ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್‌ ಪ್ರಸ್ತಾವವಿಲ್ಲ: ಸಚಿವ ಸೋಮಶೇಖರ್‌

Last Updated 15 ಫೆಬ್ರುವರಿ 2022, 19:11 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ (ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ) (ಎಪಿಎಂಸಿ) ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಾಪಸ್‌ ಪಡೆಯುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಅವರು, ‘ಕಾಯ್ದೆ ತಿದ್ದುಪಡಿ ವಾಪಸ್‌ ಪಡೆಯುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ತಿದ್ದುಪಡಿಯ ಕುರಿತು ರಾಜ್ಯದ ರೈತರ ಹಿತಾಸಕ್ತಿಗೆ ಅನುಗುಣವಾಗಿ ಪರಿಶೀಲಿಸಲಾಗುವುದು. ಅನುಕೂಲ ಮತ್ತು ಅನಾನುಕೂಲಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ಕಾಯ್ದೆ ತಿದ್ದುಪಡಿಯಾದ ಬಳಿಕ ಎಪಿಎಂಸಿಗಳು ನಷ್ಟದಲ್ಲಿವೆ’ ಎಂಬ ಹರೀಶ್‌ ಕುಮಾರ್‌ ಹೇಳಿಕೆಯನ್ನು ಅಲ್ಲಗ
ಳೆದ ಸಚಿವರು, ‘ಮೊದಲು ಎಪಿಎಂಸಿ ಸೆಸ್‌ ದರ ಶೇಕಡ 1.5 ಇತ್ತು. ಅದನ್ನು ಶೇ 0.60ಕ್ಕೆ ಇಳಿಕೆ ಮಾಡಲಾಗಿದೆ. ಸಹಜವಾಗಿಯೇ ಆದಾಯದ ಮೊತ್ತ ₹650 ಕೋಟಿಯಿಂದ ₹ 135 ಕೋಟಿಗೆ ಇಳಿಕೆಯಾಗಿದೆ. ಆದರೆ, ಯಾವುದೇ ಎಪಿಎಂಸಿಗಳು ನಷ್ಟದಲ್ಲಿರುವ ಕುರಿತು ಮಾಹಿತಿ ಬಂದಿಲ್ಲ’ ಎಂದು ಹೇಳಿದರು.

ಈ ವಿಚಾರದಲ್ಲಿ ಆಡಳಿತ ಮತ್ತು ‍ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ‘ಕೃಷಿ ಸಂಬಂಧಿ ಮೂರು ಕಾಯ್ದೆಗಳನ್ನು ಕೇಂದ್ರವಾಪಸ್‌ ಪಡೆದಿದೆ. ದೇಶದ ಜನರ ಕ್ಷಮೆಯನ್ನೂ ಯಾಚಿಸಿದೆ. ರಾಜ್ಯ ಸರ್ಕಾರವೂ ತಿದ್ದುಪಡಿ ಹಿಂಪಡೆಯಬೇಕು ಅಥವಾ ಕೇಂದ್ರದ ನಿರ್ಧಾರ ತಪ್ಪು ಎಂದು ಹೇಳಲಿ’ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಸವಾಲು ಹಾಕಿದರು.

60 ಲೆಕ್ಕಪರಿಶೋಧಕರಿಗೆ ನಿಷೇಧ

‘ಸಹಕಾರ ಸಂಸ್ಥೆಗಳ ಲೆಕ್ಕ ಪರಿಶೋಧನೆಯಲ್ಲಿ ಅಕ್ರಮ ಎಸಗಿ, ತಪ್ಪು ವರದಿ ನೀಡಿರುವ 60 ಲೆಕ್ಕ ಪರಿಶೋಧಕರಿಗೆ ನಿಷೇಧ ವಿಧಿಸಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಬಿಜೆಪಿಯ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಹಾಕರ ಇಲಾಖೆಯಲ್ಲಿ ಲೆಕ್ಕ ಪರಿಶೋಧಕರ ಕೊರತೆ ಇದೆ. ಈ ಕಾರಣದಿಂದ ಖಾಸಗಿ ಲೆಕ್ಕ ಪರಿಶೋಧಕರ ಸೇವೆ ಪಡೆಯಲು ಅವಕಾಶ ನೀಡಲಾಗಿದೆ. 1,700 ಲೆಕ್ಕ ಪರಿಶೋಧಕರು ನೋಂದಣಿ ಮಾಡಿಸಿಕೊಂಡಿದ್ದು, ಅವರಲ್ಲಿ 60 ಮಂದಿ ಅಕ್ರಮದಲ್ಲಿ ಶಾಮೀಲಾಗಿರುವುದು ಪತ್ತೆಯಾಗಿದೆ’ ಎಂದರು.

ಲೆಕ್ಕ 402 ಲೆಕ್ಕ ಪರಿಶೋಧಕರ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕೋವಿಡ್‌ ಕಾರಣದಿಂದ ಹಣಕಾಸು ಇಲಾಖೆ ಅನುಮತಿ ನೀಡಿರಲಿಲ್ಲ. ಶೀಘ್ರದಲ್ಲಿ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT