ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೆಕೇರಿ, ಕುಂದಾಪುರದಲ್ಲಿ ರಾಡಾರ್‌ ಕೇಂದ್ರ

ಮೀನುಗಾರ ಮುಖಂಡರ ಜೊತೆ ಕರಾವಳಿ ರಕ್ಷಣಾ ಪಡೆ ಅಧಿಕಾರಿಗಳ ಸಂವಾದ
Last Updated 7 ಜನವರಿ 2023, 12:40 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದ ಕರಾವಳಿಯಲ್ಲಿ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸಲು ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹೊಸ ರಾಡಾರ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ ಕರ್ನಾಟಕದ ಕಮಾಂಡರ್‌ ಡಿಐಜಿ ಪ್ರವೀಣ್‌ ಕುಮಾರ್ ಮಿಶ್ರಾ ತಿಳಿಸಿದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸಮ್ಮುಖದಲ್ಲಿ, ಮೀನುಗಾರ ಸಮುದಾಯದ ಮುಖಂಡರ ಜೊತೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದರು.

‘ರಾಜ್ಯದ ಕರಾವಳಿಯುವ 320 ಕಿ.ಮೀ ಉದ್ದವಿದ್ದು, ಸದ್ಯ ಸುರತ್ಕಲ್‌ ಹಾಗೂ ಭಟ್ಕಳದಲ್ಲಿ ರಾಡಾರ್‌ಗಳಿವೆ. ದೋಣಿಗಳ ಚಲನವಲನದ ಮೇಲೆ ಪೂರ್ಣ ಪ್ರಮಾಣದಲ್ಲಿ ನಿಗಾ ಇಡಲು ಇವು ಸಾಲುತ್ತಿಲ್ಲ. ಹಾಗಾಗಿ ಮತ್ತೆರಡು ರಾಡಾರ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ರಾಡಾರ್‌ ಸಮುದ್ರದಲ್ಲಿ 30 ನಾಟಿಕಲ್‌ ಮೈಲ್‌ ಸುತ್ತಳತೆಯಲ್ಲಿ ನಿಗಾ ಇಡಲು ನೆರವಾಗಲಿದೆ. ಇದರ ಕ್ಯಾಮೆರಾಗಳು 5ರಿಂದ 7 ನಾಟಿಕಲ್‌ ಮೈಲ್‌ ದೂರದ ಚಿತ್ರವನ್ನು ಸ್ಪಷ್ಟವಾಗಿ ಸೆರೆಹಿಡಿಯಬಲ್ಲವು. ಬೇಲೇಕೇರಿಯಲ್ಲಿ ರಾಡಾರ್‌ ಕೇಂದ್ರ ಸ್ಥಾಪನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕುಮದಾಪುರದಲ್ಲೂ ಕಾಮಗಾರಿ ಆರಂಭವಾಗಿದೆ’ ಎಂದು ಅವರು ವಿವರಿಸಿದರು.

ಮುಂಬೈನಲ್ಲಿ ಉಗ್ರಗಾಮಿಗಳ ದಾಳಿ ನಡೆದ ಬಳಿಕ ಸಮುದ್ರದಲ್ಲಿ ಕಣ್ಗಾವಲು ಹೆಚ್ಚಿಸಲು ರಾಡಾರ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

‘ಮೀನುಗಾರರು ಸಮುದ್ರಕ್ಕೆ ಬೀಳುವ ಪ್ರಮೇಯ ಎದುರಾದರೆ ತಕ್ಷಣ ಆ ಸ್ಥಳದ ಗುರುತಿಗಾಗಿ ತೇಲುವ ವಸ್ತು (ಬೋಯ್‌) ಹಾಕಬೇಕು. ಇದರಿಂದ ರಕ್ಷಣಾ ಕಾರ್ಯಾಚರಣೆ ಸುಲಭವಾಗುತ್ತದೆ. ಈಜಿ ದಡ ಸೇರುವ ಪ್ರಯತ್ನಿಸುವ ಬದಲು ಸಾಧ್ಯವಾದಷ್ಟು ಹೆಚ್ಚು ಹೊತ್ತು ಸಮುದ್ರದಲ್ಲೇ ತೇಲಿಕೊಂಡಿರಲು ಗಮನವಹಿಸಬೇಕು. ಸಮುದ್ರಕ್ಕೆ ತೆರಳುವಾಗಿ ಸದಾ ಜೀವರಕ್ಷಕ ಸಾಮಗ್ರಿಗಳನ್ನು ಜೊತೆಯಲ್ಲಿ ಹೊಂದಿರಬೇಕು’ ಎಂದು ಮೀನುಗಾರರಿಗೆ ಪಿ.ಕೆ.ಮಿಶ್ರಾ ಸಲಹೆ ನೀಡಿದರು.

‘ಸಮುದ್ರದ ಮೀನುಗಾರಿಕೆಯಲ್ಲಿ ಕ್ಷಣ ಕ್ಷಣವು ಅಪಾಯವನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬ ಮೀನುಗಾರರೂ ವಿಮೆ ಮಾಡಿಸಿಕೊಳ್ಳಬೇಕು. ಸರ್ಕಾರದ ಪಿಂಚಣಿ ಯೋಜನೆಗಳ ಪ್ರಯೋಜನ ಪಡೆಯಬೇಕು’ ಎಂದೂ ಕಿವಿಮಾತು ಹೇಳಿದರು.

ಮುಳುಗಿದ ಹಡಗಿನಿಂದ ತೈಲ ತೆರವು:

‘ಉಳ್ಳಾಲದ ಬಳಿ ಮುಳುಗಿರುವ ಎಂ.ವಿ.ಪ್ರಿನ್ಸೆಸ್‌ ಮಿರಾಲ್‌ ಹಡಗಿನಿಂದ ತೈಲ ತೆರವು ಕಾರ್ಯಾಚರಣೆ ಆರಂಭವಾಗಿದೆ. ಈ ಸಲುವಾಗಿ ಸರಕು ಸಾಗಣೆ ಹಡಗು ಈಗಾಗಲೇ ತಲುಪಿದೆ’ ಎಂದರು.

–0–

‘ಎಐಎಸ್‌ನಿಂದ ರಕ್ಷಣಾ ಕಾರ್ಯ ಸುಲಭ’

‘ಮೀನುಗಾರಿಕಾ ದೋಣಿಗಳಿಗೆ ಸ್ವಯಂಚಾಲಿತ ಗುರುತುಪತ್ತೆ ವ್ಯವಸ್ಥೆ (ಎಐಎಸ್‌) ಅಳವಡಿಸಬೇಕು. ದೋಣಿ ಅಪಾಯಕ್ಕೆ ಸಿಲುಕಿದರೆ, ತ್ವರಿತವಾಗಿ ರಕ್ಷಣಾ ಕಾರ್ಯ ಕೈಗೊಳ್ಳುವುದು ಇದರಿಂದ ಸುಲಭವಾಗುತ್ತದೆ’ ಎಂದು ಪಿ.ಕೆ.ಮಿಶ್ರಾ ತಿಳಿಸಿದರು.

’ಜಿಲ್ಲೆಯಲ್ಲಿರುವ 20 ಮೀಟರ್‌ಗಿಂತಲೂ ಉದ್ದವಾದ 400 ಮೀನುಗಾರಿಕಾ ದೊಣಿಗಳಿಗೆ ಎಐಎಸ್‌ ಅಳವಡಿಸಲಾಗಿದೆ. ದೋಣಿಯ ಪರವಾನಗಿ ನವೀಕರಣದ ಸಂದರ್ಭದಲ್ಲಿ, ಎಐಎಸ್‌ ಅಳವಡಿಸಿರುವುದನ್ನು ಖಾತರಿಪಡಿಸಿಕೊಳ್ಳುತ್ತೇವೆ’ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕಿ ಸುಸ್ಮಿತಾ ರಾವ್‌ ಮಾಹಿತಿ ನೀಡಿದರು.

‘ಕೇರಳದ ಅಧಿಕಾರಿಗಳಿಂದ ಕಿರುಕುಳ’

‘ಕೆಲವೊಮ್ಮೆ ಮೀನುಗಾರರು ರಾಜ್ಯದ ಕರಾವಳಿಯ ವ್ಯಾಪ್ತಿ ಮೀರಿ ಸ್ವಲ್ಪ ಆಚೆಗೆ ಹೋದರೂ ಕೇರಳದ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ದೋಣಿಯನ್ನು ಜಪ್ತಿ ಮಾಡಿ ₹ 2 ಲಕ್ಷದಿಂದ ₹ 5ಲಕ್ಷದವರೆಗೂ ದಂಡ ವಿಧಿಸುತ್ತಿದ್ದಾರೆ. ಗೋವಾ ಮಹಾರಾಷ್ಟ್ರದಿಂದಲೂ ಇಂತಹ ಸಮಸ್ಯೆ ಆಗುತ್ತಿದ್ದು, ಬಹಳ ಸಮಸ್ಯೆ ಆಗುತ್ತಿದೆ’ ಎಂದು ಮೀನುಗಾರ ಮುಖಂಡರಾದ ನಿತಿನ್‌ ಕುಮಾರ್‌ ಗಮನ ಸೆಳೆದರು.

‘ಮೀನುಗಾರಿಕೆಗೆ ಸಂಬಂಧಿಸಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ನಿಯಮಗಳಿದ್ದು, ‌ಮೀನುಗಾರರನ್ನು ಗೊಂದಲಕ್ಕೀಡುಮಾಡುತ್ತಿವೆ. ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಏಕರೂಪದ ಮೀನುಗಾರಿಕಾ ನೀತಿ ರೂಪಿಸಬೇಕು’ ಎಂದು ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ್‌ ಬೆಂಗ್ರೆ ಒತ್ತಾಯಿಸಿದರು.

ಸಂಸದ ನಳಿನ್ ಕುಮಾರ್‌ ಕಟೀಲ್‌, ‘ಈ ಬಗ್ಗೆ ಕೇಂದ್ರ ಮೀನುಗಾರಿಕಾ ಸಚಿವರ ಗಮನ ಸೆಳೆದು ಇದಕ್ಕೊಂದು ನೀತಿ ರೂಪಿಸಲು ಒತ್ತಯಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಮೀನುಗಾರರಿಗೆ ಸೀಮೆಎಣ್ಣೆ ವಿತರಣೆಗೆ ಸಂಬಂಧಿಸಿದ ಸಮಸ್ಯೆಯನ್ನು ರಾಜ್ಯ ಸರ್ಕಾರ ಎರಡು ದಿನಗಳಲ್ಲಿ ಬಗೆಹರಿಸಲಿದೆ. ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲೂ ಕ್ರಮ ಕೈಗೊಳ್ಳುತ್ತೇವೆ’ ಎಂದರು.

–0–

‘ಕೋಸ್ಟ್‌ ಗಾರ್ಡ್‌ ಅಕಾಡೆಮಿ– ಡಿಪಿಆರ್‌ ಸಿದ್ದ’

‘ಕರಾವಳಿ ರಕ್ಷಣಾ ಪಡೆಯ ಅಕಾಡೆಮಿಯ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಕೆಂಜಾರಿನಲ್ಲಿ 160 ಎಕರೆ ಜಾಗದಲ್ಲಿ ಅಕಾಡೆಮಿ ಶೀಘ್ರವೇ ಸ್ಥಾಪನೆಯಾಗಲಿದೆ’ ಎಂದು ಕರಾವಳಿ ರಕ್ಷಣಾ ‍ಪಡೆಯ ಪಶ್ಚಿಮ ಕ್ಷೇತ್ರೀಯ ಕಮಾಂಡರ್‌ ಮತ್ತು ಇನ್‌ಸ್ಪೆಕ್ಟರ್‌ ಜನರಲ್‌ ಎಂ.ವಿ.ಬಾಡ್ಕರ್‌ ತಿಳಿಸಿದರು.

ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಬೇಕು. ಪ್ಲಾಸ್ಟಿಕ್‌ನಿಂದ ಸಮುದ್ರ ಮಾಲಿನ್ಯವಾಗುವುದನ್ನು ತಡೆಯಲು ಕ್ರಮಕೈಗೊಳ್ಳಬೇಕು

ಶಶಿಕುಮಾರ್‌ ಬಿ., ಪರ್ಸೀನ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ

–0–

ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ. ‘ಸೀಮೆಎಣ್ಣೆ ಮುಕ್ತ ಭಾರತ’ ಕಾರ್ಯಕ್ರಮದಿಂದ ಮೀನುಗಾರರಿಗೆ ವಿನಾಯಿತಿ ನೀಡಬೇಕು

ಸುಭಾಷ್‌ಚಂದ್ರ, ನಾಡದೋಣಿ ಮೀನುಗಾರರ ಸಂಘದ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT