ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯ: ಕಪಾಟು ಸೇರಿದ ತಜ್ಞರ ಸಮಿತಿ ವರದಿ

ಮಹಿಳೆಯರು, ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ನಿಯಂತ್ರಣಕ್ಕಾಗಿ ಸಮಿತಿ
Last Updated 29 ಆಗಸ್ಟ್ 2021, 16:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಧಾನ ಪರಿಷತ್‌ನ ಆಗಿನ ಸದಸ್ಯ ವಿ.ಎಸ್‌. ಉಗ್ರಪ್ಪ ನೇತೃತ್ವದ ಸದಸ್ಯರ ತಜ್ಞರ ಸಮಿತಿಯು ಸುದೀರ್ಘ ಕಾಲ ಅಧ್ಯಯನ ನಡೆಸಿ ಸಲ್ಲಿಸಿದ್ದ ವರದಿಯು ಮೂರು ವರ್ಷಗಳಿಂದ ಕಪಾಟು ಸೇರಿದೆ.

ಬಹುತೇಕ ಜಿಲ್ಲೆಗಳಿಗೆ ಭೇಟಿ ನೀಡಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಮಾಹಿತಿ ಸಂಗ್ರಹಿಸಿದ್ದ ಸಮಿತಿ, ಬಹು ಆಯಾಮಗಳಲ್ಲಿ ಅಧ್ಯಯನ ನಡೆಸಿತ್ತು. ಮೂರು ವರ್ಷಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿ 2018ರ ಮಾರ್ಚ್‌ 23ರಂದು 6,017 ಪುಟಗಳ ವರದಿಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು.

1,200 ಪುಟಗಳ ಮುಖ್ಯ ವರದಿ ಮತ್ತು 11 ಸಂಪುಟಗಳ ಅನುಬಂಧಗಳೊಂದಿಗೆ ವಿಸ್ತೃತ ವರದಿಯಲ್ಲಿ ಹಲವು ಶಿಫಾರಸುಗಳನ್ನೂ ಮಾಡಿತ್ತು.

ತಾಲ್ಲೂಕಿಗೊಂದು ವಿಶೇಷ ಪೊಲೀಸ್‌ ಠಾಣೆ ತೆರೆಯುವುದು, ಆರೋಪಿಗಳು ಖುಲಾಸೆಯಾದರೆ ತನಿಖಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು, ಪ್ರೇಮ ವಿವಾಹಕ್ಕೆ ಅಡ್ಡಿಪಡಿಸಿರುವ ಪೋಷಕರಿಗೆ ಶಿಕ್ಷೆ ವಿಧಿಸಲು ಕಾನೂನು ರೂಪಿಸುವುದು, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದವರ ಆಸ್ತಿ ಜಪ್ತಿ ಮತ್ತು ಮತದಾನದ ಹಕ್ಕು ರದ್ದುಗೊಳಿಸುವುದು ಸೇರಿದಂತೆ 135 ಶಿಫಾರಸುಗಳು ವರದಿಯಲ್ಲಿದ್ದವು.

ಮೂಲೆ ಸೇರಿದ ವರದಿ: ವರದಿ ಸ್ವೀಕರಿಸಿದ್ದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಹಂತದಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲಾಗುವುದು. ಕೇಂದ್ರ ಸರ್ಕಾರದ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಲಾಗುವುದು ಎಂಬ ಭರವಸೆ ನೀಡಿದ್ದರು.

‘2018ರ ವಿಧಾನಸಭಾ ಚುನಾವಣೆ ಬಳಿಕ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗಿನ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿಮಾಡಿ ವರದಿ ಜಾರಿಗೆ ಒತ್ತಾಯಿಸಿದ್ದೆವು. ನಂತರ ಸಮ್ಮಿಶ್ರ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಬಂತು. ಯಾವ ಪ್ರಗತಿಯೂ ಆಗಿಲ್ಲ’ ಎಂದು ಸಮಿತಿಯ ಸದಸ್ಯೆಯಾಗಿದ್ದ ಮೋಟಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಉಗ್ರಪ್ಪ ನೇತೃತ್ವದ ಸಮಿತಿಯು ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ವಿಚಾರದಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ದೌರ್ಜನ್ಯ ಪ್ರಕರಣಗಳು ನಡೆದರೆ, ತನಿಖೆಯಲ್ಲಿ ಲೋಪವಾದರೆ ಸಮಿತಿ ವಿವರಣೆ ಕೇಳುತ್ತದೆ ಎಂಬ ಭಯ ಅಧಿಕಾರಿಗಳಲ್ಲಿ ಇತ್ತು. ಈಗ ಯಾವ ಹೆದರಿಕೆಯೂ ಇಲ್ಲ. ತಜ್ಞರ ಸಮಿತಿಯ ಮಾದರಿಯಲ್ಲೇ ಶಾಶ್ವತವಾದ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರಬೇಕು. ತಜ್ಞರ ಸಮಿತಿಯ ಶಿಫಾರಸುಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅವರು ಆಗ್ರಹಿಸಿದರು.

ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಅವರ ಮೊಬೈಲ್‌ ಸಂಖ್ಯೆ ‘ಸ್ವಿಚ್ಡ್‌ ಆಫ್‌’ ಆಗಿತ್ತು.

‘ಶ್ರಮ ವ್ಯರ್ಥ ಆಗದಿರಲಿ’

‘ನಮ್ಮ ಸಮಿತಿಯಲ್ಲಿದ್ದ ಎಲ್ಲರೂ ತುಂಬಾ ಶ್ರಮವಹಿಸಿ ಅಧ್ಯಯನ ನಡೆಸಿ, ವೈಜ್ಞಾನಿಕವಾಗಿ ವರದಿಯೊಂದನ್ನು ಸಿದ್ಧಪಡಿಸಿ ನೀಡಿದ್ದೆವು. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಹಕಾರಿಯಾಗುವಂತಹ ಶಿಫಾರಸುಗಳು ವರದಿಯಲ್ಲಿವೆ. ಅವುಗಳನ್ನು ಅನುಷ್ಠಾನಕ್ಕೆ ತರುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಸಮಿತಿಯ ಸದಸ್ಯರ ಶ್ರಮ ವ್ಯರ್ಥ ಆಗಬಾರದು’ ಎಂದು ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದ ವಿ.ಎಸ್‌. ಉಗ್ರಪ್ಪ ಪ್ರತಿಕ್ರಿಯಿಸಿದರು.

ಸಮಿತಿಯಲ್ಲಿ ಯಾರಿದ್ದರು?

ವಿಧಾನ ಪರಿಷತ್‌ ಸದಸ್ಯರಾಗಿದ್ದ ಎಂ.ಸಿ.ನಾಣಯ್ಯ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ನೇಮಿಸಿ 2014ರಲ್ಲಿ ಆದೇಶ ಹೊರಡಿಸಲಾಗಿತ್ತು. 2015ರಲ್ಲಿ ನಾಣಯ್ಯ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ವಿ.ಎಸ್‌. ಉಗ್ರಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸಮಿತಿಯನ್ನು ಪುನರ್‌ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT