ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಸಿಬ್ಬಂದಿಗಿಲ್ಲ ಕೋವಿಡ್‌ ಪ್ರೋತ್ಸಾಹಧನ

30 ಸಾವಿರ ಗುತ್ತಿಗೆ, ಹೊರಗುತ್ತಿಗೆ ನೌಕರರು ಕರ್ತವ್ಯದಲ್ಲಿ ಭಾಗಿ
Last Updated 13 ಸೆಪ್ಟೆಂಬರ್ 2020, 19:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್–19‌ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿಗೆ ಕೋವಿಡ್‌ ಭತ್ಯೆ (ಪ್ರೋತ್ಸಾಹಧನ) ಮರೀಚಿಕೆಯಾಗಿದೆ.

ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್ (ಗ್ರಾಮೀಣ ಮತ್ತು ನಗರ) ಹಾಗೂ ಮಹಾನಗರ ಪಾಲಿಕೆಗಳ ಆರೋಗ್ಯ ಕೇಂದ್ರಗಳಲ್ಲಿ 30 ಸಾವಿರಕ್ಕೂ ಅಧಿಕ ನೌಕರರು ಸಾಮಾನ್ಯ ಸೇವೆ ಜತೆಗೆ ಕೋವಿಡ್‌ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದಾರೆ.

ಕಾಯಂ ಸಿಬ್ಬಂದಿಗೆ ಕೋವಿಡ್‌ ಪ್ರೋತ್ಸಾಹಧನ ಸಿಗುತ್ತಿದೆ. ಆದರೆ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ನೀಡುತ್ತಿಲ್ಲ. ಕೋವಿಡ್‌ ಭತ್ಯೆ ಸೇರಿ 14 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘವು ಪ್ರತಿಭಟನೆ ಎಚ್ಚರಿಕೆ ನೀಡಿದಾಗ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಶ್ರೀನಿವಾಸಾಚಾರ್ಯ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. 3 ತಿಂಗಳಲ್ಲಿ ವರದಿ ನೀಡಲು ಸೂಚಿಸಿತ್ತು. ಸೆ.9ಕ್ಕೆ ಗಡುವು ಮುಗಿದರೂ ಸಮಿತಿ ವರದಿ ನೀಡಿಲ್ಲ. ಸರ್ಕಾರ ಕೂಡ ಪ್ರೋತ್ಸಾಹಧನ ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ ಎಂಬುದು ಸಂಘದ ಆರೋಪ.

ಕೋವಿಡ್‌ ಕರ್ತವ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಪ್ರೋತ್ಸಾಹಧನ ನೀಡಲು ಸರ್ಕಾರ ಆದೇಶಿಸಿತ್ತು. ಆದರೆ, ಆದೇಶದಲ್ಲಿ ಗುತ್ತಿಗೆ ನೌಕರರ ಬಗ್ಗೆ ಸ್ಪಷ್ಟ ಉಲ್ಲೇಖ ಇಲ್ಲದ ಕಾರಣ ಭತ್ಯೆ ನೀಡುತ್ತಿಲ್ಲ. ಸರ್ಕಾರವೇ ಸ್ಪಷ್ಟನೆ ನೀಡಿ, ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿಶ್ವಾರಾಧ್ಯ ಎಚ್‌.ಯಮೋಜಿ ಆಗ್ರಹಿಸುತ್ತಾರೆ.

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿ (ಎನ್‌ಯುಎಚ್‌ಎಂ) ಆಯಾ ಸ್ಥಳೀಯ ಸಂಸ್ಥೆಗಳೇ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡು ವೇತನ ನೀಡುತ್ತವೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆ ಆರೋಗ್ಯ ಸಿಬ್ಬಂದಿಗೆ ಆಗಸ್ಟ್‌ 1ರಿಂದಲೇ ಅನ್ವಯವಾಗುವಂತೆ ಕೋವಿಡ್‌ ಭತ್ಯೆ ನೀಡಲಾಗುತ್ತಿದೆ. ಆದರೆ, ಇತರ ಜಿಲ್ಲೆಗಳ ಗುತ್ತಿಗೆ ಸಿಬ್ಬಂದಿಗೆ ಭತ್ಯೆ ನೀಡುತ್ತಿಲ್ಲ.

‘ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ನಿತ್ಯ ಸಾವಿರಾರು ಕೊರೊನಾ ಸೋಂಕಿನ ತಪಾಸಣೆಗಳನ್ನು ಗುತ್ತಿಗೆ ಸಿಬ್ಬಂದಿಯೇ ಮಾಡುತ್ತಿದ್ದಾರೆ. ಜತೆಗೆ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲೂ ಜೀವಭಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಕೋವಿಡ್‌ ಭತ್ಯೆ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಹೆಸರೇಳಲು ಇಚ್ಛಿಸದ ಗುತ್ತಿಗೆ ನೌಕರರೊಬ್ಬರು ಒತ್ತಾಯಿಸಿದರು.

ಅಧಿವೇಶನ ಅವಧಿಯಲ್ಲಿ ಸೇವೆ ಸ್ಥಗಿತ

ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಅಧಿವೇಶನ ಸಂದರ್ಭದಲ್ಲಿ ಹಕ್ಕೊತ್ತಾಯಕ್ಕೆ ಆಗ್ರಹಿಸುತ್ತೇವೆ. ರಾಜ್ಯವ್ಯಾಪಿ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಮುಷ್ಕರದ ಬಗ್ಗೆ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ ಎಂದುಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವಾರಾಧ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT