ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ತೆರೆಯುವ ಧಾವಂತವಿಲ್ಲ, ಆತಂಕ ಬೇಡ: ಸಚಿವ ಸುರೇಶ್‌ ಕುಮಾರ್‌

ಮಕ್ಕಳ ಹಿತಕ್ಕೆ ಧಕ್ಕೆ ಆಗಬಹುದಾದ ಯಾವುದೇ ನಿರ್ಧಾರ ದಿಢೀರ್ ತೆಗೆದುಕೊಳ್ಳುವುದಿಲ್ಲ–ಸಚಿವ ಸುರೇಶ್‌ಕುಮಾರ್‌ ಸ್ಪಷ್ಟನೆ
Last Updated 1 ಅಕ್ಟೋಬರ್ 2020, 14:32 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಹರಡುತ್ತಿರುವ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವ ಧಾವಂತ, ಪ್ರತಿಷ್ಠೆ ಸರ್ಕಾರಕ್ಕೆ ಇಲ್ಲ. ಮಕ್ಕಳ ಹಿತಕ್ಕೆ ಧಕ್ಕೆ ಆಗಬಹುದಾದ ಯಾವುದೇ ನಿರ್ಧಾರವನ್ನು ದಿಢೀರ್ ತೆಗೆದುಕೊಳ್ಳುವುದಿಲ್ಲ. ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದ್ದಾರೆ.

ಶಾಲೆಗಳನ್ನು ಆರಂಭಿಸುವ ಕುರಿತು ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಶಿಕ್ಷಕರ ಸಂಘಟನೆಗಳು ಹಾಗೂ ಪದವಿ ಪೂರ್ವ ಉಪನ್ಯಾಸಕರ ಸಂಘಗಳ ಜಿಲ್ಲಾ ಪ್ರತಿನಿಧಿಗಳ ಜೊತೆ ಗುರುವಾರ ವೆಬಿನಾರ್ ಸಂವಾದ ನಡೆಸಿ ಮಾತನಾಡಿದ ಅವರು, ‘ನಾನು ಶಿಕ್ಷಣ ಸಚಿವ ಎಂಬುದಕ್ಕಿಂತ ರಾಜ್ಯದ ಎಲ್ಲ ಶಾಲಾ ಮಕ್ಕಳ ಪೋಷಕನೂ ಆಗಿದ್ದೇನೆ ಎಂಬ ಅಂಶವೇ ಪ್ರಮುಖವಾಗಿದೆ. ಎಲ್ಲ ಪೋಷಕರಂತೆ ನನಗೂ ಆತಂಕ ಇಲ್ಲದೇ ಇಲ್ಲ. ಹೀಗಾಗಿ, ಸಾರ್ವಜನಿಕರ ಅಭಿಪ್ರಾಯ ಆಲಿಸುವ ಸರಣಿ ಆರಂಭಿಸಲಾಗಿದೆ’ ಎಂದರು.

‘ಶೀಘ್ರದಲ್ಲಿ ಸಂಸದರು, ಶಾಸಕರು, ಶಿಕ್ಷಣ ತಜ್ಞರು, ಪೋಷಕ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು, ಖಾಸಗಿ ಶಾಲಾ ಸಂಸ್ಥೆಯವರು ಹೀಗೆ ಶಿಕ್ಷಣ ಕ್ಷೇತ್ರದ ಎಲ್ಲ ಪಾಲುದಾರರೊಂದಿಗೆ ಚರ್ಚಿಸಲಾಗುವುದು. ಆ ಮೂಲಕ, ಮಕ್ಕಳ ಹಿತಕ್ಕೆ ಪೂರಕವಾದ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

‘ಮುಂದೆ ಶಾಲೆಗಳನ್ನು ಆರಂಭಿಸಬೇಕಾಗ ಬಹುದೆಂಬ ದೃಷ್ಟಿಯಿಂದ ಕೆಲವು ಎಸ್ಒಪಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿತ್ತು. ಆದರೆ, ಅದು ಶಾಲಾರಂಭದ ಸಿದ್ಧತೆ ಎಂದು ಕೆಲವರು ಭಾವಿಸಿದ್ದಾರೆ. ಅದು ಶಾಲಾರಂಭ ಕುರಿತ ಟಿಪ್ಪಣಿಯೂ ಅಲ್ಲ’ ಎಂದು ಸ್ಪಷ್ಟಪಡಿಸಿದ ಸಚಿವರು, ‘ಶಾಲಾರಂಭ ಕುರಿತು ಕೇಂದ್ರ ಸರ್ಕಾರವು ರಾಜ್ಯಗಳ ವಿವೇಚನೆಗೆ ಬಿಟ್ಟಿದೆ’ ಎಂದರು.

‘ವಿದ್ಯಾಗಮ, ಯೂ-ಟ್ಯೂಬ್, ಆನ್‌ಲೈನ್‌, ಚಂದನ ಚಾನಲ್‌ನ ಸೇತುಬಂಧ ತರಗತಿಗಳು ನಮ್ಮ ಮಕ್ಕಳ ಕಲಿಕೆಯ ನಿರಂತರತೆಗೆ ಮಾತ್ರ ಉಪಯೋಗವಾಗುತ್ತಿವೆ. ಅವು ಪೂರ್ಣ ಪರ್ಯಾಯವೂ ಅಲ್ಲ, ಪೂರಕವೂ ಅಲ್ಲ ಎಂಬುದು ನಮಗೆ ಮನವರಿಕೆಯಾಗಿದೆ. ಶಾಲಾ ತರಗತಿ ಕಲಿಕೆಯಷ್ಟು ಯಾವುದೇ ಕಲಿಕಾ ವಿಧಾನ ಪರಿಣಾಮಕಾರಿಯಲ್ಲ. ಆದರೂ ಶಾಲಾರಂಭದ ಆಲೋಚನೆ‌ ಸದ್ಯಕ್ಕೆ ನಮ್ಮ ಮುಂದೆ ಇಲ್ಲ’ ಎಂದರು.

ಶಿಕ್ಷಕ-ಉಪನ್ಯಾಸಕ ಸಂಘಟನೆಗಳ ಪ್ರತಿನಿಧಿಗಳು ಹಲವು ಸಲಹೆಗಳನ್ನು ನೀಡಿದರು. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೂಜಾಟದಲ್ಲಿ ತೊಡಗುವಿಕೆಯಂತಹ ಸಾಮಾಜಿಕ ಪಿಡುಗುಗಳು ಸೇರಿದಂತೆ ಮಕ್ಕಳು ಶಾಲೆಗಳಿಂದ ವಿಮುಖವಾಗುವಂಥ ಬಾಲಾಪರಾಧಕ್ಕೆ ಕಾರಣವಾಗಿ ಸಾಮಾಜಿಕವಾಗಿ ಮತ್ತೊಂದು ಸಮಸ್ಯೆಗೆ ಕಾರಣವಾಗುವಂತಹ ಸಂದರ್ಭಗಳು ಎದುರಾಗಬಹುದು. ಹೀಗಾಗಿ ಶಾಲೆಗಳನ್ನು ಅದರಲ್ಲೂ ವಿಶೇಷವಾಗಿ 10 ರಿಂದ 12ನೇ ತರಗತಿಗಳನ್ನಾದರೂ ಆರಂಭಿಸುವುದು ಉತ್ತಮ. ವಿದ್ಯಾಗಮವನ್ನು ಶಾಲೆಗಳ ಆವರಣದಲ್ಲಿ ನಡೆಸುವುದು ಉತ್ತಮ, ನಂತರ ಎಲ್ಲ ಮುಂಜಾಗ್ರತೆಯೊಂದಿಗೆ 7-10ನೇ ತರಗತಿಗಳನ್ನು ಆರಂಭಿಸುವುದು ಒಳಿತು. ಇಲ್ಲವೇ ಕೋವಿಡ್ ಇಲ್ಲದ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಬಹುದು ಎಂದು ಹಲವು ಶಿಕ್ಷಕರು ಅಭಿಪ್ರಾಯ ವ್ಯಕ್ತ‌ಪಡಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್, ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ವೆಬಿನಾರ್‌ನಲ್ಲಿ 45ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT