ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ; ಸದನ ಸಮಿತಿ ರಚನೆಗೆ ಜೆಡಿಎಸ್‌ ಪಟ್ಟು

47 ನರ್ಸಿಂಗ್‌, 45 ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜುಗಳಿಗೆ ಅನುಮತಿ | ಭ್ರಷ್ಟಾಚಾರ ಆರೋಪ; ತನಿಖೆಗೆ ಒತ್ತಾಯಿಸಿ ಪರಿಷತ್‌ನಲ್ಲಿ ಧರಣಿ
Last Updated 18 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರವು 2020–21ನೇ ಸಾಲಿನಲ್ಲಿ 47 ನರ್ಸಿಂಗ್‌ ಕಾಲೇಜುಗಳು ಹಾಗೂ 45 ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜುಗಳಿಗೆ ಅನುಮತಿ ನೀಡಿದ್ದು, ಇದರಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಜೆಡಿಎಸ್‌ ಆರೋಪಿಸಿದೆ. ಈ ಕುರಿತ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ಪಕ್ಷದ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಗುರುವಾರ ಪಟ್ಟು ಹಿಡಿದರು.

ಸದನ ಸಮಿತಿ ರಚನೆಗೆ ಸರ್ಕಾರ ಒಪ್ಪದ ಕಾರಣ ಜೆಡಿಎಸ್‌ ಸದಸ್ಯರು ಸಭಾಪತಿಯವರ ಪೀಠದ ಎದುರು ಧರಣಿ ನಡೆಸಿದರು. ಮನವೊಲಿಕೆ ಬಳಿಕವೂ ಸದಸ್ಯರು ಧರಣಿ ಹಿಂಪಡೆಯದ ಕಾರಣ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನವನ್ನು ಎರಡು ಬಾರಿ ಮುಂದೂಡಬೇಕಾಯಿತು.

’ಈ ಹೊಸ ಕಾಲೇಜುಗಳೂ ಸೇರಿ, ರಾಜ್ಯದಲ್ಲಿರುವ 650 ನರ್ಸಿಂಗ್‌ ಕಾಲೇಜುಗಳ ಹಾಗೂ 65 ವೈದ್ಯಕೀಯ ಕಾಲೇಜುಗಳ ಮೂಲಸೌಕರ್ಯ ಪರಿಶೀಲನೆಗೆ ನಾಲ್ಕು ಕಾರ್ಯಪಡೆಗಳನ್ನು ರಚಿಸಲಾಗುವುದು. ಈ ಉನ್ನತ ಮಟ್ಟದ ಸಮಿತಿಗಳು 3 ತಿಂಗಳ ಒಳಗೆ ವರದಿಯನ್ನು ನೀಡಲಿವೆ. ಸದನದಲ್ಲಿ ಮಂಡಿಸುವ ವರದಿ ಸದಸ್ಯರಿಗೆ ತೃಪ್ತಿ ತರದಿದ್ದರೆ ಮುಖ್ಯಮಂತ್ರಿ ಜೊತೆ ಸಮಾಲೋಚಿಸಿ ಸದನ ಸಮಿತಿ ರಚಿಸಲು ಸಿದ್ಧ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ಇದರಿಂದ ತೃಪ್ತರಾಗದ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ‘ಅಧಿಕಾರಿಗಳು ನಡೆಸುವ ತನಿಖೆಯಲ್ಲಿ ಭರವಸೆ ಇಲ್ಲ. ಭೌತಿಕವಾಗಿ ಕಾಲೇಜುಗಳೇ ಇಲ್ಲ. ಆದರೂ ವಿದ್ಯಾರ್ಥಿಗಳು ನರ್ಸಿಂಗ್‌ ಪ್ರಮಾಣಪತ್ರ ಪಡೆಯುವ ಸ್ಥಿತಿ ಇದೆ. ಇದು ರಾಜ್ಯದ ಜನರ ಜೀವದ ಪ್ರಶ್ನೆ. ಸದನ ಸಮಿತಿಯನ್ನೇ ರಚಿಸಬೇಕು’ ಎಂದು ಒತ್ತಾಯಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗದ್ದಲ ನಿಲ್ಲದ ಕಾರಣ ಸಭಾಪತಿಯವರು ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಆಡಳಿತ ಪಕ್ಷದ ಸದಸ್ಯ: ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದು ಆಡಳಿತ ಪಕ್ಷದ ಸದಸ್ಯ ಎನ್‌.ರವಿಕುಮಾರ್‌. ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು ಈ ಕುರಿತ ಸಮಗ್ರ ತನಿಖೆಗೆ ಒತ್ತಾಯಿಸಿ ನಿಯಮ 72ರ ಅಡಿ ಸಚಿವ ಸುಧಾಕರ್‌ ಗಮನ ಸೆಳೆದರು.

ಇದಕ್ಕುತ್ತರಿಸಿದ ಸುಧಾಕರ್‌, ‘ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು2019ರ ನ. 21ರಂದು ಅರ್ಜಿ ಆಹ್ವಾನಿಸಿದಾಗ ಬಿಎಸ್ಸಿ (ನರ್ಸಿಂಗ್‌) ಕಾಲೇಜು ಸ್ಥಾಪನೆಗೆ 101 ಹಾಗೂ ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜು ಸ್ಥಾಪನೆಗೆ 70 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಭಾರತೀಯ ಶುಶ್ರೂಷಾ ಪರಿಷತ್ತಿನ ಮಾರ್ಗಸೂಚಿಗಳ ಅನ್ವಯ ಈ ಅರ್ಜಿಗಳನ್ನು ಸೆನೆಟ್‌ ಮತ್ತು ಸಿಂಡಿಕೇಟ್‌ ಸದಸ್ಯರ ಉಪ ಸಮಿತಿ ಪರಿಶೀಲಿಸಿದೆ. ಸೆನೆಟ್‌, ಅಕಾಡೆಮಿಕ್‌ ಕೌನ್ಸಿಲ್‌ ಹಾಗೂ ವಿಷಯ ತಜ್ಞರ ತಂಡ ಈ ಸಂಸ್ಥೆಗಳಿಗೆ ಖುದ್ದಾಗಿ ತಪಾಸಣೆ ನಡೆಸಿದೆ. 60 ನರ್ಸಿಂಗ್‌ ಕಾಲೇಜು ಹಾಗೂ 52 ಅಲೈಡ್‌ ಹೆಲ್ತ್‌ ಸೈನ್ಸಸ್ ಸಂಸ್ಥೆಗಳ ಅರ್ಜಿಗಳನ್ನು ಶಿಫಾರಸು ಮಾಡಿದೆ’ ಎಂದು ಮಾಹಿತಿ ನೀಡಿದರು.

‘ಈ ಶಿಫಾರಸುಗಳನ್ನು ವಿಶ್ವವಿದ್ಯಾಲಯದ ಡೀನ್‌ ಪರಿಶೀಲಿಸಿದ್ದು, ಅಕಾಡೆಮಿಕ್‌ ಕೌನ್ಸಿಲ್‌ ಸಭೆಯಲ್ಲೂ ಇವುಗಳನ್ನು ಮಂಡಿಸಲಾಗಿದೆ. ಮೂವರು ಸಿಂಡಿಕೇಟ್‌ ಸದಸ್ಯರ ತಂಡ ದಾಖಲಾತಿಗಳನ್ನು ಪರಿಶೀಲಿಸಿ ಅನುಮೋದನೆಗೆ ಶಿಫಾರಸು ಮಾಡಿದೆ. ಸಿಂಡಿಕೇಟ್‌ ಸದಸ್ಯರೂ ಕಾಲೇಜುಗಳನ್ನು ಖುದ್ದಾಗಿ ತಪಾಸಣೆ ನಡೆಸಿದ್ದಾರೆ. ಸಿಂಡಿಕೇಟ್‌ ಸಭೆಯ ಅನುಮೋದನೆಯ ಬಳಿಕವೇ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿಯೇ ಈ ಕಾಲೇಜುಗಳಿಗೆ ಅನುಮತಿ ನೀಡಲು ಶಿಫಾರಸು ಮಾಡಿದೆ’ ಎಂದು ಸಮರ್ಥಿಸಿಕೊಂಡರು.

ಈ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರವಿಕುಮಾರ್‌, ‘ಕೇರಳದಿಂದ ಬರುವ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಪರೀಕ್ಷೆ ಬರೆಯುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಕುಂದಾಪುರದಲ್ಲಿ ಒಂದೇ ಕಟ್ಟಡದಲ್ಲಿ ಎರಡು ಕಾಲೇಜುಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಈ ರೀತಿ ನರ್ಸಿಂಗ್‌ ಕಾಲೇಜುಗಳನ್ನು ನಡೆಸಿದರೆ ಭವಿಷ್ಯದಲ್ಲಿ ರೋಗಿಗಳು ಭಾರಿ ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು. ಅಕ್ರಮದ ತನಿಖೆಗೆ ಆಡಳಿತ ಪಕ್ಷದ ತೇಜಸ್ವಿನಿ ಗೌಡ ಅವರೂ ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಅಪ್ಪಾಜಿ ಗೌಡ ನರ್ಸಿಂಗ್‌ ಕಾಲೇಜುಗಳ ವಸ್ತುಸ್ಥಿತಿ ಬಿಚ್ಚಿಟ್ಟರು.

ಚರ್ಚೆ ಬಹಿಷ್ಕರಿಸಿದ ಕಾಂಗ್ರೆಸ್‌

ಸಚಿವ ಸುಧಾಕರ್‌ ಅವರು ಉತ್ತರ ನೀಡಿದ್ದರಿಂದ ಕಾಂಗ್ರೆಸ್‌ ಸದಸ್ಯರು ನರ್ಸಿಂಗ್‌ ಕಾಲೇಜುಗಳ ಕುರಿತ ಚರ್ಚೆಯಿಂದ ದೂರ ಉಳಿದರು. ‘ನೈತಿಕ ಕಾರಣಕ್ಕೆ ನಾವು ಈ ಕುರಿತ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಜೆಡಿಎಸ್‌ ಹೋರಾಟಕ್ಕೆ ನಮ್ಮ ಬೆಂಬಲ ಇದೆ’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಹಾಗೂ ಸದಸ್ಯ ಬಿ.ಕೆ.ಹರಿಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT