ನವೆಂಬರ್‌ನಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗ: ಅಶ್ವತ್ಥನಾರಾಯಣ
ಬೆಂಗಳೂರು: ನವೆಂಬರ್ 17 ರಿಂದ 19ರವರೆಗೆ 2021ನೇ ಸಾಲಿನ ‘ಬೆಂಗಳೂರು ತಂತ್ರಜ್ಞಾನ ಶೃಂಗ’ ವರ್ಚುವಲ್ ರೂಪದಲ್ಲಿ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರಕಟಿಸಿದರು.
ತಂತ್ರಜ್ಞಾನ ಶೃಂಗದ ಸಿದ್ಧತೆ ಕುರಿತು ಸೋಮವಾರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ‘ಈ ಬಾರಿ ‘ಡ್ರೈವ್ ಇನ್ ದಿ ನೆಕ್ಸ್ಟ್’ ಎಂಬ ಘೋಷ ವಾಕ್ಯದಡಿ ಸಮ್ಮೇಳನ ನಡೆಯಲಿದೆ. ಕೋವಿಡ್ ಕಾರಣದಿಂದ ವರ್ಚುವಲ್, ಭೌತಿಕ ವೇದಿಕೆ ಒಳಗೊಂಡಂತೆ ಹೈಬ್ರಿಡ್ ಪದ್ಧತಿಯಲ್ಲಿ ಸಮ್ಮೇಳನ ನಡೆಯಲಿದೆ’ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ವರ್ಚುವಲ್ ಆಗಿ ಸಮ್ಮೇಳನ ಉದ್ಘಾಟನೆಗೆ ಆಹ್ವಾನಿಸುವ ಚಿಂತನೆ ನಡೆದಿದೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನೂ ಸಮ್ಮೇಳನಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರದ ಮುಂಚೂಣಿ ಕಂಪನಿಗಳ ಮುಖ್ಯಸ್ಥರಿಗೂ ಆಹ್ವಾನ ನೀಡಲಾಗುವುದು ಎಂದರು.
ಎರಡನೇ ಹಂತದ ನಗರಗಳಿಗೆ ಆದ್ಯತೆ: ‘ಬ್ರ್ಯಾಂಡ್ ಬೆಂಗಳೂರು’ ಮಾದರಿಯಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ನಗರಗಳಲ್ಲೂ ತಂತ್ರಜ್ಞಾನ ಶೃಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಈ ನಗರಗಳಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಡಾ.ಹರ್ಷವರ್ಧನ್, ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ಯ ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಜೈವಿಕ ತಂತ್ರಜ್ಣಾನ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕರೂ ಆದ ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್ ಪ್ರಕಾಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಸಭೆಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.