ಮಂಗಳವಾರ, ಮೇ 17, 2022
27 °C
ಬಜೆಟ್‌ನ ₹ 25 ಕೋಟಿಯಲ್ಲಿ ಕೇವಲ ₹ 6.17 ಕೋಟಿ ಮಂಜೂರು

ಗಡಿ ಅಭಿವೃದ್ಧಿಗೆ ಇಲ್ಲ ಅನುದಾನ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಡಿ ವಿಷಯದಲ್ಲಿ ಮಹಾರಾಷ್ಟ್ರ, ಕೇರಳ, ಗೋವಾ ಕ್ಯಾತೆ ತೆಗೆದ ಸಂದರ್ಭಗಳಲ್ಲಿ ‘ಕೆಣಕಿದರೆ ಸುಮ್ಮನಿರಲ್ಲ’ ಎಂದು ಸರ್ಕಾರದ ನೇತೃತ್ವ ವಹಿಸಿದವರು ಗುಡುಗುತ್ತಲೇ ಬಂದಿದ್ದಾರೆ. ಆದರೆ, ಗಡಿಗಳಲ್ಲಿ ಕನ್ನಡ ಭಾಷೆ– ಅಭಿವೃದ್ಧಿ ಚಟುವಟಿಕೆಗಳಿಗೆ 2020-21ನೇ ಸಾಲಿನ ಬಜೆಟ್‌ನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮೂಲಕ ₹ 25 ಕೋಟಿ ಮಂಜೂರು ಮಾಡಿದ್ದರೂ ₹ 18.82 ಕೋಟಿ ಇನ್ನೂ ಬಿಡುಗಡೆಯೇ ಆಗಿಲ್ಲ!

ರಾಜ್ಯದ 19 ಜಿಲ್ಲೆಗಳ 63 ಗಡಿ ತಾಲ್ಲೂಕುಗಳು ಮತ್ತು ಗಡಿಗೆ ಹೊಂದಿಕೊಂಡಿರುವ ಆರು ನೆರೆ ರಾಜ್ಯಗಳ ಗಡಿಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಅಭಿವೃದ್ಧಿಗಾಗಿ ‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ 2010ರಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯಾಗಿರುವ ರಶ್ಮಿ ಮಹೇಶ್‌, ಪ್ರಾಧಿಕಾರದ ಅಧ್ಯಕ್ಷರಾಗಿ (ಅಧ್ಯಕ್ಷರಿಲ್ಲದ ಅವಧಿ) ನಿಭಾಯಿಸಿದ ಆರು ತಿಂಗಳಲ್ಲಿ ಪ್ರಾಧಿಕಾರದಿಂದ ₹ 26 ಕೋಟಿ ಮೊತ್ತ ಕಾಮಗಾರಿಗಳಿಗೆ ಸರ್ಕಾರಿ ಆದೇಶವಾಗಿದೆ. ನಯಾ ಪೈಸೆ ಬಿಡುಗಡೆಯಾಗಿಲ್ಲ. ಬೀದರ್‌, ಬಂಟ್ವಾಳ, ಗುಂಡ್ಲುಪೇಟೆ ಶಾಸಕರ ಪ್ರಸ್ತಾವನೆಗಳ ಮಂಜೂರಾತಿಯೂ ಇದರಲ್ಲಿವೆ.

‘ಮರಾಠಾ ಸಮುದಾಯದವರನ್ನು ಓಲೈಸಲು ₹ 50 ಕೋಟಿ ಮೀಸಲಿಟ್ಟು ನಿಗಮ ಸ್ಥಾಪಿಸಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿಭಾಗದ ಸಾವಿರಾರು ಕನ್ನಡ ವಿದ್ಯಾರ್ಥಿಗಳು ಮತ್ತು ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿಲ್ಲ’ ಎಂದು ಕನ್ನಡ ಹೋರಾಟಗಾರ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ತಮ್ಮನಗೌಡ ಈಶ್ವರಪ್ಪ ರವಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದ ಗಡಿ ತಾಲ್ಲೂಕುಗಳಲ್ಲಿ 13,255 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿವೆ. ಕಾಸರಗೋಡಿನಲ್ಲಿ 89 ಸರ್ಕಾರಿ, 100 ಅನುದಾನಿತ ಸೇರಿ ಒಟ್ಟು 189 ಕನ್ನಡ ಶಿಕ್ಷಣ ಸಂಸ್ಥೆಗಳಿವೆ. ಮಹಾರಾಷ್ಟ್ರದ ಮತ್ತು ಕೇರಳದ ಗಡಿಗಳಲ್ಲಿ ಕನ್ನಡದ ಚಟುವಟಿಕೆಗೆ ಒತ್ತು ನೀಡದಿದ್ದರೆ ಕನ್ನಡದ ಅಸ್ವಿತ್ವಕ್ಕೇ ಧಕ್ಕೆಯಾಗಲಿದೆ. ಇಲ್ಲಿ ಕನ್ನಡ ಉಳಿಸುವ ಜೊತೆಗೆ, ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಬೇಕಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಕಟ್ಟುವ ಕೆಲಸ ಗರಿಷ್ಠ ಮಟ್ಟದಲ್ಲಿ ನಡೆದರೆ ನಮ್ಮ ದನಿ ಬಲಗೊಳ್ಳಲು ಸಾಧ್ಯ. ಗಡಿ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಕನಿಷ್ಠ ₹ 500 ಕೋಟಿಯ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಬೆಳಗಾವಿ ಭಾಗದವರ ಸಮಸ್ಯೆ ಒಂದು ತೆರನಾದರೆ, ಅತ್ತ ಕಾಸರಗೋಡಿನವರ ಗೋಳು ಬೇರೊಂದು. ಇತ್ತ ಗೋವಾ ಕನ್ನಡಿಗರ ಅಳಲು ಮತ್ತೊಂದು ರೀತಿಯದ್ದು. ಗಡಿ ಕನ್ನಡಿಗರ ಕಣ್ಣೀರಧಾರೆಗೆ ಅಂತ್ಯವಾಡುವ ತುರ್ತು ಕೆಲಸ ಆಗಬೇಕಿದೆ’ ಎಂದೂ ಅವರು ಹೇಳಿದರು.

ಹಳೆ ಬಾಕಿಯೇ ₹ 61.37 ಕೋಟಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಗಳ ಪ್ರಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಹಿಂದಿನ ವರ್ಷಗಳ ಮುಂದುವರಿದ ಕಾಮಗಾರಿಗಳಿಗೆ ₹ 35.49 ಕೋಟಿ ಮತ್ತು 2019–20ನೇ ಸರ್ಕಾರ ಆದೇಶ ಮಾಡಿರುವ ಕಾಮಗಾರಿಗೆ ₹ 25.88 ಕೋಟಿ ಸೇರಿ ₹ 61.37 ಕೋಟಿ ಬಿಡುಗಡೆ ಆಗಬೇಕಿದೆ. 2020–21ನೇ ಸಾಲಿನಲ್ಲಿ ಬಿಡುಗಡೆಗೆ ಬಾಕಿ ಇರುವ ₹ 18.82 ಕೋಟಿ ನೀಡಿದರೂ, ಹಿಂದಿನ ವರ್ಷಗಳಲ್ಲಿ ಕೈಗೊಂಡ ಕಾಮಗಾರಿಗಳ ಮೊತ್ತ ₹ 42.54 ಕೋಟಿ ಉಳಿಕೆಯಾಗಲಿದೆ.

***

ನಮ್ಮ ಭಾಗದಲ್ಲಿರುವ ಕನ್ನಡ ಶಾಲೆಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ನಮ್ಮ ಸರ್ಕಾರ ಕೂಡ ಲಕ್ಷ್ಯ ಕೊಡುತ್ತಿಲ್ಲ. ಅನಾಥ ಪ್ರಜ್ಞೆ, ಪರಕೀಯ ಪ್ರಜ್ಞೆ ಮೂಡುವಂತಾಗಿದೆ.
ತಮ್ಮನಗೌಡ ಈಶ್ವರಪ್ಪ ರವಿ ಪಾಟೀಲ, ಜಿ.ಪಂ ಸದಸ್ಯ ಸಾಂಗ್ಲಿ ಹಾಗೂ ಕನ್ನಡ ಹೋರಾಟಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು