ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡವೆಂದರೆ ಅಧಿಕಾರಿಗಳಿಗೆ ಅಸಡ್ಡೆ’- ಟಿ. ತಿಮ್ಮೇಗೌಡ ಬೇಸರ

ಕನ್ನಡ ನುಡಿ ಸಮ್ಮೇಳನದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ ಬೇಸರ
Last Updated 4 ಡಿಸೆಂಬರ್ 2022, 18:44 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರವು ಕನ್ನಡ ಆಡಳಿತ ಭಾಷೆಯೆಂದು ಆದೇಶ ಹೊರಡಿಸಿದ್ದರೂ ಈಗಲೂ ವಿಧಾನಸೌಧ ಹಾಗೂ ವಿಕಾಸಸೌಧದಿಂದ ಹೊರಡುವ ಆದೇಶಗಳು ಆಂಗ್ಲ ಭಾಷೆಯಲ್ಲಿ ಇರುತ್ತವೆ. ಉನ್ನತ ಅಧಿಕಾರಿಗಳು ಕನ್ನಡದ ಬಗ್ಗೆ ತೋರುತ್ತಿರುವ ಅಸಡ್ಡೆ ಇದನ್ನು ತೋರಿಸುತ್ತದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ ಬೇಸರ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಕನ್ನಡ ನುಡಿ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ‘ಬ್ರಿಟಿಷರ ಆಡಳಿತದಿಂದ ಮುಕ್ತಿಗೊಂಡು ಏಳು ದಶಕ ಕಳೆದರೂ ಸರ್ಕಾರಿ ಕಚೇರಿ ಹಾಗೂ ನ್ಯಾಯಾಲಯಗಳಲ್ಲಿ ಆಂಗ್ಲ ಭಾಷೆಯ ಮೂಲಕ ವ್ಯವಹರಿಸುತ್ತಿರುವುದು ಶೋಚನೀಯ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ರಾಜ್ಯ ಸರ್ಕಾರದ ಆದೇಶ ಇನ್ನೂ ಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಬೆಂಗಳೂರಿನಲ್ಲಿ ನೆಲೆಸಿರುವ ಹೊರರಾಜ್ಯದವರು ಕನ್ನಡದಲ್ಲಿ ಮಾತನಾಡಲು, ಕಲಿಯಲು ಆಸಕ್ತಿ ತೋರುತ್ತಿಲ್ಲ’ ಎಂದು ಹೇಳಿದರು.

‘ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಬೋಧನೆಯನ್ನು ಕಡ್ಡಾಯ ಮಾಡಬೇಕು. ಶಾಲಾ–ಕಾಲೇಜುಗಳಲ್ಲಿ ಕನ್ನಡ ಮಾತನಾಡುವಂತೆ ಪ್ರೋತ್ಸಾಹಿಸಬೇಕು. ವಿವಿಧ ಸರ್ಕಾರಿ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಬೇಕು. ಶಿಕ್ಷಣ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಇಂಗ್ಲಿಷಿನ ಅವಶ್ಯಕತೆ ಇದ್ದಾಗ ಮಾತ್ರ ಬಳಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕನ್ನಡ ಬಳಸಬೇಕು’ ಎಂದರು.

ಜಾನಪದ ವಿದ್ವಾಂಸಗೊ.ರು. ಚನ್ನಬಸಪ್ಪ, ‘ಎರಡು ಸಾವಿರ ವರ್ಷಗಳ ಪರಂಪರೆ ಇರುವ ಕನ್ನಡ ಭಾಷೆಯ ಮೇಲೆ 400 ವರ್ಷಗಳ ಹಿಂದೆ ಬಂದ ಆಂಗ್ಲ ಭಾಷೆ ಸವಾರಿ ಮಾಡುತ್ತಿದೆ. ಈಗ ಹಿಂದಿ ಹೇರಿಕೆ ಪ್ರಾರಂಭವಾಗಿದೆ. ಇದು ಆಘಾತಕಾರಿ ಬೆಳವಣಿಗೆ. ಕನ್ನಡದೊಂದಿಗೆ ಬೇರೆ ಭಾಷೆಗಳನ್ನು ಮಿಶ್ರಗೊಳಿಸಿ, ಭಾಷೆಯನ್ನು ವಿಕೃತಗೊಳಿಸಬಾರದು. ಭಾಷೆ ಉಳಿಸಿ, ಬೆಳೆಸುವುದು ಸರ್ಕಾರದ ಕರ್ತವ್ಯ ಆಗಬೇಕು. ಮಾತೃಭಾಷೆಯ ವಿಚಾರವಾಗಿ ಕನ್ನಡಿಗರು ಧ್ವನಿಯೆತ್ತಬೇಕು’ ಎಂದು ಹೇಳಿದರು.

‘ರಾಜಕಾರಣಿಗಳಿಂದ ಸಂವಿಧಾನಕ್ಕೆ ಗಾಯ’

‘ಸ್ವಾತಂತ್ರ್ಯದ ಬಳಿಕ ಗಡಿಗಳನ್ನು ಪುನರ್‌ ವಿಂಗಡಣೆ ಮಾಡಲಾಗಿದೆ. ಆದರೂ ಮಹಾರಾಷ್ಟ್ರದವರು ಗಲಾಟೆ ಮಾಡುತ್ತಿದ್ದಾರೆ. ಇಂತಹ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಪರಿಹರಿಸಬೇಕು. ಆದರೆ, ಕೇಂದ್ರ ಸರ್ಕಾರ ಉದಾಸೀನತೆ ತೋರುತ್ತಿದೆ. ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಪ್ರಕರಣ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೂ ಮರಾಠ ಮುಖಂಡರು ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದುಗೊ.ರು. ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.

‘ಸ್ವತಂತ್ರ ಭಾರತ ಅಂಗೀಕರಿಸಿದ ಸಂವಿಧಾನವು ವಿವಾದ ಹುಟ್ಟುಹಾಕಲು ಹೇಳಿಲ್ಲ. ನಮ್ಮ ಸಂವಿಧಾನವನ್ನು ರಾಜಕೀಯ ವ್ಯಕ್ತಿಗಳು ಗಾಯಗೊಳಿಸುತ್ತಿದ್ದಾರೆ.ಜಾಗತಿಕವಾಗಿ ಭಾರತ ಪ್ರತಿಷ್ಠಿತ ಸ್ಥಾನ ಪಡೆಯುತ್ತಿರುವ ವೇಳೆ, ಗಡಿ ಬಗ್ಗೆ ಗಲಾಟೆ ಮಾಡುತ್ತಿರುವುದು ವಿಷಾದನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT