ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್‌ ಹೂಡಿಕೆದಾರರ ನೆರವಿಗೆ ಪ್ರತ್ಯೇಕ ಪ್ರಾಧಿಕಾರ: ಸಂಪುಟ ಸಭೆ ಅನುಮೋದನೆ

ತುಮಕೂರು, ಹುಬ್ಬಳ್ಳಿಯಲ್ಲಿ ವಿಶೇಷ ಹೂಡಿಕೆ ವಲಯ
Last Updated 3 ನವೆಂಬರ್ 2022, 15:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆಗಿರುವ ತೊಡಕುಗಳನ್ನು ತ್ವರಿತಗತಿಯಲ್ಲಿ ನಿವಾರಿಸಿ, ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡುವ ‘ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ಕ್ಕೆ ಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ‘ಮುಂದಿನ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಪರಾಮರ್ಶೆ ನಡೆಸಿ, ವಿಧಾನಮಂಡಲ ಅಧಿವೇಶನದಲ್ಲಿ ಅಧಿನಿಯಮವನ್ನು ಮಂಡಿಸಲಾಗುವುದು’ ಎಂದು ಅವರು ಹೇಳಿದರು.

ಬಂಡವಾಳ ಹೂಡಿಕೆಗೆ ಇನ್ನೂ ಹಲವು ಅಡೆತಡೆಗಳು ಇವೆ. ಇದರಿಂದಾಗಿ ಹೂಡಿಕೆದಾರರಿಗೆ ತ್ವರಿತಗತಿಯಲ್ಲಿ ಅನುಮತಿ ಸಿಗುತ್ತಿಲ್ಲ. ಹೊಸ ಕಾಯ್ದೆಯಿಂದ ರಾಜ್ಯ ಮಟ್ಟದ ಪ್ರಾಧಿಕಾರವೊಂದನ್ನು ರಚಿಸಲಾಗುವುದು. ಅಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ನಿರ್ದೇಶಕರೂ ಸದಸ್ಯರಾಗಿರುತ್ತಾರೆ. ಒಂದೇ ಕಡೆ ಒಪ್ಪಿಗೆ ಪಡೆಯಲು ಸಾಧ್ಯವಾಗುತ್ತದೆ. ಈ ಪ್ರಾಧಿಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ (ಕೆಐಎಡಿಬಿ) ಪೂರಕವಾಗಿರುತ್ತದೆ. ಆರಂಭದಲ್ಲಿಕೆಐಎಡಿಬಿಯೇ ಉಸ್ತುವಾರಿ ವಹಿಸುತ್ತದೆ ಎಂದು ಹೇಳಿದರು.

ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ, ವಸಾಹತುಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ, ನಿಯಂತ್ರಣ, ನಿರ್ವಹಣೆಯನ್ನು ಪ್ರಾಧಿಕಾರವೇ ನೋಡಿಕೊಳ್ಳಲಿದೆ. ಎಲ್ಲೆಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಿದೆ ಎಂದು ಜಾಗವನ್ನು ಗುರುತಿಸುವ ಜವಾಬ್ದಾರಿಯನ್ನು ಪ್ರಾಧಿಕಾರಕ್ಕೇ ನೀಡಲಾಗುತ್ತದೆ. ಭೂಸ್ವಾಧೀನದಿಂದ ಹಿಡಿದು ತೆರಿಗೆ ನಿಗದಿ ಮತ್ತು ಸಂಗ್ರಹದವರೆಗೆ ಎಲ್ಲವನ್ನೂ ಪ್ರಾಧಿಕಾರವೇ ನೋಡಿಕೊಳ್ಳುತ್ತದೆ. ಆರಂಭದಲ್ಲಿ ತುಮಕೂರು ಮತ್ತು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಪ್ರಾಧಿಕಾರ ಸಂಗ್ರಹಿಸಿದ ತೆರಿಗೆಯಲ್ಲಿ ಶೇ 30 ರಷ್ಟನ್ನು ಅಲ್ಲಿನ ಸ್ಥಳೀಯ ಸಂಸ್ಥೆಗೆ ಪಾವತಿ ಮಾಡಬೇಕಾಗುತ್ತದೆ ಎಂದೂ ಅವರು ತಿಳಿಸಿದರು.

ಸಂಪುಟ ಸಭೆಯ ಇತರ ನಿರ್ಣಯಗಳು:

* ಬಳ್ಳಾರಿಯಲ್ಲಿ 5 ಎಕರೆ 10 ಗುಂಟೆ ಮತ್ತು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ 23 ಎಕರೆ 25 ಗುಂಟೆ ಭೂಮಿಯನ್ನು ಕ್ರಿಕೆಟ್‌ ಮೈದಾನ ರೂಪಿಸಲು ಕೆಎಸ್‌ಸಿಎಗೆ ಲೀಸ್‌ ಆಧಾರದಲ್ಲಿ ನೀಡಲು ನಿರ್ಧಾರ

* ಐಟಿ ಮತ್ತು ಐಟಿಯೇತರ ಮೂಲ ಸೌಕರ್ಯವನ್ನು ಉನ್ನತೀಕರಿಸಲು ಮತ್ತು ಸಂಪರ್ಕ ಜಾಲದ ವ್ಯಾಪ್ತಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿವರೆಗೆ ವಿಸ್ತರಿಸಲು ₹931.15 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ

* ಜಲಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಒದಗಿಸಲು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲ್ಲೂಕುಗಳಿಗೆ ₹1,565 ಕೋಟಿ, ಹಾಸನ ಜಿಲ್ಲೆ ಚನ್ನರಾಯಪಟ್ಟಣಕ್ಕೆ ₹391 ಕೋಟಿ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿಗೆ ₹422 ಕೋಟಿ, ತೀರ್ಥಹಳ್ಳಿ ತಾಲ್ಲೂಕಿಗೆ ₹344 ಕೋಟಿ ಬಿಡುಗಡೆಗೆ ಅನುಮೋದನೆ

*ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆಯ ಶಾಖೆಯನ್ನು ತೆರೆಯಲು ₹50 ಕೋಟಿ ಬಿಡುಗಡೆಗೆ ಅನುಮೋದನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT