ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಹೆಜ್ಜೆ ಹಿಂದಿಡುವ ಪ್ರಶ್ನೆಯೇ ರೈತರ ಮುಂದಿಲ್ಲ: ಡಾ. ದರ್ಶನ್ ಪಾಲ್

ಕಿಸಾನ್ ಮೋರ್ಚಾದ ನಾಯಕ ಡಾ. ದರ್ಶನ್ ಪಾಲ್
Last Updated 23 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಂಜಾಬ್‌ನಲ್ಲಿ ರೈತ ಹೋರಾಟ ಆರಂಭವಾಗಿ ಏಳು ತಿಂಗಳು ಸಮೀಪಿಸುತ್ತಿದೆ. ಈ ಅವಧಿಯಲ್ಲಿ ಚಳವಳಿಯನ್ನು ಒಡೆಯಲು, ಹತ್ತಿಕ್ಕಲು ಕೇಂದ್ರ ಸರ್ಕಾರ ಏನೆಲ್ಲಾ ಪ್ರಯತ್ನಗಳನ್ನು ಮಾಡಿದೆ ಎಂದು ದೇಶದ ಜನರಿಗೆ ಗೊತ್ತಿದೆ. ಈಗ ಉತ್ತರ ಭಾರತದಲ್ಲಿ ಕಟಾವು ಹಂಗಾಮಿನಲ್ಲಿ ರೈತರು ಸ್ವಯಂ ಒತ್ತಡಕ್ಕೆ ಸಿಲುಕಿ ಚಳವಳಿಯಿಂದ ಹಿಂದಿರುಗುತ್ತಾರೆ ಎಂಬ ‘ಆಸೆ’ಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ. ಯಾವ ಕಾರಣಕ್ಕೂ ಅಂತಹ ಬೆಳವಣಿಗೆ ನಡೆಯುವುದಿಲ್ಲ. ಹೋರಾಟದಿಂದ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ರೈತರ ಮುಂದಿಲ್ಲ’ ಎನ್ನುತ್ತಾರೆ ಸಂಯುಕ್ತ ಕಿಸಾನ್‌ ಮೋರ್ಚಾದ ಪ್ರಮುಖ ನಾಯಕರಲ್ಲಿ ಒಬ್ಬರಾದ ಡಾ.ದರ್ಶನ್ ಪಾಲ್‌.

ಕೇಂದ್ರ ಸರ್ಕಾರದ ಇಂಥ ‘ಆಸೆ’ ಈಡೇರದು. ರೈತ ಹೋರಾಟಕ್ಕೆ ಪೂರಕವಾಗಿ ವಿದ್ಯುತ್‌ ಮಂಡಳಿ ಸಿಬ್ಬಂದಿ, ಶಿಕ್ಷಣ ಇಲಾಖೆ ಮತ್ತು ಮಂಡಿ ಸಿಬ್ಬಂದಿ ನಿತ್ಯವೂ ಹೋರಾಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ದರ್ಶನ್‌ ಪಾಲ್‌.

ಕಿಸಾನ್‌ ಮಹಾ ಪಂಚಾಯತ್‌ನಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಬಂದಿದ್ದ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ದೆಹಲಿಯಲ್ಲಿ ರೈತರ ಪ್ರತಿಭಟನೆ 116 ದಿನಗಳನ್ನು ಪೂರೈಸಿದರೂ ಕೇಂದ್ರ ಸರ್ಕಾರ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಮುಂದಿನ ದಾರಿ ಏನು?

ಈಗ ದೆಹಲಿಯ ಗಡಿಗಳಲ್ಲಿ ಸತ್ಯಾಗ್ರಹ ಮುಂದುವರಿದಿದ್ದರೆ, ದೇಶದ ಉದ್ದಗಲಕ್ಕೆ ಚಳವಳಿ ವ್ಯಾಪಿಸುತ್ತಿದೆ. ಅದನ್ನು ಮತ್ತಷ್ಟು ಬಲಗೊಳಿಸುವುದಕ್ಕೆ ಪೂರಕವಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ಕಾರ್ಯಸೂಚಿಗಳನ್ನು ರೂಪಿಸುತ್ತಿದೆ.

* ರೈತ ಹೋರಾಟದ ಹಿಂದೆ ಕೆಲವು ರಾಜಕೀಯ ಪಕ್ಷಗಳಿವೆ ಮತ್ತು ಹಣವನ್ನೂ ಒದಗಿಸುತ್ತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸುತ್ತಿದೆಯಲ್ಲ?

ನಾನು ಚಳವಳಿಯ ಆರಂಭದಿಂದಲೂ ಮುಂಚೂಣಿಯಲ್ಲಿ ಇರುವವನು. ಸಿಂಘು ಗಡಿಗೆ ಬಂದ ಸಂಸದನನ್ನು ಹೊರಕ್ಕೆ ಕಳಿಸಿದೆವು. ಅರವಿಂದ ಕೇಜ್ರಿವಾಲ್‌ ಅವರಿಗೂ ಅವಕಾಶ ನೀಡಲಿಲ್ಲ. ಕೆಲವು ಪಕ್ಷಗಳ ಸದಸ್ಯರು ರೈತರಾಗಿ ಹೋರಾಟಕ್ಕೆ ಬಂದಿರಬಹುದು. ಆದರೆ, ರಾಜಕೀಯ ಪಕ್ಷಗಳು ಹೋರಾಟವನ್ನು ಮುನ್ನಡೆಸುತ್ತಿವೆ ಎಂದು ಹೇಳಲಾಗದು. ಪ್ರತಿಭಟನಾ ಸ್ಥಳಗಳಿಗೆ ನೀರು, ಆಹಾರ, ಹಾಸಿಗೆ, ಹೊದಿಕೆ ಮತ್ತಿತರ ಸೌಲಭ್ಯಗಳನ್ನು ಹಲವು ಧಾರ್ಮಿಕ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಒದಗಿಸುತ್ತಿವೆ. ರೈತ ಸಂಘಟನೆಗಳ ಬಳಿ ರೈತರು ನೀಡಿದ ದೇಣಿಗೆಯೇ ಇದೆ. ಹೊರಗಿನವರಿಂದ ಬಂದ ದೇಣಿಗೆಯ ಪ್ರಸ್ತಾವಗಳನ್ನು ನಾವು ತಿರಸ್ಕರಿಸಿದ್ದೇವೆ.

* ನಿಮ್ಮ ಹೋರಾಟ ಕಾಯ್ದೆಗಳ ವಿರುದ್ಧವೋ ಅಥವಾ ಕೇಂದ್ರ ಸರ್ಕಾರದ ವಿರುದ್ಧವೋ?

ಬೆಂಬಲ ಬೆಲೆ ಮತ್ತು ಮೂರು ಕಾಯ್ದೆಗಳ ವಿರುದ್ಧ ನಮ್ಮ ಹೋರಾಟ. ರಾಜ್ಯಗಳ ಪಟ್ಟಿಯಲ್ಲಿರುವ ಕೃಷಿ ವಿಷಯದಲ್ಲಿ ಕೇಂದ್ರ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡುತ್ತಿದೆ. ಆ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಹೀನಗೊಳಿಸಲು ಹೊರಟಿದೆ. ಈ ಹೋರಾಟದ ಮೂಲಕ ಒಕ್ಕೂಟ ವ್ಯವಸ್ಥೆಯ ಮೇಲಿನ ಕೇಂದ್ರದ ದಾಳಿಯನ್ನೂ ವಿರೋಧಿಸುತ್ತಿದ್ದೇವೆ.

* ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೋರ್ಚಾ ಏನು ಮಾಡಲಿದೆ?

ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಜನರು ರೈತ ಹೋರಾಟದ ಪರವಾಗಿ ಇದ್ದಾರೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಮತದಾರರಿಗೆ ಪತ್ರ ರವಾನಿಸಲು ಸಂಯುಕ್ತ ಕಿಸಾನ್‌ ಮೋರ್ಚಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಯಾವುದೇ ಪಕ್ಷ ಅಥವಾ ವ್ಯಕ್ತಿಯ ಪರವಾಗಿ ಮೋರ್ಚಾ ಪ್ರಚಾರ ಮಾಡುವುದಿಲ್ಲ.

* ಸುಪ್ರೀಂಕೋರ್ಟ್‌ ಮಧ್ಯಪ್ರವೇಶದ ಬಳಿಕ ಕೆಲವು ಸಂಘಟನೆಗಳು ಹೋರಾಟದಿಂದ ಹಿಂದೆ ಸರಿದಿದ್ದರಿಂದ ಹಿನ್ನಡೆ ಆಗಿಲ್ಲವೆ?

ಹೋರಾಟದ ಭಾಗವೇ ಆಗದಿದ್ದವರು ಹಾಗೆ ಘೋಷಿಸಿಕೊಂಡಿದ್ದಾರೆ. ಕೆಲವರನ್ನು ಮೊದಲೇ ನಾವು ದೂರ ಇರಿಸಿದ್ದೆವು. ಇದರಿಂದ ಯಾವ ಹಿನ್ನಡೆಯೂ ಆಗಿಲ್ಲ. ಈಗ ರಾಕೇಶ್‌ ಟಿಕಾಯತ್‌ ಅವರಂತಹ ಪ್ರಬಲ ನಾಯಕ ನಮ್ಮನ್ನು ಸೇರಿಕೊಂಡಿದ್ದಾರೆ. ದೇಶದಲ್ಲಿ ನೂರಾರು ಸಂಘಟನೆಗಳು ಹೋರಾಟದ ಜತೆ ಕೈಜೋಡಿಸಿವೆ.

* ಕರ್ನಾಟಕದಲ್ಲಿ ಚಳವಳಿಗೆ ಸ್ಪಂದನೆ ಹೇಗಿದೆ? ಹೋರಾಟದ ವಿಸ್ತರಣೆಗೆ ಇರುವ ಯೋಜನೆಗಳೇನು?

ಪಂಜಾಬ್‌, ಹರಿಯಾಣ ಮತ್ತು ಕರ್ನಾಟಕ, ದೇಶದಲ್ಲಿ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳು. ಪಂಜಾಬ್‌ ಮತ್ತು ಹರಿಯಾಣ ಉತ್ತರದಲ್ಲಿ ಹೋರಾಟ ಮುನ್ನಡೆಸುತ್ತಿವೆ. ಕರ್ನಾಟಕ, ದಕ್ಷಿಣದಲ್ಲಿ ಹೋರಾಟವನ್ನು ಮುನ್ನಡೆಸಲಿದೆ. ಶಿವಮೊಗ್ಗದಲ್ಲಿ ನಡೆದ ರೈತ ಮಹಾ ಪಂಚಾಯತ್‌ ಇದಕ್ಕೆ ಸಾಕ್ಷಿ.

* ವೈದ್ಯರಾಗಿದ್ದವರು ಈಗ ರೈತ ಹೋರಾಟ ಮುನ್ನಡೆಸುತ್ತಿದ್ದೀರಿ. ಅನುಭವ ಹೇಳಿ?

ನಾನು ಬಾಲ್ಯದಿಂದಲೂ ಕೃಷಿಯ ಜತೆಗೆ ನಂಟು ಹೊಂದಿದ್ದವನು. ಎಂಬಿಬಿಎಸ್‌ ಪದವಿ ಪಡೆಯುವವರೆಗೂ ಹೊಲಗಳಲ್ಲಿ ದುಡಿಯುತ್ತಿದ್ದೆ. 2007ರವರೆಗೂ ವೈದ್ಯಕೀಯ ವೃತ್ತಿ ಜತೆಗೆ ಹೋರಾಟದಲ್ಲೂ ಇದ್ದಿದ್ದರಿಂದ ರೈತ ಸಂಘಟನೆಗಳ ಜತೆ ನಿಕಟ ಸಂಪರ್ಕ ಇತ್ತು. 2007ರಿಂದ ಮತ್ತೆ ಪಿತ್ರಾರ್ಜಿತ ಜಮೀನಿನಲ್ಲಿ ಕೃಷಿಕನಾಗಿರುವೆ. ಹೀಗಾಗಿಯೇ ಹೋರಾಟದಲ್ಲಿರುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT