ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗಟೆ, ಗಂಟೆ ಸದ್ದು: ನೋಟಿಸ್‌ ವಾಪಸ್

Last Updated 16 ಫೆಬ್ರುವರಿ 2022, 20:34 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವಸ್ಥಾನಗಳಲ್ಲಿ ಜಾಗಟೆ, ಗಂಟೆ, ಶಂಖ ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣಕ್ಕೆ ನೋಟಿಸ್‌ ನೀಡಲಾಗಿತ್ತು. ಈ ಸುತ್ತೋಲೆಯನ್ನು ಧಾರ್ಮಿಕ ದತ್ತಿ ಇಲಾಖೆ ಹಿಂಪಡೆದಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ಬಿಜೆಪಿಯ ಸಿ.ಟಿ. ರವಿ ಮತ್ತು ಎಲ್‌.ಎ.ರವಿಸುಬ್ರಹ್ಮಣ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ‘ಈಗಾಗಲೇ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ’ ಎಂದು ಸ್ಪಷ್ಟಪಡಿಸಿದರು.

ನಿಗದಿತ ಡೆಸಿಬಲ್‌ ಶಬ್ದಕ್ಕಿಂತ ಹೆಚ್ಚಿನ ಶಬ್ದ ಉಂಟು ಮಾಡುತ್ತಿದ್ದ ಕಾರಣಕ್ಕೆ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ನೋಟಿಸ್‌ ನೀಡಲಾಗಿತ್ತು. ಯಾವುದೇ ಒಂದು ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನೋಟಿಸ್ ನೀಡಿರಲಿಲ್ಲ. ಇದರಿಂದ ಕೆಲವು ಗೊಂದಲ ಉಂಟಾಗಿದ್ದರಿಂದ ಈಗ ಆದೇಶವನ್ನು ಹಿಂಪಡೆಯಲಾಗಿದೆ’ ಎಂದರು.

ಸಿ.ಟಿ.ರವಿ ಮಾತನಾಡಿ, ‘ಸಾವಿರಾರು ವರ್ಷಗಳಿಂದ ದೇವಸ್ಥಾನ ಮತ್ತು ಮನೆಗಳಲ್ಲಿ ಪೂಜೆ, ಪುನಸ್ಕಾರ ಮಾಡುವಾಗ ಶಂಖ ಊದುವುದು, ಗಂಟೆ ಬಾರಿಸುವುದು, ಜಾಗಟೆ ಬಾರಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಸಾವಿರಾರು ವರ್ಷಗಳಿಂದಲೂ ಈ ಬಗ್ಗೆ ಯಾರೂ ಕೂಡ ತಕರಾರು ತೆಗೆದಿರಲಿಲ್ಲ. ಈಗ ಏಕಾಏಕಿ ಆಕ್ಷೇಪ ಇದೆ. ಇದರ ಹಿಂದೆ ಯಾವುದಾದರೂ ಪಿತೂರಿ ಇದೆಯೇ’ ಎಂದು ಪ್ರಶ್ನಿಸಿದರು.

ರವಿಸುಬ್ರಹ್ಮಣ್ಯ, ‘ನಾನು 40 ವರ್ಷಗಳಿಂದ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ. ಶಬ್ದ ಮಾಲಿನ್ಯದ ಕಾರಣಕ್ಕೆ ಈಗ ದೇವಸ್ಥಾನಕ್ಕೆ ನೋಟಿಸ್‌ ನೀಡಲಾಗಿದೆ. ಮಾಲಿನ್ಯ ಉಂಟಾಗುತ್ತಿದೆ ಎಂದು ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳು ದೂರು ನೀಡಿಲ್ಲ. ಇದರಲ್ಲಿ ಪಿತೂರಿ ಇದೆ’ ಎಂದು ಹೇಳಿದರು.

ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ, ‘ರಾಜ್ಯದಲ್ಲಿ ಸರ್ಕಾರ ನಡೆಸುವವರು ನೀವೇ. ನೋಟಿಸ್‌ ನೀಡಿದ್ದು ನಿಮ್ಮ ಸರ್ಕಾರವೇ. ಇದರಲ್ಲಿ ಏನು ಪಿತೂರಿ’ ಎಂದು ವ್ಯಂಗ್ಯವಾಗಿ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT