ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ನಿಯಮಗಳಲ್ಲಿ ರಿಯಾಯತಿಗೆ ಅವಕಾಶವಿಲ್ಲ: ಹೈಕೋರ್ಟ್

Last Updated 2 ಸೆಪ್ಟೆಂಬರ್ 2021, 13:28 IST
ಅಕ್ಷರ ಗಾತ್ರ

ಧಾರವಾಡ: ಉನ್ನತ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಉಳಿಸಿಕೊಳ್ಳಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೇಮಕಾತಿ ನಿಯಮಾವಳಿಗಳನ್ನು ರೂಪಿಸಿದ್ದು, ಈ ನಿಯಮಾವಳಿಗಳಲ್ಲಿ ಯಾವುದೇ ರಿಯಾಯತಿ ನೀಡಲು ವಿಶ್ವವಿದ್ಯಾಲಯಗಳಿಗೆ ಅವಕಾಶವಿಲ್ಲ ಎಂದು ಇಲ್ಲಿನ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕರ್ನಾಟಕ ವಿಶ್ವವಿದ್ಯಾಲಯದ ನೇಮಕಾತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಅಭಿಪ್ರಾಯ ಉಲ್ಲೇಖಿಸಿದ್ದು, ನೇಮಕಾತಿಗೆ ನಿಗದಿಪಡಿಸಿದ್ದ ಕನಿಷ್ಠ ಅರ್ಹತೆ ಇರದ ಅಭ್ಯರ್ಥಿಯೊಬ್ಬರ ನೇಮಕಾತಿಯನ್ನು ಅನೂರ್ಜಿತಗೊಳಿಸಿದೆ.

ಏನಿದು ಪ್ರಕರಣ?: ಕರ್ನಾಟಕ ವಿಶ್ವವಿದ್ಯಾಲಯ 2014ರ ಜನವರಿ 11ರಂದು ಇಂಗ್ಲೀಷ್ ವಿಷಯದ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಅದರನ್ವಯ ಒಟ್ಟು 35 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಹುದ್ದೆಗೆ ಅಗತ್ಯ ಅರ್ಹತೆ ಹೊಂದಿರದಿದ್ದರೂ ಪಿ.ಜಿ. ಶ್ರೀದೇವಿ ಎಂಬುವವರನ್ನು ವಿಶ್ವವಿದ್ಯಾಲಯ ನೇಮಕಗೊಳಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಅರ್ಹತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಮಂಜುನಾಥ ಹಿರೇಮಠ ಎಂಬುವವರು ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು.

‘2009ರ ನಂತರ ಪಿಎಚ್‌ಡಿ ಪದವಿ ಪಡೆದವರು ಕೋರ್ಸ್ ಚಟುವಟಿಕೆ ಜತೆಗೆ ಪೂರ್ಣಗೊಳಿಸಬೇಕಾಗಿತ್ತು. ಆದರೆ ನೇಮಕಗೊಂಡ ಅಭ್ಯರ್ಥಿ ಈ ಅರ್ಹತೆಯನ್ನೇ ಹೊಂದಿಲ್ಲ. ಹೀಗಿದ್ದರೂ ವಿಶ್ವವಿದ್ಯಾಲಯ ನಿಯಮಗಳಿಗೆ ರಿಯಾಯಿತಿ ನೀಡಿ ಅರ್ಹತೆ ಇಲ್ಲದ ಅಭ್ಯರ್ಥಿಯನ್ನು ನೇಮಕ ಮಾಡಿಕೊಂಡಿದೆ’ ಎಂದು ಅರ್ಜಿದಾರರು ದೂರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯಪೀಠ, ‘ನೇಮಕಗೊಂಡಿರುವ ಅಭ್ಯರ್ಥಿ ಯುಜಿಸಿ ಅಥವಾ ಸಿಎಸ್‌ಐಆರ್ ನಡೆಸುವ ನೆಟ್, ಸ್ಲೆಟ್ ಅಥವಾ ಸೆಟ್ ಪರೀಕ್ಷೆ ಪಾಸಾಗಿಲ್ಲ. ಅಭ್ಯರ್ಥಿ ಪಿಎಚ್‌ಡಿ ಪದವಿ ಹೊಂದಿದ್ದರೂ, ಅದು 2009ರ ನಿಯಮಗಳನ್ವಯ ನೀಡಿಲ್ಲ. ಅಲ್ಲದೇ ಶೈಕ್ಷಣಿಕ ಉತ್ಕೃಷ್ಟ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಕಾಲೇಜು ಉಪನ್ಯಾಸಕರು ಮತ್ತು ವಿಶ್ವವಿದ್ಯಾಲಯಗಳ ವಿವಿಧ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು ಮತ್ತು ಕನಿಷ್ಠ ಅರ್ಹತೆಯನ್ನು ಯುಜಿಸಿ ನಿಗದಿಪಡಿಸಿದೆ. ಇದರಲ್ಲಿ ರಿಯಾಯತಿ ನೀಡುವುದರಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ’ ಎಂದು ಅಭಿಪ್ರಾಯಪಟ್ಟಿತು.

‘ನೇಮಕಾತಿಗೆ ಸಂಬಂಧಿಸಿದ ತಜ್ಞರ ಸಮಿತಿ ನಿರ್ಧಾರದಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲವಾದರೂ, ನಿಯಮಾವಳಿಗಳನ್ನು ಸಮರ್ಪಕವಾಗಿ ಪಾಲಿಸದಿರುವುದು ಕಣ್ಣಿಗೆ ಕಾಣುವಂತಿರುವಾಗ ನ್ಯಾಯಾಲಯಗಳು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿತು. ಆ ಮೂಲಕ 2ನೇ ಎದುರುಗಾರ ವಿ.ಜಿ. ಶ್ರೀದೇವಿ ಅವರ ನೇಮಕಾತಿಯನ್ನು ಅನೂರ್ಜಿತಗೊಳಿಸಿದೆ.

ಜತೆಗೆ, ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಮಂಜುನಾಥ ಹಿರೇಮಠ ಅವರನ್ನು ಸೇರಿ ಸಹಾಯಕ ಪ್ರಾಧ್ಯಾಪಕ ಇಂಗ್ಲೀಷ್ (ಪಿಜಿ) ಹುದ್ದೆಗೆ ನೇಮಕಾತಿ ಕೋರಿ ಸಲ್ಲಿಸಿರುವ ಇತರ ಅಭ್ಯರ್ಥಿಗಳ ಅರ್ಜಿಗಳನ್ನು ನಿಯಮಾನುಸಾರ ಪರಿಗಣಿಸಿ, ಆದಷ್ಟು ಶೀಘ್ರ ಅಗತ್ಯ ಆದೇಶ ಹೊರಡಿಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT