ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ| ಸಾಹಿತಿ ನಿರ್ಮಲಾ ಸದಸ್ಯತ್ವ ಅಮಾನತು: ಕಸಾಪ ಅಂಗೀಕಾರ

Last Updated 26 ಮಾರ್ಚ್ 2023, 13:36 IST
ಅಕ್ಷರ ಗಾತ್ರ

ವಿಜಯಪುರ: ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ದ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಅವಮಾನ ಮಾಡಿದ್ದ ಸಹಾಯಕ ನಿರ್ದೇಶಕಿ, ಸಾಹಿತಿ ನಿರ್ಮಲಾ ಯಲಿಗಾರ ಅವರ ಸದಸ್ಯತ್ವ ಅಮಾನತು ಮಾಡಿರುವ ಕ್ರಮವನ್ನು ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಬಹುಮತದಿಂದ ಅಂಗೀಕರಿಸಿದೆ ಎಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯತ್ವ ಅಮಾನತು ಮಾಡುವ ಮುನ್ನಾ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿತ್ತು. ಆದರೆ, ಅವರಿಂದ ಉತ್ತರ ಬಾರದ ಕಾರಣ ಅಮಾನತು ಮಾಡಲಾಗಿದೆ ಎಂದರು.

ವಿಜಯಪುರದಲ್ಲಿ ಭಾನುವಾರ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಾಜರಿದ್ದ 47 ಸದಸ್ಯರಲ್ಲಿ 40 ಸದಸ್ಯರು (ಶೇ 88.36 ಮತಗಳು) ಮತ ಚಲಾಯಿಸುವ ಮೂಲಕ ನಿರ್ಮಲಾ ಅವರ ಅಮಾನತು ಆದೇಶವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ನಿರ್ಮಲಾ ಅವರು ಸರ್ಕಾರಿ ಸ್ವಾಮ್ಯದ ದೂರದರ್ಶನ ಕೇಂದ್ರದಲ್ಲಿ ಕಸಾಪ ವಿರುದ್ಧ ಮೌನಾಚರಣೆ ಮಾಡುವ ಮೂಲಕ ಸರ್ಕಾರಿ ಕಚೇರಿ ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೇ, ಪತ್ರಿಕಾಗೋಷ್ಠಿ ನಡೆಸಿ ಕಸಾಪ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರಿಗೂ ಪತ್ರ ಬರೆಯಲಾಗಿದೆ ಎಂದರು.

ನಿರ್ಮಲಾ ಯಲಿಗಾರ ಸೇರಿದಂತೆ ಅನೇಕರು ಹಾವೇರಿ ಸಾಹಿತ್ಯ ಸಮ್ಮೇಳನವನ್ನು ಕೆಡಿಸಲು ಅನಗತ್ಯ ವಿವಾದ ಸೃಷ್ಟಿಸಿದ್ದರು, ಪರ್ಯಾಯ ಸಮ್ಮೇಳನ ನಡೆಸಿದರು. ಆದರೆ, ಜನರೇ ಸೇರದೆ ಅದು ವಿಫಲವಾಯಿತು ಎಂದು ಹೇಳಿದರು.

ಕಸಾಪಕ್ಕೆ ಎಡ, ಬಲ ಸೇರಿದಂತೆ ಯಾವುದೇ ಪಂಥ ಇಲ್ಲ, ಇದು ಕನ್ನಡ ಪಂಥ ಮಾತ್ರ. ಇದು ಯಾವುದೇ ಧರ್ಮ, ಜಾತಿ, ಪಕ್ಷದ ವೇದಿಕೆಯಲ್ಲ ಎಂದು ಸ್ಪಷ್ಟಪಡಿಸಿದರು.

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಪೈಕಿ ಈಗಾಗಲೇ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಕಾನೂನಾಗಿದೆ. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸರ್ಕಾರ ಅಂಗೀಕಾರ ನೀಡಿದೆ. ಜೊತೆಗೆ ಹಾವೇರಿಯಲ್ಲಿ ₹ 3 ಕೋಟಿ ಅನುದಾನದಲ್ಲಿ ಕನ್ನಡ ಭವನ ಕಟ್ಟಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ಕಸಾಪ ಗೌರವ ಕಾರ್ಯದರ್ಶಿ ಪದ್ಮನಿ ನಾಗರಾಜು ಹಾಗೂ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರಾದ ಹಾಸಿಂಪೀರ ವಾಲಿಕಾರ, ಶಿವಾನಂದ ಶೆಲ್ಲಿಕೇರಿ, ಕೆ.ಸಿದ್ದಲಿಂಗಪ್ಪ, ಅಂಜನಕುಮಾರ್, ನೆ.ಬ.ರಾಮಲಿಂಗ ಶೆಟ್ಟಿ, ಸುರೇಶ ಕುಮಾರ್, ಲಿಂಗಯ್ಯ ಹಿರೇಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT