ಶುಕ್ರವಾರ, ಆಗಸ್ಟ್ 19, 2022
22 °C
ನಂಜನಗೂಡಿನಲ್ಲಿ ಜಾಲ ಶಂಕೆ; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಆಯೋಗ

ನಂಜನಗೂಡಿನಲ್ಲಿ ಶಿಶು ಮಾರಾಟ: ವರದಿ ಸಲ್ಲಿಸಲು ಗಡುವು

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯ ನಂಜನಗೂಡಿ ನಲ್ಲಿ ಹಸುಗೂಸು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದು, ಮೂರು ದಿನದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಮೈಸೂರು ಜಿಲ್ಲಾಧಿ
ಕಾರಿಗೆ ಗುರುವಾರ ಸೂಚಿಸಿದೆ.

ಜುಲೈ 17ರಂದು ಎಫ್‌ಐಆರ್ ದಾಖಲಾದ ಬಳಿಕ, ಮಗುವಿನ ತಾಯಿ ಹಾಗೂ ಮಗುವನ್ನು ಆಕೆಯಿಂದ ಪಡೆದ ಆರೋಪಿಯಾದ ನಂಜನಗೂಡಿನ ಶ್ರೀಮತಿ, ಮೈಸೂರಿನ ಶುಶ್ರೂಷಕಿಯ ವಿಚಾರಣೆ ನಡೆಸಿರುವ ಪೊಲೀಸರಿಗೆ, ಹಲವು ಮಕ್ಕಳ ಮಾರಾಟವಾಗಿರುವ ಶಂಕೆ ಮೂಡಿದೆ.

’ಆರೋಪಿಯು ನಂಜನಗೂಡಿನಲ್ಲಿ ಅಮೃತಾನಂದ ಶಿಶು ವಿಹಾರ ನಡೆಸು ತ್ತಿದ್ದು, ಹಸುಗೂಸನ್ನು ಹೊಳೆನರಸೀಪುರ ದ ದಂಪತಿಗೆ ₹ 4 ಲಕ್ಷಕ್ಕೆ ಮಾರಿದ್ದರು. ಮಹಿಳೆಗೆ ₹ 1 ಲಕ್ಷ ನೀಡಿದ್ದರು’ ಎಂದು ಮೂಲಗಳು ಖಚಿತಪಡಿಸಿವೆ.

ಆಶಾ ಕಾರ್ಯಕರ್ತೆ ಶಶಿಕಲಾ ಅವರ ಮೂಲಕ ಪ್ರಕರಣ ಬೆಳಕಿಗೆ ಬಂದ ಬಳಿಕ ಸಹಾಯಕ ಮಕ್ಕಳ ರಕ್ಷಣಾಧಿಕಾರಿಯು ದೂರು ದಾಖಲಿಸಿದ್ದರು. ‘ಮಕ್ಕಳ ಮಾರಾಟ ಜಾಲ ಇಲ್ಲಿಂದಲೇ ರಾಜ್ಯದ ವಿವಿಧೆಡೆಗೆ ಹಬ್ಬಿರುವ ಶಂಕೆಯಿರುವುದರಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಗೆ ಜು.20ರಂದು ಪತ್ರ ಬರೆದಿದ್ದರು.

‘ಪತಿ ತೀರಿಕೊಂಡ ಬಳಿಕ ಮಹಿಳೆಗೆ ಜೂನ್‌ 10ರಂದು ಮೈಸೂರಿನಲ್ಲಿ ಹೆರಿಗೆಯಾಗಿತ್ತು. ಮೂರು ದಿನಕ್ಕೆ ತಾಯಿ ಯನ್ನು ಪಟ್ಟಣಕ್ಕೆ ಕರೆತಂದ ಆರೋಪಿ ಯು ಅಂದೇ ಮಗುವನ್ನು ಎತ್ತಿಕೊಂಡು ಹೋಗಿದ್ದರು’ ಎಂದು ದೂರಿನಲ್ಲಿದೆ.

‘ಮೈಸೂರಿನ ಶುಶ್ರೂಷಕಿಯೇ ಮಗು ಮಾರಾಟದ ವ್ಯವಹಾರ ಕುದುರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಸಂತ್ರಸ್ತ ಒಂಟಿ ಮಹಿಳೆಯರೇ ಗುರಿ

‘ಮಕ್ಕಳ ಮಾರಾಟ ಜಾಲಕ್ಕೆ ಸಂತ್ರಸ್ತ ಮಹಿಳೆಯರೇ ಗುರಿಯಾಗಿದ್ದಾರೆ’ ಎಂಬುದು ಒಡನಾಡಿ ಸಂಸ್ಥೆಯ ಕ್ಷೇತ್ರ ಕಾರ್ಯಾಚರಣೆಯಿಂದ ತಿಳಿದುಬಂದಿದೆ.

‘ಪತಿಯಿಂದ ಬೇರೆಯಾಗಿ ತಾಯಿ ಜೊತೆ ವಾಸಿಸುತ್ತಿದ್ದ ಬಡಮಹಿಳೆಯಿಂದ ಆಕೆಯ ಹೆಣ್ಣುಮಗುವನ್ನು ಕೆಲವುವರ್ಷಗಳ ಹಿಂದೆ ಅನಾಥಾಶ್ರಮಕ್ಕೆಂದು ಮಹಿಳೆಯೊಬ್ಬರು ಪಡೆದಿದ್ದರು. ಬಡ ಮಹಿಳೆಯರನ್ನು ಸಂಪರ್ಕಿಸಿ, ಹಣದ ಆಮಿಷ ತೋರಿಸಿ ಮಕ್ಕಳನ್ನು ಹೆತ್ತು ಕೊಡುವಂತೆ ಪ್ರಚೋದಿಸುವ, ಅದರಲ್ಲಿ ಯಶ ಕಂಡಿರುವ ನಿದರ್ಶನಗಳು ಇವೆ’ ಎಂದು ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದ್ದಾರೆ.

ಎಚ್‌.ಡಿ.ಕೋಟೆಯಲ್ಲೂ ಪ್ರಕರಣ

ಎರಡು ತಿಂಗಳ ಹಿಂದೆ ಎಚ್‌.ಡಿ.ಕೋಟೆಯಲ್ಲೂ ಹಸುಗೂಸು ಮಾರಾಟ ಪ್ರಕರಣ ಬೆಳಕಿಗೆ ಬಂದಿತ್ತು. ಪಟ್ಟಣದ ಟೈಗರ್‌ ಬ್ಲಾಕ್‌ ನಿವಾಸಿ ಮಧುಮಾಲತಿ–ಅಂಬರೀಶ್ ದಂಪತಿಯು ಬೆಂಗಳೂರಿನ ರೋಜಾ ಎಂಬುವವರಿಂದ ಹೆಣ್ಣು ಮಗುವನ್ನು ಖರೀದಿಸಿ ತಂದಿದ್ದರು. ಪ್ರಕರಣ ದಾಖಲಾದ ಬಳಿಕ ರೋಜಾ ಅವರನ್ನು ಪೊಲೀಸರು ಬಂಧಿಸಿದ್ದರು. ಈಗ ಮಗು ಮಂಡ್ಯದ ಮಕ್ಕಳ ಆರೈಕೆ ಕೇಂದ್ರದಲ್ಲಿದೆ.

***

ಹಸುಗೂಸು ಮಾರಾಟ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವುದು ಖಚಿತವಾಗಿದೆ. ಮಾರಾಟ ಜಾಲದ ಕುರಿತು ತನಿಖೆ ಚುರುಕುಗೊಳಿಸಲಾಗಿದೆ.
-ಆರ್‌.ಚೇತನ್‌, ಎಸ್ಪಿ, ಮೈಸೂರು

ನಂಜನಗೂಡು ಹಸುಗೂಸು ಮಾರಾಟ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇದೆ. ಸಮಗ್ರ ತನಿಖೆ ನಡೆಸಲಾಗುವುದು
- ಪರಶುರಾಂ ಎಂ.ಎಲ್‌., ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು