ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ: ಈಶ್ವರಪ್ಪ ಸಚಿವ ಪದವಿ ತ್ಯಜಿಸಿದ್ದರೆ ನೈತಿಕ ಬಲ ಹೆಚ್ಚುತ್ತಿತ್ತು

ಮುಖ್ಯಮಂತ್ರಿಗೂ ‘ಪರಮಾಧಿಕಾರ’ ಇಲ್ಲ –ಕೆ.ಆರ್. ರಮೇಶ್‌ಕುಮಾರ್, ವೈ.ಎಸ್‌.ವಿ. ದತ್ತ ಪ್ರತಿಪಾದನೆ
Last Updated 6 ಏಪ್ರಿಲ್ 2021, 2:07 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವಿಧಾನದ ಪ್ರಕಾರ, ಮುಖ್ಯಮಂತ್ರಿಯೂ ಸೇರಿದಂತೆ ಯಾರಿಗೂ ಪರಮಾಧಿಕಾರ ಇಲ್ಲ. ಸಂಪುಟ ಸದಸ್ಯರಲ್ಲಿ ಸಮಾನರಲ್ಲಿ ಮೊದಲಿಗನಾಗಿರುವ ಮುಖ್ಯಮಂತ್ರಿಗೆ ಹೆಚ್ಚು ಅಧಿಕಾರ ಇರುವುದು ನಿಜ. ಆದರೆ, ಅದನ್ನು ಪರಮಾಧಿಕಾರ ಎಂಬರ್ಥದಲ್ಲಿ ಬಳಕೆ ಮಾಡಲಾಗದು...’

–ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್‌. ಈಶ್ವರಪ್ಪ ಮಧ್ಯದ ಸಂಘರ್ಷದ ಕುರಿತ ಚರ್ಚೆಯ ಮುನ್ನೆಲೆಯಲ್ಲಿರುವ ‘ಮುಖ್ಯಮಂತ್ರಿಗೆ ಪರಮಾಧಿಕಾರ ಇದೆಯೆ?’ ಎಂಬ ಪ್ರಶ್ನೆ ಕುರಿತು ವಿಧಾನಸಭೆಯ ಮಾಜಿ ಸ್ಪೀಕರ್‌, ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಹಾಗೂ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಪ್ರತಿಪಾದನೆ.

‘ಈಗ ಸೃಷ್ಟಿಯಾಗಿರುವುವುದು ಸಂವಿಧಾನಾತ್ಮಕ ಬಿಕ್ಕಟ್ಟು ಅಲ್ಲ, ಆಡಳಿತಾತ್ಮಕ ಬಿಕ್ಕಟ್ಟು’ ಎಂಬ ಪ್ರತಿಪಾದನೆಯನ್ನು ಒಪ್ಪಿಕೊಂಡ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌, ‘ಈ ಪ್ರಕರಣದಿಂದ ಮುಖ್ಯಮಂತ್ರಿ ದುರ್ಬಲರಾಗಿದ್ದಾರೆ ಎಂಬ ವಾದದಲ್ಲಿ ಹುರುಳಿಲ್ಲ. ಪಕ್ಷದ ವರಿಷ್ಠರು ಆಂತರಿಕವಾಗಿಯೇ ಬಿಕ್ಕಟ್ಟು ಶಮನಗೊಳಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಈಶ್ವರಪ್ಪ ಅವರು ಸಂಪುಟದ ಸದಸ್ಯರಾಗಿದ್ದುಕೊಂಡೇ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು ಸಮಂಜಸವಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಇಳಿದಿದ್ದರೆ ಅವರ ಮಾತುಗಳಿಗೆ ಹೆಚ್ಚಿನ ನೈತಿಕ ಬಲ ಇರುತ್ತಿತ್ತು’ ಎಂದು ಮೂವರೂ ಹೇಳಿದರು.

**
‘ಸಿಎಂ ವಿರುದ್ಧ ನೇರ ದೂರು ನೀಡಿರುವುದು ಸರಿಯಲ್ಲ’
ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಎಂಬುದು ಇಲ್ಲ. ಜವಾಬ್ದಾರಿಗಳು ಮಾತ್ರ ಇವೆ. ಗ್ರಾಮ ಪಂಚಾಯಿತಿ ಸದಸ್ಯನಿಂದ ಮುಖ್ಯಮಂತ್ರಿಯವರೆಗೆ ಯಾರಿಗೂ ಅಧಿಕಾರದ ವ್ಯಾಪ್ತಿ ನಿಗದಿಯಾಗಿಲ್ಲ. ‘ಮುಖ್ಯಮಂತ್ರಿ’ ಎಂದರೆ ಸಂಪುಟದ ಸಮಾನರಲ್ಲಿ ಮೊದಲಿಗರು. ಇಲಾಖೆಗೆ ಸಂಬಂಧಿಸಿದ ಹಣ ಬಿಡುಗಡೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಈಶ್ವರಪ್ಪ ಆಪಾದಿಸಿದ್ದಾರೆ. ಈ ಅಧಿಕಾರ ಖಂಡಿತವಾಗಿಯೂ ಮುಖ್ಯಮಂತ್ರಿಗೆ ಇದೆ. ಆದರೆ, ಅದನ್ನು ಪರಮಾಧಿಕಾರ ಎನ್ನಲಾಗದು.

ಮುಖ್ಯಮಂತ್ರಿಯ ಶಿಫಾರಸಿನಂತೆ ಸಂಪುಟ ಸೇರ್ಪಡೆ, ಖಾತೆ ಹಂಚಿಕೆ ನಡೆಯುತ್ತದೆ. ಈ ರೀತಿ ಮುಖ್ಯಮಂತ್ರಿ ವಿರುದ್ಧ ಸಚಿವರು ನೇರವಾಗಿ ದೂರು ನೀಡುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಯಾದ ನಡವಳಿಕೆ ಅಲ್ಲ. ರಾಮಕೃಷ್ಣ ಹೆಗಡೆ, ಎಸ್.ನಿಜಲಿಂಗಪ್ಪ, ಡಿ. ದೇವರಾಜ ಅರಸು, ವೀರೇಂದ್ರ ಪಾಟೀಲ, ಎಸ್‌.ಬಂಗಾರಪ್ಪ, ಎಂ. ವೀರಪ್ಪ ಮೊಯಿಲಿ ಎಲ್ಲರೂ ಈ ಸ್ಥಿತಿ ಎದುರಿಸಿದ್ದಾರೆ. ಆದರೆ, ನೇರವಾಗಿ ದೂರು ಕೊಟ್ಟ ಉದಾಹರಣೆ ಇಲ್ಲ.

ಈಗ ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ಇರುವುದು ಸಂಪುಟ ಸಭೆಗೆ ಸಂಬಂಧಿಸಿದ ವಿಚಾರ ಅಲ್ಲ. ಇದು ಅನುದಾನ ಬಿಡುಗಡೆಗೆ ಮಾತ್ರ ಸಂಬಂಧಿಸಿದ ವಿಚಾರ. ಇದನ್ನು ಸಂವಿಧಾನಾತ್ಮಕ ಬಿಕ್ಕಟ್ಟು ಎನ್ನುವುದೇ ತಪ್ಪು. ಇದು ಒಂದು ಆಡಳಿತಾತ್ಮಕ ಬಿಕ್ಕಟ್ಟು ಅಷ್ಟೆ.

ಇದು ಈಶ್ವರಪ್ಪ ಅವರದ್ದೇ ನಿರ್ಧಾರವಾ? ಬಾಹ್ಯ ಬೆಂಬಲವೂ ಇರುಬಹುದಾ? ಪಕ್ಷದ ಹೈಕಮಾಂಡ್‌ ಏಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗಳೂ ಇವೆ. ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ದುರ್ಬಲಗೊಂಡಾಗ ಇಂತಹ ಲಕ್ಷಣಗಳು ಗೋಚರಿಸುತ್ತವೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆಯೇ ಅಂತ್ಯಗೊಳ್ಳಬಹುದಾದ ವಿವಾದವೂ ಹೌದು. ಪರಿಸ್ಥಿತಿಯ ಇಕ್ಕಟ್ಟಿನ ಕುರಿತು ಮುಖ್ಯಮಂತ್ರಿ ಮನವರಿಕೆ ಮಾಡಿದ್ದರೆ, ಸಚಿವರೂ ತಮ್ಮ ಆಕ್ಷೇಪವನ್ನು ನೇರವಾಗಿ ದಾಖಲಿಸಿದ್ದರೆ ಮುಗಿಯುತ್ತಿತ್ತು. ಸಾರ್ವಜನಿಕರ ತೆರಿಗೆಯ ಹಣವನ್ನು ಬಳಸುವಾಗ ಎಚ್ಚರ ತಪ್ಪಿದರೂ ಇಂತಹ ಘಟನೆಗಳು ನಡೆಯುತ್ತವೆ.
– ಕೆ.ಆರ್‌. ರಮೇಶ್ ಕುಮಾರ್‌, ಕಾಂಗ್ರೆಸ್‌ ಶಾಸಕ

**
‘ಮಾನಸಿಕ ಅಂತರದಿಂದ ಉದ್ಭವಿಸಿರುವ ಸಮಸ್ಯೆ’
ವ್ಯಕ್ತಿಗತವಾದ ಮಾನಸಿಕ ಅಂತರ ಇದ್ದಾಗ ಪ್ರತಿಯೊಬ್ಬರಲ್ಲೂ ದೋಷ ಕಂಡುಕೊಳ್ಳುವ ಪ್ರಯತ್ನ ಆಗುತ್ತದೆ. ಈಶ್ವರಪ್ಪನವರ ತುಮುಲ ಈ ರೀತಿ ಪ್ರಕಟವಾಗಬಹುದು.

‘ಪರಮಾಧಿಕಾರ’ ಎಂಬ ಪದ ಸಂವಿಧಾನದಲ್ಲಿ ಇಲ್ಲ. ಮಂತ್ರಿ ಸ್ಥಾನ ಮುಖ್ಯಮಂತ್ರಿಯ ಇಚ್ಛೆಯ ಅನುಸಾರ ಇರುತ್ತದೆ. ಸಾರ್ವಜನಿಕ ಹಿತಾಸಕ್ತಿ, ಪಕ್ಷದ ನೀತಿ ಎಲ್ಲವನ್ನೂ ಸಮನ್ವಯ ಮಾಡಬೇಕಾದ ಜವಾಬ್ದಾರಿ ಮುಖ್ಯಮಂತ್ರಿ ಮೇಲಿರುತ್ತದೆ. ಅವುಗಳಿಗೆ ಹೊಂದಾಣಿಕೆ ಸಾಧ್ಯವಾಗುವುದಿಲ್ಲ ಎಂಬುದು ಮನದಟ್ಟಾದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಮುಖ್ಯಮಂತ್ರಿಯ ವಿರುದ್ಧ ಮಂತ್ರಿ ದೂರು ನೀಡಲು ಅವಕಾಶವೇ ಇಲ್ಲ.

ಮುಖ್ಯಮಂತ್ರಿಗೆ ಹೆಚ್ಚು ಅಧಿಕಾರ ಇದೆ ಎಂಬುದನ್ನು ಅಲ್ಲಗಳೆಯಲಾಗದು. ರಾಜ್ಯಪಾಲರು ಮತ್ತು ಸಂಪುಟದ ನಡುವಿನ ಕೊಂಡಿ ಮುಖ್ಯಮಂತ್ರಿ. ನೇರವಾಗಿ ಸಚಿವರು ರಾಜ್ಯಪಾಲರ ಜತೆ ವ್ಯವಹರಿಸಲು ಸಾಧ್ಯವಿಲ್ಲ. ಈಶ್ವರಪ್ಪ ಅವರು ನಿಯಮಗಳನ್ನು ಪ್ರಸ್ತಾಪಿಸಿದಾಗ, ಅದೇ ನಿಯಮಗಳನ್ನು ಅಧ್ಯಯನ ಮಾಡಬೇಕಿತ್ತು.

ಇದು ಕೇವಲ ₹ 65 ಕೋಟಿ ಅನುದಾನ ಬಿಡುಗಡೆಯ ಸಣ್ಣ ವಿಷಯ. ಮುಖ್ಯಮಂತ್ರಿ ದುರ್ಬಲರಲ್ಲ. ಈಶ್ವರಪ್ಪ ಅವರ ಕ್ರಮ ಸಮರ್ಥನೀಯ ಅಲ್ಲ. ಈಶ್ವರಪ್ಪ ಮನಸ್ಸಿನಲ್ಲಿರುವ ಸಣ್ಣ ವಿಚಾರದಿಂದ ದೊಡ್ಡ ಕಂದಕ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಕುಟುಂಬದ ಹಸ್ತಕ್ಷೇಪದ ವಿಚಾರ ನನ್ನ ಅನುಭವಕ್ಕೆ ಬಂದಿಲ್ಲ. ಆ ರೀತಿಯ ಅನುಭವ ಆದವರು ಆರೋಪ ಮಾಡಿರಬಹುದು. ದುರ್ಬಲರು ಎಂದು ಯಾರೂ ಇರುವುದಿಲ್ಲ.

ಎಲ್ಲ ಪಕ್ಷಗಳ ಸರ್ಕಾರಗಳು ಇದ್ದಾಗಲೂ ವಿರೋಧ ಪಕ್ಷದ ಶಾಸಕರಿಗೆ ಅನುದಾನ ಕೊಡುತ್ತಾರೆ. ಕೆಲಸ, ಶಾಸಕರ ಬದ್ಧತೆ ಮತ್ತು ಅನುದಾನದ ಬಳಕೆಯ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಸೈದ್ಧಾಂತಿಕ ನೆಲೆಗಟ್ಟಿನ ಹೊರಗೆ ರಾಜಕೀಯ ನಡೆಯುತ್ತಿರುವುದರಿಂದ ಈ ಸ್ಥಿತಿ ಎದುರಾಗಿದೆ.
-ಆಯನೂರು ಮಂಜುನಾಥ್‌, ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ

**
‘ಹೇಗೆ ಕೆಲಸ ಮಾಡುತ್ತಾರೆಂಬ ಮಾನದಂಡದಿಂದ ನಿರ್ಧಾರ’
ಸಚಿವರನ್ನು ನೇಮಕ ಮಾಡಿದವರು ಮುಖ್ಯಮಂತ್ರಿ. ಕಿತ್ತು ಹಾಕುವ ಅಧಿಕಾರವೂ ಇರುತ್ತದೆ. ಮುಖ್ಯಮಂತ್ರಿಯಾಗಲಿ, ಮಂತ್ರಿಯಾಗಲಿ ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಮಾನದಂಡ ನಿರ್ಧಾರವಾಗುತ್ತದೆ.

ಸಂಪುಟಕ್ಕೆ ಸಾಮೂಹಿಕ ಹೊಣೆಗಾರಿಕೆ ಇರುತ್ತದೆ. ಅದನ್ನು ಹೊರತುಪಡಿಸಿ ಮಂತ್ರಿಯೊಬ್ಬರು ಹೋಗಿ ದೂರು ಕೊಟ್ಟಿದ್ದಾರೆ ಎಂದರೆ ಸಾಮೂಹಿಕ ಹೊಣೆಗಾರಿಕೆಗೆ ಬದ್ಧರಾಗಿಲ್ಲ ಎಂದೇ ಅರ್ಥ. ಒಂದೋ ರಾಜೀನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿಯೇ ಕಿತ್ತು ಹಾಕಬೇಕು.

ಹಿಂದೆ ಶಾಸಕಾಂಗ ಪಕ್ಷದ ಸಭೆಗಳ ಕುರಿತು ಮುಖ್ಯಮಂತ್ರಿಗೂ ಭಯ ಇರುತ್ತಿತ್ತು. ಈಗ ಶಾಸಕಾಂಗ ಪಕ್ಷದ ಸಭೆಗಳಿಗೆ ಶಾಸಕರೇ ಹೋಗುವುದಿಲ್ಲ. ಬಹಿರಂಗವಾಗಿ ಮಾತನಾಡುವುದು, ದೂರು ಕೊಡುವುದೇ ಸರಿ ಎಂದುಕೊಂಡಿದ್ದಾರೆ. ಶಾಸಕರು, ಸಚಿವರ ನಡವಳಿಕೆಗಳ ಕುರಿತು ಲಿಖಿತ ನಿಯಮಗಳಿಲ್ಲ. ಸಂಪ್ರದಾಯ ಆಧರಿಸಿ ನಡೆಯುತ್ತೇವೆ. ಈಶ್ವರಪ್ಪ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಅನುದಾನ ಹಂಚಿಕೆ, ಆಡಳಿತದಲ್ಲಿ ಹಸ್ತಕ್ಷೇಪ ಸೇರಿದಂತೆ ಎಲ್ಲವನ್ನೂ ಸುಲಭವಾಗಿ ಬಗೆಹರಿಸಬಹುದಿತ್ತು. ಆದರೆ, ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಸಂಘರ್ಷಕ್ಕೆ ದೀರ್ಘ ಇತಿಹಾಸವಿದೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಪಕ್ಷ ತ್ಯಜಿಸಿ ಹೋದದ್ದೂ ಇದೆ. ಎಲ್ಲವೂ ಸರಿ ಇಲ್ಲ ಎಂಬ ಸ್ಥಿತಿ ಇದೆ.

ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್‌ ಪ್ರಬಲವಾದಾಗ ಮುಖ್ಯಮಂತ್ರಿ ದುರ್ಬಲ ಆಗುತ್ತಾರೆ. ಹೈಕಮಾಂಡ್‌ ಪ್ರಬಲವಾದರೆ ಮುಖ್ಯಮಂತ್ರಿ ದುರ್ಬಲ ಆಗುತ್ತಾರೆ. ಅಧಿಕಾರಕ್ಕಾಗಿ ಎಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಂಡಾಗ ಇಂತಹ ಸ್ಥಿತಿ ಎದುರಾಗುತ್ತದೆ.
- ವೈ.ಎಸ್‌.ವಿ. ದತ್ತ,ಜೆಡಿಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT