ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3.20 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ: ಸಚಿವ ಸುರೇಶ್‌ ಕುಮಾರ್

‘ಓದು-ಬರಹ’ ಅಭಿಯಾನಕ್ಕೆ ಏ. 2ರಂದು ಚಾಲನೆ
Last Updated 29 ಮಾರ್ಚ್ 2021, 10:57 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ ಪ್ರಾಯೋಜಿತ ‘ಓದು-ಬರಹ’ ಅಭಿಯಾನಕ್ಕೆ ಏ. 2ರಂದು ಚಾಲನೆ ನೀಡುವ ಮೂಲಕ, ಮೇ ತಿಂಗಳ ಒಳಗೆ 3.20 ಲಕ್ಷ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸಲು ಕ್ರಮ ವಹಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

ಲೋಕ ಶಿಕ್ಷಣ ನಿರ್ದೇಶನಾಲಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಮವಾರ ಮಾತನಾಡಿದ ಸಚಿವರು, ‘ರಾಯಚೂರು, ಯಾದಗಿರಿ, ಕಲಬುರ್ಗಿ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳ 24 ತಾಲ್ಲೂಕು, 219 ಗ್ರಾಮ ಪಂಚಾಯಿತಿ ಮತ್ತು 19 ನಗರ, ಪಟ್ಟಣ ಪ್ರದೇಶಗಳಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗುವುದು. 15ರಿಂದ 50 ವರ್ಷದ 2.4 ಲಕ್ಷ ಮಹಿಳೆಯರು ಮತ್ತು 80 ಸಾವಿರ ಪುರುಷ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ ಹೊಂದಲಾಗಿದೆ’ ಎಂದರು.

‘ಕಲಿಕೆ ಪೂರ್ಣಗೊಂಡ ನಂತರ ಕಲಿಕಾರ್ಥಿಗಳಿಗೆ ಪರೀಕ್ಷೆಗೆ ನಡೆಸಿ, ಉತ್ತೀರ್ಣರಾದವರಿಗೆ ಸಾಕ್ಷರತಾ ಪ್ರಮಾಣ ಪತ್ರ ನೀಡಲಾಗುವುದು. ರಾಜ್ಯದಲ್ಲಿ ಗುರುತಿಸಲಾಗಿರುವ 1.26 ಕೋಟಿ ಅನಕ್ಷರಸ್ಥರ ಪೈಕಿ ಈಗಾಗಲೇ 57 ಲಕ್ಷ ಜನರನ್ನು ಸಾಕ್ಷರರನ್ನಾಗಿ ಮಾಡಲಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಸಾಕ್ಷರತೆಯ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೊಸ ಸ್ತರಕ್ಕೆ ಕೊಂಡೊಯ್ಯಲು ಕ್ರಿಯಾ ಯೋಜನೆಯನ್ನು ಇಲಾಖೆ ರೂಪಿಸುತ್ತಿದೆ. ನವ ಸಾಕ್ಷರರಿಗೆ ಜೀವನೋಪಾಯ ಕೌಶಲಗಳನ್ನು ದೊರಕಿಸಲು ಕ್ರಮ ವಹಿಸಲಾಗುತ್ತಿದೆ’ ಎಂದರು.

ಇತ್ತೀಚೆಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿರುವ ಅನಕ್ಷರಸ್ಥ ಸದಸ್ಯರುಗಳಿಗೆ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ನಿರಂತರ ಸಾಕ್ಷರತಾ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ಕ್ರಿಯಾ ಯೋಜನೆ ಸಿದ್ಧಪಡಿಸಲು ನಿರ್ದೇಶನ ನೀಡಿದರು.‘

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ನಿರ್ವಹಿಸುತ್ತಿರುವ ಗ್ರಾಮೀಣ ಗ್ರಂಥಾಲಯಗಳಲ್ಲಿ ನವ ಸಾಕ್ಷರರ ಕಲಿಕೆಗೆ ಪೂರಕವಾಗಿ ಪ್ರತ್ಯೇಕ ಆಸನಗಳು ಹಾಗೂ ಪುಸ್ತಕ ಸಂಗ್ರಹಣ ಕಪಾಟುಗಳನ್ನು ಪೂರೈಸುವ ವ್ಯವಸ್ಥೆ ಆಗಬೇಕು. ಇದಕ್ಕೆ ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಬೇಕು ಎಂದೂ ಅಧಿಕಾರಿಗಳಿಗೆ ಸುರೇಶ್‌ ಕುಮಾರ್‌ ಸೂಚಿಸಿದರು.

ಸ್ವಯಂ ಪ್ರೇರಿತರಾಗಿ ಕಲಿಕೆಗೆ ತೊಡಗಿಸಿಕೊಂಡ ನವ ಸಾಕ್ಷರರ ಯಶೋಗಾಥೆ ಹೊರತರಲು ನಿರ್ದೇಶನ ನೀಡಿದ ಸಚಿವರು, ಇಂಥ ಪ್ರಯತ್ನಗಳು ಇಲಾಖೆಯ ಕೆಲಸಗಳಿಗೆ ಅರ್ಥ ತಂದುಕೊಡುತ್ತವೆ. ಚಂದನ ವಾಹಿನಿಯಲ್ಲಿ ಈ ರೀತಿಯ ಯಶೋಗಾಥೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಗಾರ್ಮೆಂಟ್‌ ನೌಕರರು, ಸಿದ್ಧಿ ಜನಾಂಗದಂಥ ವಿವಿಧ ಹಿಂದುಳಿದ ವರ್ಗಗಳ ಅನಕ್ಷರಸ್ಥರೂ ಸೇರಿದಂತೆ ವಿಭಿನ್ನ ವರ್ಗಗಳ ಸಾಕ್ಷರತೆಗೆ ವಿನೂತನ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಳ್ಳಬೇಕಿದೆ ಎಂದು ಅವರು ಸೂಚಿಸಿದರು.

ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಷ್ಮಾ ಗೋಡಬೋಲೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT