ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕತ್ತಲು’ ಅಪಘಾತಕ್ಕೆ ದಾರಿ: ಪೀಣ್ಯದಿಂದ ನಾಗಸಂದ್ರದ ತನಕ ‘ಅವ್ಯವಸ್ಥೆ

ಪೀಣ್ಯದಿಂದ ನಾಗಸಂದ್ರದ ತನಕ ‘ಅವ್ಯವಸ್ಥೆ’: ರಾತ್ರಿಯಲ್ಲಿ ಭಯದ ವಾತಾವರಣ
Last Updated 2 ಡಿಸೆಂಬರ್ 2022, 20:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಸಂಪರ್ಕಕೊಂಡಿ ರಾಷ್ಟ್ರೀಯ ಹೆದ್ದಾರಿ–4 ಅವ್ಯವಸ್ಥೆಯ ಆಗರವಾಗಿದೆ. ವಾಹನ ದಟ್ಟಣೆ ಅಲ್ಲದೇ ರಾತ್ರಿ ವೇಳೆ ಈ ಹೆದ್ದಾರಿಯಲ್ಲಿ ಅವಘಡಗಳು ಸಂಭವಿಸುತ್ತಿವೆ. ಪೀಣ್ಯ ಪೊಲೀಸ್‌ ಠಾಣೆಯಿಂದ ನಾಗಸಂದ್ರದವರೆಗೆ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದೇ ರಾತ್ರಿ ವೇಳೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಾಹನ ಸವಾರರು ಹಾಗೂ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಬೆಳಕಿನ ಅವ್ಯವಸ್ಥೆಯಿಂದ ಪೀಣ್ಯದಿಂದ ನಾಗಸಂದ್ರದ ನಡುವೆ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಸಂಚಾರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಹೆದ್ದಾರಿ ಪ್ರಾಧಿಕಾರವು, ರಸ್ತೆ ಹಾಗೂ ಬೀದಿ ದೀಪಗಳ ನಿರ್ವಹಣೆ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಈ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ಹೆಚ್ಚಿನ ಬೀದಿ ದೀಪಗಳ ಅಳವಡಿಕೆ ಹಾಗೂ ಕೆಟ್ಟಿರುವ ಬೀದಿ ದೀಪಗಳನ್ನು ದುರಸ್ತಿ ಪಡಿಸುವಂತೆಯೂ ಸೂಚಿಸಿದ್ದಾರೆ.

ನಾಲ್ಕೂವರೆ ಕಿ.ಮೀ ಅಂತರದ ಮೇಲ್ಸೇತುವೆ, ಸೇವಾ ರಸ್ತೆ ಹಾಗೂ ಮೇಲ್ಸೇತುವೆ ಕೆಳಭಾಗದ ರಸ್ತೆಯ ಹಲವು ಕಡೆಗಳಲ್ಲಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲ. ಕೆಲವು ಕಡೆ ಬಲ್ಬ್‌ಗಳು ಒಡೆದಿವೆ. ಹಲವು ದಿನಗಳಿಂದ ಈ ಅವ್ಯವಸ್ಥೆಯಿದ್ದರೂ ದುರಸ್ತಿ ನಡೆದಿಲ್ಲ.

ಅತ್ಯಂತ ಜನದಟ್ಟಣೆ ಪ್ರದೇಶವಾದ ಜಾಲಹಳ್ಳಿ ಕ್ರಾಸ್‌ನಲ್ಲಿ ಒಂದೇ ಬಲ್ಬ್‌ಗಳು ಬೆಳಗುತ್ತಿಲ್ಲ. ಸಂಜೆಯಾದರೆ ಈ ಜಂಕ್ಷನ್‌ನಲ್ಲಿ ಕತ್ತಲು ಆವರಿಸುತ್ತಿದೆ. ಮೆಟ್ರೊ, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಬಂದವರು ಜಾಲಹಳ್ಳಿಯಲ್ಲಿ ಇಳಿದರೆ ರಸ್ತೆ ದಾಟಲು ಭಯ ಪಡುತ್ತಿದ್ದಾರೆ. ಬರೀ ವಾಹನಗಳ ಬೆಳಕು ಬಿಟ್ಟರೆ ಬೇರೆ ಯಾವುದೇ ಬೆಳಕಿನ ವ್ಯವಸ್ಥೆಯಿಲ್ಲ. ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ವಿಭಜಕ ನಿರ್ಮಿಸಲಾಗಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ಅಪಘಾತಗಳ ಸರಣಿಯೇ ನಡೆಯತ್ತಿದೆ. ಜಾಲಹಳ್ಳಿ ವೃತ್ತದಲ್ಲಿ ಅಂಡರ್‌ಪಾಸ್‌ ಕಾಮಗಾರಿ ಆರಂಭಕ್ಕೆ ಕಟ್ಟಡ ತೆರವು ಕೆಲಸ ಪ್ರಗತಿಯಲ್ಲಿದ್ದರೂ ವೇಗ ಪಡೆದುಕೊಂಡಿಲ್ಲ. ಇದರಿಂದ ಮತ್ತಷ್ಟು ಸಮಸ್ಯೆ ಹೆಚ್ಚಾಗಿದೆ.

‘ಕೆಲಸ ಮುಗಿಸಿ ರಾತ್ರಿ ಬಂದು ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ ಹಾಗೂ 8ನೇ ಮೈಲಿನಲ್ಲಿ ಇಳಿದರೆ ರಸ್ತೆ ದಾಟಲು ಪರದಾಡುವ ಸ್ಥಿತಿಯಿದೆ. ಎಷ್ಟೋ ಬಾರಿ ವಯಸ್ಕರನ್ನು ನಾವೇ ರಸ್ತೆ ದಾಟಿಸಿದ್ದೇವೆ. ವಾಹನ ದಟ್ಟಣೆ ಪೊಲೀಸರು ನಿಯಂತ್ರಿಸಬಹುದು. ಆದರೆ, ಬೆಳಕಿನ ವ್ಯವಸ್ಥೆ ಮಾಡುವುದು ಹೆದ್ದಾರಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಜವಾಬ್ದಾರಿ’ ಎಂದು ಸಂಚಾರ ಪೊಲೀಸ್‌ ಸಿಬ್ಬಂದಿಯೊಬ್ಬರು ಹೇಳಿದರು.

ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆ ಹಾಗೂ ಹೊರರಾಜ್ಯದಿಂದ ಈ ಮಾರ್ಗದಲ್ಲಿ ನಿತ್ಯ 1.10 ಲಕ್ಷ ವಾಹನಗಳು ಸಾಗುತ್ತವೆ. ರಾತ್ರಿ ವೇಳೆಯಲ್ಲಿ 40 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಆದರೆ, ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದೆ ಸಮಸ್ಯೆಯಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬಸ್‌, ಸರಕು ಸಾಗಿಸುವ ಲಾರಿಗಳು ಕೆಳರಸ್ತೆಯಲ್ಲೇ ಸಾಗುತ್ತಿವೆ. ಇದರಿಂದಲೂ ಪಾದಚಾರಿಗಳು ಹಾಗೂ ಬೈಕ್‌ ಸವಾರರಿಗೆ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಹೇಳಿದರು.

ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್

‘ಬೆಳಕಿನ ವ್ಯವಸ್ಥೆಯಿಲ್ಲದೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಈ ಮಾರ್ಗದಲ್ಲಿ ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಗುರುತಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ನೀಡಲಾಗಿದೆ. ನೋಟಿಸ್‌ ನೀಡಿದರೂ ಬೀದಿ ದೀಪಗಳನ್ನು ದುರಸ್ತಿ ಮಾಡದೆ ಅಪಘಾತ ಸಂಭವಿಸಿದರೆ ಎಫ್‌ಐಆರ್‌ನಲ್ಲಿ ಪ್ರಾಧಿಕಾರದವರ ನಿರ್ಲಕ್ಷ್ಯ ಎಂಬ ಕಾರಣ ದಾಖಲಿಸುತ್ತೇವೆ’ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ. ಅಬ್ದುಲ್‌ ಸಲೀಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದುರಸ್ತಿ: ಭರವಸೆ ಹುಸಿ’

‘ಡಿಸೆಂಬರ್‌ ವೇಳೆಗೆ ಮೇಲ್ಸೇತುವೆ ದುರಸ್ತಿಗೊಳಿಸಿ ಫ್ಲೈಓವರ್‌ನಲ್ಲಿ ಎಲ್ಲ ರೀತಿಯ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದು ಸರ್ಕಾರ ಕಳೆದ ಸದನದಲ್ಲಿ ಭರವಸೆ ನೀಡಿತ್ತು. ಆದರೆ, ಮೇಲ್ಸೇತುವೆ ದುರಸ್ತಿ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ಲಘು ವಾಹನಗಳು ಮಾತ್ರ ಸಂಚರಿಸುತ್ತಿವೆ’ ಎಂದು ಸ್ಥಳೀಯರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT