ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಒಯು: ಹೊಸ ಪ್ರಕಟಣೆಗಳ ಪರ್ವ!

ಪ್ರಸಾರಂಗದ ‘ಪ್ರಚಾರೋಪನ್ಯಾಸ ಮಾಲೆ’ ಆರಂಭ
Last Updated 22 ಜೂನ್ 2022, 20:31 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಂಗವು ಇದೇ ಮೊದಲ ಬಾರಿಗೆ ‘ಪ್ರಚಾರೋಪನ್ಯಾಸ ಮಾಲೆ’ ಆರಂಭಿಸಿದ್ದು, ಹೊಸ ‍ಪ್ರಕಟಣೆಗಳ ಪರ್ವ ಆರಂಭವಾಗಲಿದೆ.

ವಿಶ್ವವಿದ್ಯಾಲಯವು 26ನೇ ವರ್ಷದ ಸಂಭ್ರಮದಲ್ಲಿದೆ. ಪ್ರಸಾರಂಗವು ದೂರ ಶಿಕ್ಷಣಕ್ಕೆ ಪೂರಕವಾಗಿ ದಶಕದಿಂದ ಇನ್ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕೃತಿಗಳ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ನಿರ್ದಿಷ್ಟ ವಿಷಯ ಕುರಿತು ಉಪನ್ಯಾಸ ನಡೆಸಿ, ಪುಸ್ತಕ ತರುತ್ತಿರುವ ಮೊದಲ ಯೋಜನೆ ಇದು.

60ರ ದಶಕದಲ್ಲಿ ಕುವೆಂ‍ಪು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಪ್ರಸಾರಂಗ ಸ್ಥಾಪಿಸಿದ್ದಲ್ಲದೆ, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಾರೋಪನ್ಯಾಸ ನಡೆಸಿ ಜನಶಿಕ್ಷಣ ಕಾರ್ಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಇದೇ ಮಾದರಿ ಅನುಸರಿಸಿದ್ದವಲ್ಲದೆ ಸಾವಿರಾರು ಅಮೂಲ್ಯ ಕೃತಿಗಳನ್ನು ಹೊರ ತಂದಿದ್ದವು.

‘ಇತರ ವಿಶ್ವವಿದಾಲಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರೊಂದಿಗೆ ನೇರ ಸಂವಹನ ಇರುತ್ತದೆ. ಆದರೆ, ದೂರ ಶಿಕ್ಷಣ ನೀಡುವ ವಿಶ್ವವಿದ್ಯಾಲಯದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಪ್ರಸಾರಂಗದ ಜವಾಬ್ದಾರಿ ಹಿರಿದಾಗಿದ್ದು, ಹೊಸ ಯೋಜನೆ ಮೂಲಕ ಎಲ್ಲರನ್ನು ತಲುಪುವ ಉದ್ದೇಶವನ್ನು ಹೊಂದಿದೆ’ ಎಂದು ಪ್ರಸಾರಾಂಗದ ಸಂಯೋಜನಾಧಿಕಾರಿ ಡಾ.ಆರ್‌.ಸಂತೋಷ್‌ ನಾಯಕ್‌ ಅವರು ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

‘ವಿಶ್ವವಿದ್ಯಾಲಯದ ಪ್ರಸಾರಂಗವು ಪಠ್ಯಪುಸ್ತಕ ಹಾಗೂ ಪೂರಕ ಕೃತಿಗಳ ಪ್ರಕಟಣೆಗೆ ಸೀಮಿತವಾಗಿತ್ತು. ಇದೀಗ ಪ್ರಚಾರೋಪನ್ಯಾಸ ಮಾಲೆ ಆರಂಭಿಸಿದೆ. ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸವನ್ನು ಕೃತಿಯಾಗಿ ಪ್ರಕಟಿಸುವುದಲ್ಲದೆ, ಅವರ ವಿಡಿಯೊ ವಿಶ್ವವಿದ್ಯಾಲಯದ ಯೂಟ್ಯೂಬ್‌ ಚಾನೆಲ್‌ನಲ್ಲಿ ಸಿಗಲಿದೆ’ ಎಂದರು.

‘ಪ್ರಸಾರಾಂಗದ ವೆಬ್‌ಸೈಟ್‌ ರೂಪಿಸಲಾಗುತ್ತಿದ್ದು, ಪುಸ್ತಕ ಪ್ರಕಟಣೆಗಳನ್ನು ಆನ್‌ಲೈನ್‌ ಮೂಲಕ ಖರೀದಿಸುವ ವ್ಯವಸ್ಥೆ ಇರಲಿದೆ. ಇ–ಪುಸ್ತಕ ಹಾಗೂ ವಿಶ್ವವಿದ್ಯಾಲಯದ ಇ–ಪತ್ರಿಕೆಯನ್ನು ತರುವ ಉದ್ದೇಶವಿದೆ. ಕೃತಿಗಳನ್ನು ಐಎಸ್‌ಬಿನ್‌ ಸಂಖ್ಯೆಯ ಜೊತೆಗೆ ಪ್ರಕಟಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಶೇ 50 ರಿಯಾಯಿತಿ: ಪ್ರಚಾರೋಪನ್ಯಾಸ ಮಾಲೆ ಆರಂಭದ ಹಿನ್ನೆಲೆಯಲ್ಲಿ ಜೂನ್‌ 24ರಿಂದ ಪ್ರಸಾರಂಗದ ಪುಸ್ತಕಗಳಿಗೆ ಶೇ 50 ರಿಯಾಯಿತಿ ಇರಲಿದೆ.

ನಾಳೆ ಪ್ರಚಾರೋಪನ್ಯಾಸಕ್ಕೆ ಚಾಲನೆ

ಕೆಎಸ್‌ಒಯು ಪ್ರಸಾರಂಗದ ‘ಪ್ರಚಾರೋಪನ್ಯಾಸ ಮಾಲೆ’ ಉದ್ಘಾಟನೆಯು ಜೂನ್‌ 24ರ ಶುಕ್ರವಾರ ಮಧ್ಯಾಹ್ನ 3ಕ್ಕೆ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ. ಮೊದಲ ಉಪನ್ಯಾಸವನ್ನು ‘ಕುವೆಂಪು ಚಿಂತನೆಗಳಲ್ಲಿ ನಾಗರಿಕ ಸಮಾಜದ ಪರಿಕಲ್ಪನೆ’ ಕುರಿತು ವಿಮರ್ಶಕ ಡಾ.ರಹಮತ್‌ ತರೀಕೆರೆ ನೀಡಲಿದ್ದಾರೆ. ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌, ಕುಲಸಚಿವ ಪ್ರೊ.ಆರ್‌.ರಾಜಣ್ಣ ಭಾಗವಹಿಸಲಿದ್ದಾರೆ.

***

ಪ್ರಚಾರೋಪನ್ಯಾಸ ಮಾಲೆಯು ತಿಂಗಳಿಗೊಂದರಂತೆ ವರ್ಷವಿಡೀ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ.

- ಡಾ.ಆರ್‌.ಸಂತೋಷ್‌ ನಾಯಕ್‌, ಸಂಯೋಜನಾಧಿಕಾರಿ, ಪ್ರಸಾರಂಗ, ಕೆಎಸ್‌ಒಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT