ಶನಿವಾರ, ಏಪ್ರಿಲ್ 17, 2021
30 °C

ಮೀಸಲಾತಿಗಾಗಿ ಬೀದಿಗಿಳಿಯೊಲ್ಲ: ಒಕ್ಕಲಿಗ ಸ್ವಾಮೀಜಿಗಳ ಒಕ್ಕೊರಲ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಮುದಾಯದಲ್ಲಿರುವ ಕಡು ಬಡವರ ಶ್ರೇಯೋಭಿವೃದ್ಧಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕಿದೆ. ಮೀಸಲಾತಿಯ ಅಗತ್ಯವೂ ಹೆಚ್ಚಿದೆ. ಇದಕ್ಕಾಗಿ ಶಾಂತಿ ಮಾರ್ಗ ಅನುಸರಿಸುತ್ತೇವೆ. ಬೀದಿಗಿಳಿದು ಹೋರಾಡುವ ಅಗತ್ಯ ಸದ್ಯಕ್ಕಂತೂ ಇಲ್ಲ’ ಎಂದು ಒಕ್ಕಲಿಗ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.

ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹಾಗೂ ಇತರ ಯತಿಗಳು ಪಾಲ್ಗೊಂಡಿದ್ದರು.

‘ನಮ್ಮದು ಸುಸಂಸ್ಕೃತ ಮತ್ತು ನಾಗರಿಕ ಪ್ರಜ್ಞೆ ಬೆಳೆಸಿಕೊಂಡಿರುವ ಸಮುದಾಯ. ಸಮಾವೇಶ ಆಯೋಜಿಸಿ ಹೋರಾಡುವುದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವುದರಿಂದ ಯಾವ ಪ‍್ರಯೋಜನವೂ ಇಲ್ಲ. ಹಾಗೆ ಮಾಡಿದರೆ ಜನ ನಮ್ಮನ್ನು ನೋಡಿ ನಗುತ್ತಾರೆ. ಅದಕ್ಕೆ ಆಸ್ಪದ ನೀಡಬಾರದು’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

‘ನಿರ್ದಿಷ್ಟ ಗುರಿ ಮತ್ತು ಚೌಕಟ್ಟು ಇಲ್ಲದ ಹೋರಾಟಕ್ಕೆ ಯಶಸ್ಸು ಸಿಗುವುದಿಲ್ಲ. ನಮ್ಮ ಸಮಾಜವು ಸಂವಿಧಾನ ತಜ್ಞರು, ನ್ಯಾಯಮೂರ್ತಿಗಳು ಹಾಗೂ ಉತ್ತಮ ಆಡಳಿತಗಾರರನ್ನು ಸೃಷ್ಟಿ ಮಾಡಿದೆ. ಅವರನ್ನೆಲ್ಲಾ ಮುಂದಿಟ್ಟುಕೊಂಡು ಸೂಕ್ತ ರೂಪುರೇಷೆ ಸಿದ್ಧಪಡಿಸಬೇಕು. ಹೀಗಾಗಿಯೇ ಅವರ ಜೊತೆ ಮೊದಲು ಸಭೆ ನಡೆಸಿ ಚರ್ಚಿಸಿದ್ದೇವೆ. ಪ್ರಸ್ತುತ ಸರ್ಕಾರದಲ್ಲಿ ಜವಾಬ್ದಾರಿ ಹೊತ್ತಿರುವ ಮನೆ ಮಕ್ಕಳನ್ನು ಕರೆಸಿ ನಮ್ಮ ಬೇಡಿಕೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದರು.

‘ನಮ್ಮ ಸಮುದಾಯದ ಅನೇಕರು ಇಂದು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ನಗರವಾಸಿಗಳು ಎಂಬ ಕಾರಣಕ್ಕೆ ಅವರನ್ನು ಒಬಿಸಿಯಿಂದ ಹೊರಗಿಟ್ಟಿರುವುದು ಸರಿಯಲ್ಲ. ಪಕ್ಕದ ಮನೆಯವರಿಗೆ (ವೀರಶೈವ) ಕೊಟ್ಟಿದ್ದನ್ನು ನಮಗೇಕೇ ಕೊಡೊಲ್ಲ’ ಎಂದು ಪ್ರಶ್ನಿಸಿದರು.

ನಂಜಾವಧೂತ ಸ್ವಾಮೀಜಿ ‘ಒಕ್ಕಲಿಗರು ಜಡತ್ವ ಬಿಡಬೇಕು. ಒಂದಷ್ಟು ವಿಚಾರಗಳ ಕುರಿತು ಪ್ರಬುದ್ಧರಾಗಿ ಮಾತನಾಡುವ ಗುಣ ಮೈಗೂಡಿಸಿಕೊಳ್ಳಬೇಕು’ ಎಂದರು.

ದೇವೇಗೌಡರಿಗೆ ‘ಭಾರತ ರತ್ನ’ಕ್ಕೆ ಆಗ್ರಹ

‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ದೇಶಕ್ಕೆ ಹಲವು ಕೊಡುಗೆಗಳನ್ನು ಕೊಟ್ಟಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ‘ಭಾರತ ರತ್ನ’ ನೀಡಬೇಕು’ ಎಂದು ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಇದಕ್ಕೆ ಧ್ವನಿಗೂಡಿಸಿದರು.

ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಯಲಿ

‘ಒಕ್ಕಲಿಗರ ಸಂಘಕ್ಕೆ ಆದಷ್ಟು ಬೇಗ ಚುನಾವಣೆ ನಡೆಯಲಿ’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

‘ಶಂಕರೇಗೌಡ ಅವರು ಆಡಳಿತಾಧಿಕಾರಿಯಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರ ಅಧಿಕಾರಾವಧಿ ಮುಗಿದಿದೆ. ಹೀಗಿದ್ದರೂ ಅವರನ್ನು ಈ ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಶೀಘ್ರವೇ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ಅವರಿಗೆ ಮನವಿ ಮಾಡಲಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು