ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌಲ್‌ ಅಕ್ರಮ ಆಸ್ತಿಗೂ, ನನಗೂ ಸಂಬಂಧವಿಲ್ಲ: ‌ಉದ್ಯಮಿ ಹುಸ್ಕೂರು ಆನಂದ್‌

Last Updated 6 ಆಗಸ್ಟ್ 2022, 19:34 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮ್ರಿತ್‌ ಪೌಲ್ ತಾಲ್ಲೂಕಿನಲ್ಲಿ ಖರೀದಿಸಿರುವ ಜಮೀನಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತಮಗೆ ನೋಟಿಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ತನಿಖೆ ವೇಳೆ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಪೌಲ್‌ ಅಕ್ರಮ ಆಸ್ತಿಗೂ, ತಮಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ವಿನಾಕಾರಣ ನನ್ನ ಹೆಸರನ್ನು ಸಿಲುಕಿಸಲಾಗುತ್ತಿದೆ’ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ ಹುಸ್ಕೂರು ಆನಂದ್‌ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಎಸ್‌ಐ ದೊಡ್ಡ ಹಗರಣವಾಗಿದೆ. ಇದನ್ನು ಯಾರೇ ಮಾಡಿದ್ದರೂ ತಪ್ಪು. ಹಗರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ಅಮ್ರಿತ್‌ ಪೌಲ್ ನನ್ನ ಸ್ನೇಹಿತರಾಗಿದ್ದಾರೆ. ಅವರ ಫೋನ್‌ ಕಾಲ್‌ ಆಧಾರದ ಮೇಲೆ ತನಿಖೆಗೆ ಬರುವಂತೆ ನನಗೆ ನೋಟಿಸ್‌ ನೀಡಲಾಗಿತ್ತು’ ಎಂದು
ತಿಳಿಸಿದರು.

‘ಎರಡು ದಿನಗಳ ಕಾಲ ಹೋಗಿ ಅವರು ಕೇಳಿದ ಎಲ್ಲಾ ದಾಖಲೆ ನೀಡಿದಾಗ ತಮ್ಮದೇನೂ ತಪ್ಪಿಲ್ಲ ಎಂದು ಕಳುಹಿಸಿದ್ದಾರೆ. ಮತ್ತೆ ಕರೆದರೂ ಹೋಗಿ ತನಿಖೆಗೆ ಸಹಕಾರ ನೀಡುತ್ತೇನೆ’ ಎಂದು ತಿಳಿಸಿದರು.

‘ಅಕ್ರಮವಾಗಿ ಹುಸ್ಕೂರು ಬಳಿ 60 ಎಕರೆ ಮತ್ತು ದೇವನಹಳ್ಳಿ ಬಳಿ 20 ಎಕರೆ ಜಮೀನು ಹೊಂದಿದ್ದಾರೆ ಎಂದು ನನ್ನ ಮೇಲೆ ಆರೋಪಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. 2002ರಲ್ಲಿ ಬ್ಯಾಂಕ್‌ನಲ್ಲಿ ಈ ಜಮೀನು ಅಡವಿಟ್ಟು ₹ 20 ಕೋಟಿ ಸಾಲ ಪಡೆದಿದ್ದೆ. 1980ರಲ್ಲಿಯೇ ನಾನು ಜಮೀನು ಖರೀದಿ ಮಾಡಿದ್ದೇನೆ. ಅದು ಬೇನಾಮಿ ಹೇಗೆ ಆಗುತ್ತದೆ. ನನಗೆ ಬೇನಾಮಿ ಆಸ್ತಿ ಮಾಡುವ ಅಗತ್ಯವಿಲ್ಲ’ ಎಂದು
ಹೇಳಿದರು.

‘2016ರಲ್ಲಿ ನನಗೆ ಪೌಲ್‌ ಪರಿಚಯವಾಯಿತು. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜಮೀನು ಖರೀದಿಸಲು ಬಂದ ಅವರಿಗೆ ಪಿಂಡಕೂರು ತಿಮ್ಮನಹಳ್ಳಿ ಬಳಿ 3.14 ಎಕರೆ ಜಮೀನು ಕೊಡಿಸಿದ್ದೇನೆ’ ಎಂದರು.

‘100 ಎಕರೆ ಜಮೀನುದಾರ ಆಗಿರುವ ನಾನು ಕಾಲಕಾಲಕ್ಕೆ ವರಮಾನ ತೆರಿಗೆಯನ್ನೂ ಪಾವತಿಸುತ್ತಿದ್ದೇನೆ. ಎಲ್ಲಾ ಲೆಕ್ಕಪತ್ರ, ದಾಖಲೆಗಳು ಪಾರದರ್ಶಕವಾಗಿವೆ. ನನ್ನ ಮಗಳ ಮೇಲೆ ಬಂದಿರುವ ಆರೋಪವೂ ನಿರಾಧಾರವಾದುದು. ಅವಳ ಹೆಸರಿನಲ್ಲಿರುವ ದಾಖಲೆಗಳು ಸಹ ಪಾರದರ್ಶಕವಾಗಿವೆ’
ಎಂದರು.

‘ಪೌಲ್‌ ಆರೋಪಿ ಸ್ಥಾನದಲ್ಲಿದ್ದಾರೆ. ನಾನು ಅವರ ಜೊತೆ ಸಂಪರ್ಕದಲ್ಲಿದ್ದೆ ಎನ್ನುವ ಕಾರಣಕ್ಕೆ ನನಗೆ ಆಗದೇ ಇರುವವರು ವಿನಾಕಾರಣ ದೂರು ನೀಡಿ ನನ್ನನ್ನು ಸಿಲುಕಿಸಿದ್ದಾರೆ. ಹಗರಣದಲ್ಲಿ ಸಿಲುಕಿರುವ ಅವರ ಅಕ್ರಮ ಆಸ್ತಿ ಕುರಿತು ನ್ಯಾಯಾಲಯ ತೀರ್ಮಾನಿಸುತ್ತದೆ’ ಎಂದು ತಿಳಿಸಿದರು.

ಮುಖಂಡರಾದ ಪುಟ್ಟಬಸವರಾಜ್, ಶಿವಣ್ಣ, ಮುನಿಹನುಮಯ್ಯ, ಚೆನ್ನರಾಮಯ್ಯ, ಸಿದ್ಧಗಂಗಪ್ಪ, ರಾಮಕೃಷ್ಣಪ್ಪ, ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT