ಗುರುವಾರ , ಮೇ 13, 2021
22 °C
ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಭೇಟಿ: ಮುಂದಿನ ಚುನಾವಣೆಗೆ ಈಗಿನಿಂದಲೇ ಸಜ್ಜು

ರಾಮನಗರದಲ್ಲಿ ಸ್ಪರ್ಧೆಗೆ ನಿಖಿಲ್‌ ಸಿದ್ಧತೆ?

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ಜೆಡಿಎಸ್‌ನ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮುಂಬರುವ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆಯೇ?

ಇಂತಹದ್ದೊಂದು ಪ್ರಶ್ನೆ ಜಿಲ್ಲೆಯ ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿದೆ.

ನಿಖಿಲ್‌ರ ಈಚಿನ ಓಡಾಟಗಳನ್ನು ಗಮನಿಸಿದರೆ ಅವರು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟ. ಕುಮಾರಸ್ವಾಮಿ ದಂಪತಿ ಸಹ ಈ ಬಗ್ಗೆ ಒಲವು ಹೊಂದಿದ್ದು, ಮಗನಿಗೆ ರಾಮನಗರದಲ್ಲೇ ರಾಜಕೀಯ ಪಟ್ಟಾಭಿಷೇಕ ಮಾಡಲು ಮನಸ್ಸು ಮಾಡಿದ್ದಾರೆ ಎನ್ನುತ್ತಾರೆ ಜೆಡಿಎಸ್‌ ಕಾರ್ಯಕರ್ತರು.

ಅದೃಷ್ಟದ ಕ್ಷೇತ್ರ

ರಾಮನಗರ ವಿಧಾನಸಭಾ ಕ್ಷೇತ್ರವು ಎಚ್.ಡಿ. ದೇವೇಗೌಡ ಅವರ ಪಾಲಿಗೆ ಅದೃಷ್ಟದ ಕ್ಷೇತ್ರವಾಗಿ ಉಳಿದುಕೊಂಡಿದೆ. ಈ ಕುಟುಂಬದ ಮೂವರು ಈಗಾಗಲೇ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಚ್‌.ಡಿ. ದೇವೇಗೌಡರು 1994ರ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ನಂತರದಲ್ಲಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯೂ ಆದರು. ಅವರ ನಂತರದಲ್ಲಿ ಎರಡು ದಶಕದ ಕಾಲ ಎಚ್‌.ಡಿ. ಕುಮಾರಸ್ವಾಮಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಳೆದ ವಿಧಾನಸಭೆ
ಚುನಾವಣೆಯಲ್ಲಿ ಎಚ್‌ಡಿಕೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ನಂತರದಲ್ಲಿ ಚನ್ನಪಟ್ಟಣದ ಸದಸ್ಯತ್ವ ಉಳಿಸಿಕೊಂಡು
ರಾಮನಗರ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಭಾರಿ ಅಂತರದಿಂದ ಗೆದ್ದು ಬೀಗಿದ್ದರು.

ಬಿಡದಿಯಲ್ಲಿ ವಾಸ್ತವ್ಯ

ರಾಮನಗರ ನನ್ನ ಕರ್ಮಭೂಮಿ ಎಂದು ಎಚ್‌ಡಿಕೆ ಹೇಳುತ್ತಲೇ ಬಂದಿದ್ದಾರೆ. ಇಲ್ಲಿಂದಲೇ ನಿಖಿಲ್‌ಗೆ ಗೆಲುವಿನ ಪಟ್ಟ ಕಟ್ಟಬೇಕು ಎಂಬುದು ಅವರ ಮನದ ಅಭಿಲಾಷೆಯೂ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಮಂಡ್ಯ ಕ್ಷೇತ್ರದಲ್ಲಿ ಸೋಲುಂಡಿದ್ದು, ಆ ನಂತರದಲ್ಲಿ ರಾಮನಗರದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಇರುವ ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿ ನಿರಂತರವಾಗಿ ಈ ಭಾಗದ ಕಾರ್ಯಕರ್ತರ ಸಭೆಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಜೊತೆಗೆ ತಮ್ಮ ತಾಯಿ ಅನಿತಾ ಪ್ರತಿನಿಧಿಸುವ ರಾಮನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸಮಾರಂಭಗಳಿಗೂ ಬಂದು ಹೋಗುತ್ತಿದ್ದಾರೆ.

ಈಚೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ ಹಿನ್ನಡೆ ಅನುಭವಿಸಿತ್ತು. ಇದರಿಂದ ಕಾರ್ಯಕರ್ತರ ಅಸಮಾಧಾನ ಹೆಚ್ಚಿತ್ತು. ರಾಮನಗರ ಕ್ಷೇತ್ರಕ್ಕೆ ಶಾಸಕರು ಹೆಚ್ಚು ಬರುವುದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಅನಿತಾ ಸಹ ತಮ್ಮ ಕ್ಷೇತ್ರಕ್ಕೆ ಹೆಚ್ಚೆಚ್ಚು ಬರತೊಡಗಿದ್ದಾರೆ. ಜೊತೆಗೆ ನಿಖಿಲ್ ಸಹ ಪಕ್ಷ ಸಂಘಟನೆ ಜವಾಬ್ದಾರಿ ಹೊತ್ತಿದ್ದು, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ.

 

ವೈರಲ್‌ ಆಯ್ತು ವಿಡಿಯೊ

ಕನಕಪುರ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ (ರಾಮನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ) ಕಳೆದ ಮಂಗಳವಾರ ರಾತ್ರಿ ಪೌರಾಣಿಕ ನಾಟಕ ಪ್ರದರ್ಶನದ ವೇಳೆ ನಿಖಿಲ್ ಕುಮಾರಸ್ವಾಮಿ ವೇದಿಕೆಯಲ್ಲಿ ರಾಜಕೀಯ ಕುರಿತು ಮಾತನಾಡಿದ್ದು , ಇದಕ್ಕೆ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ‘ಇದು ನಾಟಕ ಪ್ರದರ್ಶನ. ಇಲ್ಲಿ ರಾಜಕೀಯ ಭಾಷಣ ಬೇಡ’ ಎಂದು ತಿರುಗಿ ಬಿದ್ದರು.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಿಖಿಲ್, ‘ಇದು ನನ್ನ ತಂದೆ-ತಾಯಿ ಕ್ಷೇತ್ರ. ತಾಕತ್ ಇದ್ರೆ ನೀವು ಬಂದ್‌ ಮಾತನಾಡಿ’ ಎಂದು ಪ್ರತಿಯಾಗಿ ವಾಗ್ದಾಳಿ ನಡೆಸಿದರು. ಇದೀಗ ಈ ಘಟನೆಯ ವಿಡಿಯೊ ದೃಶ್ಯಾವಳಿಗಳು ವೈರಲ್ ಆಗುತ್ತಿವೆ.

***

ರಾಮನಗರ ಕ್ಷೇತ್ರ ನಮ್ಮ ಕುಟುಂಬದವರಿಗೆ ರಾಜಕೀಯ ಪುನರ್ಜನ್ಮ ನೀಡಿದೆ. ಹೀಗಾಗಿ ಮುಂದೆ ಇಲ್ಲಿಂದಲೇ ನಿಖಿಲ್‌ಗೆ ಜನಸೇವೆ ಅವಕಾಶ ಸಿಕ್ಕರೆ ಸಂತೋಷ, ಸಕಾಲದಲ್ಲಿ ಈ ಬಗ್ಗೆ ನಿರ್ಧರಿಸುತ್ತೇವೆ.

- ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ (ಕಾರ್ಯಕ್ರಮವೊಂದರಲ್ಲಿ ಹೇಳಿದ್ದು)

2023ರ ಚುನಾವಣೆಗೆ ನಿಖಿಲ್‌ ಕುಮಾರಸ್ವಾಮಿ ಅವರೇ ರಾಮನಗರ ಕ್ಷೇತ್ರದಿಂದ ಅಭ್ಯರ್ಥಿ ಆಗಬೇಕು ಎಂಬುದು ಜೆಡಿಎಸ್ ಕಾರ್ಯಕರ್ತರ ಆಸೆಯಾಗಿದೆ. ಕುಮಾರಣ್ಣ ಈ ಬಗ್ಗೆ ತೀರ್ಮಾನ ಮಾಡುತ್ತಾರೆ.

- ಜಿ.ಟಿ. ಕೃಷ್ಣ, ಜಿಲ್ಲಾ ಅಧ್ಯಕ್ಷ, ಜೆಡಿಎಸ್ ಪದವೀಧರ ಘಟಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು