ಗುರುವಾರ , ಮೇ 26, 2022
28 °C

ರಾತ್ರಿ ಕರ್ಫ್ಯೂ ಆದೇಶದಲ್ಲಿ ಬದಲಾವಣೆ ಇಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹತ್ತು ದಿನಗಳ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ತಜ್ಞರ ಸಲಹೆ ಆಧರಿಸಿಯೇ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ತೀರ್ಮಾನ ಮಾಡಲಾಗಿದೆ. ಎಲ್ಲ ಸಾಧಕ ಬಾಧಕಗಳನ್ನು ನೋಡಿಕೊಂಡೇ ನಿರ್ಧಾರ ಕೈಗೊಳ್ಳಲಾಗಿದೆ. ಹತ್ತು ದಿನಗಳವರೆಗೂ ಈ ವ್ಯವಸ್ಥೆ ಮುಂದುವರಿಯಲಿದೆ’ ಎಂದರು.

ಹತ್ತು ದಿನಗಳ ಕಾಲ ರಾತ್ರಿ ಕರ್ಫ್ಯೂ ಹೇಗಿರಲಿದೆ ಎಂಬ ಮಾರ್ಗಸೂಚಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಉತ್ತಮ ರೀತಿಯಲ್ಲಿ ಮಾರ್ಗಸೂಚಿ ಪಾಲಿಸುವ ಮೂಲಕ ಜನರು ಸಂಪೂರ್ಣ ಸಹಕಾರ ನೀಡಬೇಕು. ನಂತರ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ತಜ್ಞರ ಜತೆ ಚರ್ಚಿಸಿ ಮುಂದಿನ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

ಕೋವಿಡ್‌ ಎರಡನೇ ಅಲೆಯಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ಜನರು ಅರಿಯಬೇಕು. ಯಾವ ಕಾರಣಕ್ಕಾಗಿ ಆಗ ಲಾಕ್‌ಡೌನ್‌ ಅನಿರ್ವಾಯವಾಗಿತ್ತು ಎಂಬುದನ್ನೂ ತಿಳಿಯಬೇಕು. ರಾತ್ರಿ ಕರ್ಫ್ಯೂ ಜಾರಿಗೆ ಪದೇ ಪದೇ ವಿರೋಧ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.

ಕೋವ್ಯಾಕ್ಸಿನ್‌ ಲಸಿಕೆಗೆ ಬೇಡಿಕೆ: ರಾಜ್ಯದಲ್ಲಿ 15ರಿಂದ 18 ವರ್ಷ ವಯಸ್ಸಿನ 43 ಲಕ್ಷ ಮಕ್ಕಳಿಗೆ ಲಸಿಕೆ ಹಾಕಬೇಕಾಗಿದೆ. ಎಲ್ಲರಿಗೂ ಕೋವ್ಯಾಕ್ಸಿನ್‌ ಲಸಿಕೆಯನ್ನೇ ನೀಡಲು ತೀರ್ಮಾನಿಸಲಾಗಿದೆ. ಆದರೆ, ಅಷ್ಟು ಪ್ರಮಾಣದ ಕೋವ್ಯಾಕ್ಸಿನ್‌ ಲಸಿಕೆ ರಾಜ್ಯದಲ್ಲಿ ದಾಸ್ತಾನು ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಸುಧಾಕರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು