ಶನಿವಾರ, ಜುಲೈ 31, 2021
25 °C
ವಿನಯಕುಮಾರ್ ವರದಿಯೂ ನನೆಗುದಿಗೆ

ಅಕ್ರಮ ಬಯಲಿಗೆ ತಂದಿದ್ದ ರೂಪಾ: ವರ್ಷಗಳೇ ಕಳೆದರೂ ಸುಧಾರಣೆ ಕಾಣದ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರಾಗೃಹಗಳ ಒಳಕ್ಕೆ ಮಾರಕಾಸ್ತ್ರ, ಮಾದಕವಸ್ತುಗಳನ್ನು ಕೊಂಡೊಯ್ಯುವುದನ್ನು ತಡೆಯುವಂತೆ 2019ರಿಂದಲೂ ಹಲವು ಬಾರಿ ಚರ್ಚೆ ನಡೆದಿದೆ. ಕೆಲವು ವರದಿಗಳೂ ಸಲ್ಲಿಕೆಯಾಗಿವೆ. ಆದರೆ, ಯಾವುದೇ ಸುಧಾರಣೆಯೂ ಕಾರ್ಯರೂಪಕ್ಕೆ ಬಂದಿಲ್ಲ.

ಸಜಾ ಕೈದಿಯಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಯಲಿತಾ ಅವರ ಗೆಳತಿ ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ನೀಡುತ್ತಿರುವ ಕುರಿತು 2019ರಲ್ಲಿ ವರದಿಯೊಂದನ್ನು ಸಲ್ಲಿಸಿದ್ದ ಬಂದಿಖಾನೆ ಇಲಾಖೆಯ ಆಗಿನ ಡಿಐಜಿ ಡಿ. ರೂಪಾ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಹಿರಂಗಪಡಿಸಿದ್ದರು.

ಕಾರಾಗೃಹದ ಒಳಕ್ಕೆ ಮಾದಕವಸ್ತು, ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದಕ್ಕೆ ಅವಕಾಶವಿರುವುದು, ಮೊಬೈಲ್‌ಗಳ ಬಳಕೆ, ಪ್ರಭಾವಿ ಕೈದಿಗಳು ನಿಯಮ ಮೀರಿ ಹೊರಕ್ಕೆ ಬಂದು ಓಡಾಡಲು ಅವಕಾಶ ಕಲ್ಪಿಸುತ್ತಿರುವುದನ್ನೂ ವರದಿಯಲ್ಲಿ ದಾಖಲಿಸಿದ್ದರು. ಈ ಕುರಿತು ಹೆಚ್ಚಿನ ತನಿಖೆಗಾಗಿ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ನೇತೃತ್ವದ ಸಮಿತಿಯನ್ನು ನೇಮಿಸಲಾಗಿತ್ತು.

ಕಾರಾಗೃಹದಲ್ಲಿ ನಿಯಮ ಉಲ್ಲಂಘನೆ, ಭದ್ರತಾ ವೈಫಲ್ಯ ಇರುವುದನ್ನು ಖಚಿತಪಡಿಸಿದ್ದ ವಿನಯ್‌ ಕುಮಾರ್‌ ಸಮಿತಿ, ಸುಧಾರಣೆಗೆ ಹಲವು ಶಿಫಾರಸುಗಳನ್ನು ಮಾಡಿತ್ತು. 2020ರ ನವೆಂಬರ್‌ನಲ್ಲಿ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಐಪಿಎಸ್‌ ಅಧಿಕಾರಿ ಡಿ. ರೂಪಾ, ಕಾರಾಗೃಹಗಳಲ್ಲಿರುವ ಅವ್ಯವಸ್ಥೆ, ಅಕ್ರಮ ಮತ್ತು ನಿಯಮ ಉಲ್ಲಂಘನೆ ಕುರಿತು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವರದಿಯೊಂದನ್ನು ಸಲ್ಲಿಸಿದ್ದರು.

ರಾಜ್ಯದ ಕಾರಾಗೃಹಗಳಲ್ಲಿನ ಭದ್ರತಾ ವೈಫಲ್ಯದಿಂದ ಪದೇ ಪದೇ ಕೈದಿಗಳು ತಪ್ಪಿಸಿಕೊಳ್ಳುತ್ತಿರುವುದು, ಮಾರಕಾಸ್ತ್ರ ಮತ್ತು ಮಾದಕವಸ್ತುಗಳನ್ನು ನಿರಂತರವಾಗಿ ಕಾರಾಗೃಹಗಳ ಒಳಕ್ಕೆ ಕೊಂಡೊಯ್ಯುತ್ತಿರುವುದು ಹಾಗೂ ಮೊಬೈಲ್‌ ಬಳಕೆ ಅನಿಯಂತ್ರಿತವಾಗಿ ಮುಂದುವರಿದಿರುವುದನ್ನು ವರದಿಯಲ್ಲಿ ಉಲ್ಲೇಖಿಸಿದ್ದರು. ರಾಜ್ಯದ ಕಾರಾಗೃಹಗಳಲ್ಲಿ ಅಳವಡಿಸಿರುವ ಮೊಬೈಲ್‌ ಜಾಮರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ತಿಳಿಸಿದ್ದ ಅವರು, ಅತ್ಯುತ್ತಮ ಗುಣಮಟ್ಟದ ಜಾಮರ್‌ ಅಳವಡಿಸುವ ಅಗತ್ಯವಿದೆ ಎಂಬ ಶಿಫಾರಸು ಸಲ್ಲಿಸಿದ್ದರು.

‘ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದ ಕಾರಾಗೃಹಗಳ ಭದ್ರತಾ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಜಾರಿಗೆ ಬಂದಿಲ್ಲ. ಡಿ. ರೂಪಾ ಮತ್ತು ವಿನಯ್‌ ಕುಮಾರ್‌ ಸಮಿತಿಗಳು ಸಲ್ಲಿಸಿರುವ ವರದಿಗಳು ಎಲ್ಲಿವೆ? ಅವುಗಳ ಆಧಾರದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಯಾರಿಗೂ ತಿಳಿದಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಇದನ್ನೂ ಓದಿ... ಪರಪ್ಪನ ಅಗ್ರಹಾರ: ಜೈಲಲ್ಲಿ 91 ಆಯುಧ, ಮೊಬೈಲ್, ಸಿಮ್ ಕಾರ್ಡ್ ಜಪ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು