ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಒತ್ತಡ: 1.36 ಲಕ್ಷ ಮಂದಿ ಆತ್ಮಹತ್ಯೆ- ಕೇಂದ್ರ ಸಚಿವ ಮನ್‌ಸುಖ್‌ ಮಾಂಡವೀಯ

227 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Last Updated 10 ಅಕ್ಟೋಬರ್ 2021, 20:49 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾನಸಿಕ ಒತ್ತಡ ಸೇರಿದಂತೆ ವಿವಿಧ ಕಾರಣಗಳಿಂದ ದೇಶದಲ್ಲಿ ವಾರ್ಷಿಕ 1.36 ಲಕ್ಷ ಮಂದಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಇವರಲ್ಲಿ ಶೇ 70ರಷ್ಟು ಮಂದಿ ಯುವಜನರಾಗಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವಮನ್‌ಸುಖ್ ಮಾಂಡವಿಯ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ನಗರದಲ್ಲಿ ಭಾನುವಾರ ಹಮ್ಮಿಕೊಂಡ 25ನೇ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ 227 ವಿದ್ಯಾರ್ಥಿಗಳಿಗೆ ಪದವಿ ಹಾಗೂ 13 ವಿದ್ಯಾರ್ಥಿಗಳಿಗೆ ಪ್ರಶಂಸನೀಯ ಪುರಸ್ಕಾರ ಪ್ರದಾನ ಮಾಡಿದರು.

‘ವಿವಿಧ ಮಾನಸಿಕ ಕಾಯಿಲೆಗಳಿಂದ ಯುವಜನರು ಆತ್ಮಹತ್ಯೆಗೆ ಶರಣಾಗತರಾಗುತ್ತಿರುವುದು ಆತಂಕಕಾರಿ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು 18ರಿಂದ 45 ವರ್ಷದೊಳಗಿನವರಾಗಿದ್ದಾರೆ.ದೈಹಿಕ ಆರೋಗ್ಯಕ್ಕೆ ನೀಡುತ್ತಿರುವ ಮಹತ್ವನ್ನು ಮಾನಸಿಕ ಆರೋಗ್ಯಕ್ಕೆ ನೀಡದಿರುವುದೇ ಇದಕ್ಕೆ ಕಾರಣ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನದಲ್ಲಿ ಇದ್ದರೆ ಮಾತ್ರ ವ್ಯಕ್ತಿ ಸಂತೋಷದಿಂದ ಇರಲು ಸಾಧ್ಯ’ ಎಂದು ಹೇಳಿದರು.

‘ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಿಗೆ ಚಪ್ಪಾಳೆ ತಟ್ಟಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಾಗ ಕೆಲವರು ಟೀಕೆ ಮಾಡಿದರು.ಚಪ್ಪಾಳೆ ತಟ್ಟುವುದರಿಂದ ಕೋವಿಡ್‌ ಹೋಗುತ್ತದೆಯೇ ಎಂದು ಪ್ರಶ್ನಿಸಿದರು. ದೇಶದ ಜನತೆ ಚಪ್ಪಾಳೆ ತಟ್ಟಿ, ಪ್ರೋತ್ಸಾಹ ನೀಡಿದ್ದರಿಂದ ಕೊರೊನಾ ಯೋಧರು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ದೇಶವು ವೇಗವಾಗಿ ಪ್ರಗತಿ ಹೊಂದುತ್ತಿದೆ.ನವ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು’ ಎಂದರು.

ಪ್ರತ್ಯೇಕ ಕೋರ್ಸ್ ಪ್ರಾರಂಭಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪ್ರತಿಯೊಬ್ಬರೂ ಮಾನಸಿಕ ವಿಜ್ಞಾನವನ್ನು ಅರಿತುಕೊಳ್ಳಬೇಕಾಗಿದೆ. ದೈಹಿಕ ಒತ್ತಡ ಇಲ್ಲದವರಿಗೆ ಮಾನಸಿಕ ಒತ್ತಡ ಜಾಸ್ತಿ ಇರಲಿದೆ. ತನ್ನ ಮನಸ್ಸಿಗೆ ಅನಿಸಿದ್ದನ್ನು ಮಾಡಲು ಅವಕಾಶ ಇರುವ ವ್ಯಕ್ತಿ ಸಂತೋಷದಿಂದ ಜೀವನ ಸಾಗಿಸಲು ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದಾರೆ. ಕುಟುಂಬ ನಿರ್ವಹಣೆ, ಉದ್ಯೋಗದ ಜೊತೆಗೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ. ಮಹಿಳೆಯರಲ್ಲಿನ ಒತ್ತಡ ಹೋಗಲಾಡಿಲು ಸಂಸ್ಥೆಯು ಪ್ರತ್ಯೇಕ ಕೋರ್ಸ್ ಪ್ರಾರಂಭಿಸಬೇಕು’ ಎಂದು ತಿಳಿಸಿದರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ನಮ್ಮಲ್ಲಿ ವೈದ್ಯರನ್ನು ಜನರು ದೇವರಂತೆ ಕಾಣುತ್ತಾರೆ. ದೇವರಿಗೆ ಇರುವ ಜವಾಬ್ದಾರಿ ಪ್ರತಿಯೊಬ್ಬ ವೈದ್ಯರ ಮೇಲಿದೆ ಎಂಬುದನ್ನು ಅರಿತು ಕೆಲಸ ಮಾಡಬೇಕು. ಕೋವಿಡ್ ಕಾಣಿಸಿಕೊಂಡ ಪ್ರಾರಂಭಿಕ ದಿನಗಳಲ್ಲಿ ಕೆಲ ಹಿರಿಯ ವೈದ್ಯರು ಚಿಕಿತ್ಸೆಗೆ ಹಿಂದೇಟು ಹಾಕಿದರು. ಆ ವೇಳೆ ಕಿರಿಯ ವೈದ್ಯರು ಮುಂದೆ ಬಂದು ಆರೈಕೆ ಮಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಾದೇಶಿಕ ಕೇಂದ್ರ ಅಗತ್ಯ’

‘ನಿಮ್ಹಾನ್ಸ್‌ಗೆ ಚಿಕಿತ್ಸೆ ಪಡೆಯಲು ದೇಶದ ವಿವಿಧೆಡೆಯಿಂದ ರೋಗಿಗಳು ಬರುತ್ತಾರೆ. ಇದರಿಂದಾಗಿ ರೋಗಿಗಳ ದಟ್ಟಣೆ ಉಂಟಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಸಂಸ್ಥೆಯ ಪ್ರಾದೇಶಿಕ ಕಚೇರಿಗಳನ್ನು ರಾಜ್ಯದ ವಿವಿಧೆಡೆ ಪ್ರಾರಂಭಿಸಬೇಕಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕೇಂದ್ರವೂ ರಾಜ್ಯದ ವಿವಿಧೆಡೆ ಪ್ರಾರಂಭವಾಗಲಿದೆ. ಮುಂದಿನ ಬಜೆಟ್‌ನಲ್ಲಿ ಮಾನಸಿಕ ಕೇಂದ್ರಗಳ ಸ್ಥಾಪನೆಗೆ ಅನುದಾನ ಮೀಸಲಿಡಲಾಗುವುದು’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

100 ವೆಂಟಿಲೇಟರ್‌ಗಳ ಪೂರೈಕೆ

‘ದೂರದ ಊರುಗಳಿಂದ ನಿಮ್ಹಾನ್ಸ್‌ಗೆ ಬರುವವರುಚಿಕಿತ್ಸೆತೆ ಸಿಗದೆಯೇ ವಾಪಸ್ ತೆರಳುವಂತೆ ಆಗಬಾರದು. ಎಕ್ಸ್‌–ರೇ ಸೇರಿದಂತೆ ಸಣ್ಣ ಸಣ್ಣ ಪರೀಕ್ಷೆಗಳಿಗೂ ಎರಡರಿಂದ ಮೂರು ದಿನಗಳವರೆಗೆ ಕಾಯುವಂತಾಗಬಾರದು. ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ನಿಮಿಷಗಳಲ್ಲಿಯೇ ಪರೀಕ್ಷೆ ಮಾಡುವ ವ್ಯವಸ್ಥೆಯಿದೆ. ಅದನ್ನು ಅಳವಡಿಕೊಳ್ಳಬೇಕಿದೆ. ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ’ ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

‘ಕೆಲದಿನಗಳ ಹಿಂದಷ್ಟೇವ್ಯಕ್ತಿಯೊಬ್ಬರಿಗೆ ವೆಂಟಿಲೇಟರ್ ಸಿಗದ ಘಟನೆ ಸಂಸ್ಥೆಯಲ್ಲಿ ನಡೆದಿತ್ತು. ಮುಂದೆ ಇಂತಹ ಘಟನೆಗಳು ಸಂಭವಿಸಬಾರದು. ಹಾಗಾಗಿ, 6 ತಿಂಗಳ ಒಳಗೆ ಎರಡು ಹಂತಗಳಲ್ಲಿ 100 ವೆಂಟಿಲೇಟರ್‌ಗಳನ್ನು ಪೂರೈಸಲಾಗುವುದು. ಅಗತ್ಯ ಸಿಬ್ಬಂದಿಯನ್ನೂ ನೀಡಲಾಗುವುದು. ಯಾರು ಕೂಡ ಚಿಕಿತ್ಸೆಗಾಗಿ ಕಾಯುತ್ತಾ ಕುಳಿತುಕೊಳ್ಳುವಂತಾಗಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT