ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 1 ರವರೆಗೆ ರಾಜ್ಯಕ್ಕೇ ರಾತ್ರಿ ಕರ್ಫ್ಯೂ

ಹೊಸ ಬಗೆಯ ವೈರಸ್‌ ನಿಯಂತ್ರಣಕ್ಕೆ ಕ್ರಮ: ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಸಂಚಾರ ನಿಷೇಧ
Last Updated 23 ಡಿಸೆಂಬರ್ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ಬಗೆಯ ಕೊರೊನಾ ವೈರಸ್‌ ರಾಜ್ಯದಲ್ಲೂ ಹರಡುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಇಂದಿನಿಂದ (ಡಿ.24) ಒಂಬತ್ತು ದಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಗುರುವಾರದಿಂದ ಜನವರಿ 1ರವರೆಗೆ (ಜ.2ರ ಬೆಳಿಗ್ಗೆ 5 ಗಂಟೆ) ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆ, ಅನುಮತಿಸಿದ ಕೈಗಾರಿಕಾ ಚಟುವಟಿಕೆಗಳ ಹೊರತಾಗಿ ಜನರ ಸಂಚಾರವನ್ನು ಸಂಪೂರ್ಣ
ವಾಗಿ ನಿಷೇಧಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಬ್ರಿಟನ್‌ನಿಂದ ರಾಜ್ಯಕ್ಕೆ ಬಂದಿರುವ ಕೆಲವರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ವೈರಸ್‌ನಿಂದಾಗಿಯೇ ಅವರಿಗೆ ಸೋಂಕು ತಗುಲಿರಬಹುದೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೂ, ಹೊಸ ಬಗೆಯ ವೈರಸ್‌ನಿಂದ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ರಾತ್ರಿ ಕರ್ಫ್ಯೂ ವಿಧಿಸುವುದು ಅನಿವಾರ್ಯವಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತೀರ್ಮಾನ ಪರಿಷ್ಕರಣೆ: ಬುಧವಾರ ಬೆಳಿಗ್ಗೆಯೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮತ್ತು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬುಧವಾರದಿಂದ ಜ.2ರವರೆಗೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದರು. ಬಳಿಕ ಆರೋಗ್ಯ ಸಚಿವರ ನೇತೃತ್ವದಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯಪಡೆ, ತಾಂತ್ರಿಕ ಸಲಹಾ ಸಮಿತಿಗಳ ಸಭೆಯೂ ನಡೆಯಿತು. ತಜ್ಞರು ಮತ್ತು ಅಧಿಕಾರಿಗಳ ಸಲಹೆ ಆಧರಿಸಿ ದಿನಾಂಕ ಮತ್ತು ಸಮಯ ಪರಿಷ್ಕರಿಸಲಾಯಿತು.

ರಾತ್ರಿ ಕರ್ಫ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್‌ ಕಮಿಷನರ್‌ಗಳು, ಎಸ್‌ಪಿಗಳು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಆದೇಶಿಸಲಾಗಿದೆ.

ಯಾವುದಕ್ಕೆ ಅವಕಾಶ?
* ಔಷಧ, ಹಾಲು ಸೇರಿದಂತೆ ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆಗಾಗಿ ಜನರ ಓಡಾಟ
* ಖಾಲಿ ವಾಹನಗಳೂ ಸೇರಿದಂತೆ ಎಲ್ಲ ಬಗೆಯ ಸರಕು ಸಾಗಣೆ ವಾಹನಗಳ ಸಂಚಾರ
* ಕೈಗಾರಿಕೆಗಳು, ಕಂಪನಿಗಳು ಮತ್ತು ಇತರ ಉದ್ದಿಮೆಗಳ ನೌಕರರಲ್ಲಿ ಅಗತ್ಯ ಪ್ರಮಾಣದ ಶೇ 50ರಷ್ಟು ಮಂದಿ ಸಂಸ್ಥೆಯ ಗುರುತಿನ ಚೀಟಿ ಪ್ರದರ್ಶಿಸಿ ಕೆಲಸಕ್ಕೆ ಹೋಗಿ, ಬರಬಹುದು
* 24 ಗಂಟೆಗಳ ನಿರಂತರ ಕಾರ್ಯಾಚರಣೆಯ ಅಗತ್ಯವಿರುವ ಕೈಗಾರಿಕೆಗಳು, ಉದ್ದಿಮೆಗಳ ಮೇಲೆ ಯಾವುದೇ ನಿರ್ಬಂಧವಿಲ್ಲ
* ದೂರದ ಊರುಗಳಿಗೆ ತೆರಳುವ ಬಸ್‌, ರೈಲು, ವಿಮಾನ ಸೇವೆ ಲಭ್ಯ
* ಬಸ್‌, ರೈಲು, ವಿಮಾನ ನಿಲ್ದಾಣಗಳಿಗೆ ಹೋಗಿ ಬರುವವರು ಟಿಕೆಟ್‌ ಪ್ರದರ್ಶಿಸಿ ಟ್ಯಾಕ್ಸಿ ಅಥವಾ ಆಟೊ ರಿಕ್ಷಾ ಸೇವೆ ಬಳಸಬಹುದು

ಯಾವುದಕ್ಕೆ ನಿರ್ಬಂಧ?
* ಕರ್ಫ್ಯೂ ಅವಧಿಯಲ್ಲಿ ಅನಗತ್ಯವಾಗಿ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವಂತಿಲ್ಲ, ಗುಂ‍ಪುಗೂಡುವಂತಿಲ್ಲ.
* ಹೋಟೆಲ್‌, ವಾಣಿಜ್ಯ ಮಳಿಗೆ, ಮಾಲ್‌ ತೆರೆಯುವಂತಿಲ್ಲ.
* ಖಾಸಗಿ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ.

ಕ್ರಿಸ್‌ಮಸ್‌ ಪ್ರಾರ್ಥನೆಗೆ ಅನುಮತಿ
ರಾತ್ರಿ ಕರ್ಫ್ಯೂ ಇದ್ದರೂ ಕ್ರಿಸ್‌ಮಸ್‌ ಪ್ರಯುಕ್ತ ಗುರುವಾರ ರಾತ್ರಿ ನಡೆಯುವ ಸಾಮೂಹಿಕ ಪ್ರಾರ್ಥನೆಗಳಿಗೆ ಅನುಮತಿ ನೀಡಲಾಗಿದೆ.

ಡಿ.17ರಂದು ಹೊರಡಿಸಿದ್ದ ಆದೇಶದಲ್ಲಿ ನೀಡಿರುವ ಅನುಮತಿಗೆ ಸೀಮಿತವಾಗಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರು ಬುಧವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

‘ರಾತ್ರಿ 11ರ ನಂತರ ಮದ್ಯದಂಗಡಿ ತೆರೆದರೆ ಪರವಾನಗಿ ರದ್ದು’
ಕೋಲಾರ
: ‘ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಈ ಸಂದರ್ಭದಲ್ಲಿ ರಾತ್ರಿ 11 ಗಂಟೆ ನಂತರ ಮದ್ಯದಂಗಡಿ ತೆರೆದರೆ ನಿರ್ದಾಕ್ಷಿಣ್ಯವಾಗಿ ಪರವಾನಗಿ ರದ್ದುಪಡಿಸುತ್ತೇವೆ’ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಎಚ್ಚರಿಕೆ ನೀಡಿದ್ದಾರೆ.

‘ರಾತ್ರಿ ಕರ್ಫ್ಯೂ ಜಾರಿ ಯಶಸ್ವಿಯಾಗಬೇಕಾದರೆ ಅಬಕಾರಿ ಇಲಾಖೆ ಪಾತ್ರ ನಿರ್ಣಾಯಕ. ಇಲಾಖೆಯು ಮದ್ಯದ ವಹಿವಾಟಿನ ನಿಯಮ ಸಡಿಲಗೊಳಿಸಿದರೆ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಬಹುದು. ಹೀಗಾಗಿ ಮದ್ಯದಂಗಡಿಗಳನ್ನು ರಾತ್ರಿ 11ಕ್ಕೆ ಕಡ್ಡಾಯವಾಗಿ ಬಂದ್‌ ಮಾಡಲೇಬೇಕು’ ಎಂದರು.

‘ರಾತ್ರಿ ಕರ್ಫ್ಯೂ ಸಂಬಂಧ ಇಲಾಖೆ ಆಯುಕ್ತರು ಮತ್ತು ಜಿಲ್ಲೆಗಳ ಉಪ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ. ರಾತ್ರಿ 11ರ ನಂತರ ಮದ್ಯದಂಗಡಿ ಬಂದ್‌ ಮಾಡಿಸಲು ಇಲಾಖೆ ಸಿಬ್ಬಂದಿಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದೇವೆ’ ಎಂದು ತಿಳಿಸಿದರು.

**

ವಿದೇಶದಿಂದ ಬಂದಿರುವವರು ಹೊರಗಡೆ ಓಡಾಡುವಾಗ 72 ಗಂಟೆಗಳ ಮೊದಲು ಆರ್‌ಟಿ–ಪಿಸಿಆರ್‌ ವಿಧಾನದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿದ ನೆಗೆಟಿವ್‌ ವರದಿಯನ್ನು ಹೊಂದಿರುವುದು ಕಡ್ಡಾಯ.
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT