್ತಿಯು ನಿಗದಿತ ಅವಧಿಯವರೆಗೂ ಮನೆಯ ಇತರರ ಸಂಪರ್ಕಕ್ಕೆ ಬಾರದೆ ಪ್ರತ್ಯೇಕವಾಸದಲ್ಲಿ ಇರಬೇಕು. ಮನೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಹೊಂದಿರದ ವ್ಯಕ್ತಿಗಳನ್ನು ಕೋವಿಡ್‌ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕು ಎಂದು ಸೂಚಿಸಿದ್ದಾರೆ.

ಮಧ್ಯಮ ಮತ್ತು ತೀವ್ರ ಸ್ವರೂಪದ ರೋಗಲಕ್ಷಣ ಇರುವ ಕೋವಿಡ್‌ ರೋಗಿಗಳನ್ನು ಮಾತ್ರವೇ ನಿಗದಿತ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಕಡಿಮೆ ರೋಗ ಲಕ್ಷಣ ಇರುವವರನ್ನು ಮನೆಯಲ್ಲಿ ಅಥವಾ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಇರಿಸಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೋವಿಡ್‌ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಈ ಹಿಂದೆ ಅನುಸರಿಸುತ್ತಿದ್ದ ಕ್ರಮಗಳನ್ನೇ ಪಾಲಿಸಬೇಕು. ರೋಗಿಯೊಬ್ಬರು ಆಸ್ಪತ್ರೆಗೆ ದಾಖಲಾದ ದಿನವನ್ನು ಆಧರಿಸಿ ಬಿಡುಗಡೆಗೆ ನಿರ್ಧಾರ ಕೈಗೊಳ್ಳಬಾರದು. ಅವರಿಗೆ ರೋಗಲಕ್ಷಣ ಕಾಣಿಸಿಕೊಂಡ ದಿನವನ್ನು ಆಧರಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಮೂರು ದಿನಗಳಿಂದ ಸತತವಾಗಿ ಜ್ವರ ಮತ್ತು ಇತರ ರೋಗಲಕ್ಷಣ ಇಲ್ಲದೇ ಇರುವವರು ಹಾಗೂ ನಾಲ್ಕು ದಿನಗಳಿಂದ ಸತತವಾಗಿ 95ರಷ್ಟು ರಕ್ತದ ಆಮ್ಲಜನಕದ ಪ್ರಮಾಣಟ ಹೊಂದಿದ್ದರೆ ಅಂತಹವರನ್ನು ಆಸ್ಪತ್ರೆಯಿಂದ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಬಹುದು ಎಂದು ಸೂಚಿಸಲಾಗಿದೆ.

ಕೋವಿಡ್‌– ಬಿಜೆಪಿ ಸಮನ್ವಯ ಸಮಿತಿ ರಚನೆ: ಕೋವಿಡ್‌ ನಿರ್ವಹಣೆಯ ಸಂಬಂಧ ಬಿಜೆಪಿಯ ರಾಜ್ಯ ಘಟಕ ಸಮನ್ವಯ ಸಮಿತಿರಚಿಸಿದೆ.

ಎನ್‌.ರವಿಕುಮಾರ್‌, ಕೇಶವಪ್ರಸಾದ್‌, ಚಂದ್ರಶೇಖರ್ ಕವಟಗಿ ಮತ್ತು ಅಮರನಾಥ ಪಾಟೀಲ ಸಮಿತಿಯಲ್ಲಿ ಇದ್ದಾರೆ.

ಪ್ರತೀ ಕೋವಿಡ್‌ ಸಾವು ಸರ್ಕಾರಿ ಕೊಲೆ: ಎಸ್‌.ಆರ್‌. ಪಾಟೀಲ

ಬೆಂಗಳೂರು: ‘ರಾಜ್ಯದಲ್ಲಿ ಕೊರೊನಾದಿಂದ ಸಂಭವಿಸುತ್ತಿರುವ ಪ್ರತೀ ಸಾವು ಕೂಡ ಸರ್ಕಾರಿ ಪ್ರಾಯೋಜಿತ ಕೊಲೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಆಸ್ಪತ್ರೆಗಳಲ್ಲಿ ರೆಮ್‌ಡಿಸಿವರ್ ಇಲ್ಲ, ಬೆಡ್ ಇಲ್ಲ, ಆ್ಯಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ, ವ್ಯಾಕ್ಸಿನ್ ಕೊರತೆಯ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಕನಿಷ್ಠ ಚಿಕಿತ್ಸೆಯನ್ನೂ ನೀಡಲಾಗದ ಈ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಮೇ ತಿಂಗಳ ಅಂತ್ಯದ ವೇಳೆಗೆ ಕೊರೊನಾ ವೈರಾಣು ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿದೆ. ಮುಂದೆ ಭೀಕರ ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕಾದ ಸರ್ಕಾರ ಆಸ್ಪತ್ರೆಗಳಲ್ಲಿ ಬೆಡ್ ಹೆಚ್ಚಳ, ಆ್ಯಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಮಾಡದೇ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ’ ಎಂದಿದ್ದಾರೆ.

ಲಾಕ್‌ಡೌನ್‌ ಅನಿವಾರ್ಯ: ಎಚ್‌ಡಿಕೆ

ಬೆಂಗಳೂರು: ಕಳೆದ ವರ್ಷ ಕೋವಿಡ್‌ನ ಆರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಿಸಿತ್ತು. ಅದರಿಂದಾಗಿ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು. ಈಗಲೂ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಅನಿವಾರ್ಯ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಗ್ಗೆ ನಾನು ಮಾರ್ಚ್‌ 15ರಂದೇ ಟ್ವೀಟ್‌ ಮಾಡಿದ್ದೆ. ಈಗ ಆರ್ಥಿಕತೆಗೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಲಾಕ್‌ಡೌನ್‌ಗೆ ಸರ್ಕಾರ ಮುಂದಾಗುತ್ತಿಲ್ಲ. ಆದರೆ, ಇಂತಹ ನಿರ್ಧಾರದಿಂದ ಸರ್ಕಾರ ಅನಾಹುತವನ್ನು ಆಹ್ವಾನಿಸುತ್ತಿದೆ ಎಂಬುದು ನನ್ನ ಅಭಿಪ್ರಾಯ’ ಎಂದರು.

ಕಳೆದ ವರ್ಷ ಲಾಕ್‌ಡೌನ್‌ ಮಾಡಿದ್ದಾಗ ಸರ್ಕಾರ ಅಥವಾ ಜನರು ಮುಳುಗಿ ಹೋಗಲಿಲ್ಲ. ಈಗ ತಕ್ಷಣವೇ ಲಾಕ್‌ಡೌನ್‌ ಘೋಷಿಸಬೇಕು. ರಾತ್ರಿ ಕರ್ಫ್ಯೂ ಮೂಲಕ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ. ಆರ್ಥಿಕ ಕಾರಣ ನೀಡಿ ಲಾಕ್‌ಡೌನ್‌ನಿಂದ ದೂರ ಉಳಿಯಬಾರದು. ದೊಡ್ಡ ನಗರಗಳಲ್ಲಿ ತಕ್ಷಣವೇ ಲಾಕ್‌ಡೌನ್‌ ಜಾರಿಗೊಳಿಸಬೇಕು. ಮಹಾರಾಷ್ಟ್ರ ಸೇರಿದಂತೆ ಸೋಂಕು ಹೆಚ್ಚಾಗಿರುವ ರಾಜ್ಯಗಳಿಂದ ಜನರು ರಾಜ್ಯಕ್ಕೆ ಬರದಂತೆ ತಡೆಯಬೇಕು ಎಂದು ಹೇಳಿದರು.

‘ರಾಜ್ಯ ಸರ್ಕಾರವೇ ರಚಿಸಿರುವ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ತಜ್ಞ ವೈದ್ಯರು ಕೋವಿಡ್‌ ಎರಡನೇ ಅಲೆ ವೇಗವಾಗಿ ಹರಡುತ್ತದೆ ಎಂಬುದನ್ನು ನವೆಂಬರ್‌ ತಿಂಗಳಿನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನಕ್ಕೆ ತಂದಿದ್ದರು. ನಾವು ಮೈ ಮರೆತೆವೇನೋ ಎಂಬ ನೋವಿದೆ. ಎಲ್ಲಿ ಎಡವಿದ್ದೇವೆ? ಏಕೆ ಈ ರೀತಿಯ ಅನಾಹುತಗಳು ಸಂಭವಿಸುತ್ತಿವೆ? ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರವೂ ಸೇರಿದಂತೆ ಯಾರನ್ನೂ ದೂಷಿಸುವುದಿಲ್ಲ’ ಎಂದರು.

ಬಡವರಿಗೆ ನೇರವಾಗಿ ಆರ್ಥಿಕ ನೆರವು ಒದಗಿಸುವ ಕೆಲಸ ಮಾಡಬೇಕು. ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ನಿವಾರಿಸಬೇಕು ಎಂದು ಒತ್ತಾಯಿಸಿದರು.

ತಜ್ಞರ ವರದಿ ನಿರ್ಲಕ್ಷ್ಯವೇ ದೊಡ್ಡ ಅಪರಾಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರವೇ ರಚಿಸಿರುವ ತಾಂತ್ರಿಕ ಸಲಹಾ ಸಮಿತಿ ಕೊರೊನಾ ಎರಡನೇ ಅಲೆಯ ಬಗ್ಗೆ ನವೆಂಬರ್‌ನಿಂದೀಚೆಗೆ ಮೂರು ವರದಿ ನೀಡಿದೆ. ಆಗಲೇ ಸರ್ಕಾರ ಎಚ್ಚರ ವಹಿಸಬೇಕಿತ್ತು. ಅದರ ಬದಲು ತಜ್ಞರ ವರದಿಯನ್ನೇ ನಿರ್ಲಕ್ಷ್ಯ ಮಾಡಿರು
ವುದು ಸರ್ಕಾರದ ದೊಡ್ಡ ಅಪರಾಧ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸರ್ವಪಕ್ಷ ಸಭೆಯ ಆರಂಭದಲ್ಲೇ ರಾಜ್ಯಪಾಲರು ಸಭೆ ಕರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ ಅವರು, ‘ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದೇ ಸಂವಿಧಾನಬಾಹಿರ. ರಾಜ್ಯದ ಆಡಳಿತದಲ್ಲಿ ರಾಜ್ಯಪಾಲರಿಗೆ ಹಸ್ತಕ್ಷೇಪ ಮಾಡುವ ಅಧಿಕಾರ ಸಂವಿಧಾನದಲ್ಲಿ ಕೊಟ್ಟಿಲ್ಲ. ಹೀಗಾಗಿ, ಈ ಸಭೆಗೆ ನನ್ನ ಸಂವಿಧಾನಾತ್ಮಕವಾದ ತಕರಾರು ಇದೆ’ ಎಂದರು.

‘ಯಡಿಯೂರಪ್ಪ ಅವರು ಈ ಸಭೆಯ ಬಗ್ಗೆ ಅವರ ವಕೀಲರು, ಅಡ್ವೊಕೇಟ್‌ ಜನರಲ್‌ ಅವರಿಂದ ಅಭಿಪ್ರಾಯ ಪಡೆದಿದ್ದಾರೊ ಗೊತ್ತಿಲ್ಲ. ಈ ಸಭೆಯ ಅಭಿಪ್ರಾಯಗಳ ಆಧಾರದಲ್ಲಿ ರಾಜ್ಯಪಾಲರು ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಇಲ್ಲ. ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳಬೇಕು. ಆದರೂ ರಾಜ್ಯಪಾಲರು ಇಂಥ ಸಭೆ ಕರೆದಿರುವುದರಿಂದದ ಅವರಿಗೆ ಗೌರವ ಕೊಡುವ ದೃಷ್ಟಿಯಿಂದ ಭಾಗವಹಿಸಿದ್ದೇನೆ’ ಎಂದರು.

‘ಕೋವಿಡ್‌ ಎರಡನೇ ಅಲೆಯ ಬರುವ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ಇದ್ದರೂ ಇಲ್ಲಿಯವರೆಗೆ ಸರ್ವಪಕ್ಷ ಸಭೆ ಕರೆಯದೇ ಇದ್ದುದು ತಪ್ಪು’ ಎಂದು ಅವರು ಹೇಳಿದರು.


ರಾಜ್ಯಪಾಲರಿಂದ ಸಭೆ: ಸರ್ಕಾರದ ವೈಫಲ್ಯವೇ?

ಮೈಸೂರು: ‘ಕೋವಿಡ್‌ನಿಂದ ಸತ್ತವರನ್ನು ಕೇಳುವವರಿಲ್ಲ. ಹೂಳಲು ಜಾಗವಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌, ವೆಂಟಿಲೇಟರ್‌ಗಳಿಲ್ಲ. ಈ ಸರ್ಕಾರಕ್ಕೆ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಮಂಗಳವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ನಾನು ಆಡಳಿತ ಪಕ್ಷದಲ್ಲಿದ್ದೇನೆ ನಿಜ. ಆದರೆ, ಇದನ್ನೆಲ್ಲ ಹೇಳದೇ ಇದ್ದರೆ, ನನಗೆ ನಾನೇ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ’ ಎಂದರು.

‘ಯಾವ ಮಂತ್ರಿಗೂ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಕೊಟ್ಟಿಲ್ಲ. ಪ್ರತಿ ಕೆಲಸಕ್ಕೂ ಅವರ ಬಳಿಯೇ ಹೋಗಬೇಕಾದ ಸ್ಥಿತಿ ಇದೆ. ಯಾವ ಐಎಎಸ್‌ ಅಧಿಕಾರಿಯೂ ಮಂತ್ರಿಗಳ ಮಾತು ಕೇಳುತ್ತಿಲ್ಲ. ಸಚಿವರಲ್ಲಿ ಏನನ್ನಾದರೂ ಕೇಳಿದರೆ, ಮುಖ್ಯಮಂತ್ರಿ ಬಂದು ತೀರ್ಮಾನ ತೆಗೆದುಕೊಳ್ಳುವರು ಎನ್ನುವರು. ಹಾಗಾದಲ್ಲಿ ಸಚಿವ ಸಂಪುಟ ಏಕಿರಬೇಕು, ಸಚಿವರೆಲ್ಲ ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಕೋವಿಡ್‌ಗೆ ಸಂಬಂಧಿಸಿ ರಾಜ್ಯಪಾಲರು ಸಭೆ ನಡೆಸುತ್ತಿದ್ದಾರೆ ಎಂಬುದು ಮಾಧ್ಯಮಗಳಿಂದ ಗೊತ್ತಾಯಿತು. ಚುನಾಯಿತ ಸರ್ಕಾರ ವಿಫಲವಾದರೆ ಮಾತ್ರ ರಾಜ್ಯಪಾಲರು ಮಧ್ಯಪ್ರವೇಶಿಸುವರು. ಹಾಗಾದಲ್ಲಿ ಕೊರೊನಾ ಹಿಮ್ಮೆಟ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆಯೇ’ ಎಂದು ಅವರು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT