ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್‌: ಸಿಗದ ಆನ್‌ಲೈನ್‌ ಅರ್ಜಿ, ‘ಸರ್ಕಾರಿ ಕೋಟ’ ವಿದ್ಯಾರ್ಥಿಗಳಿಗೆ ಅನ್ಯಾಯ!

Last Updated 9 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯು ನರ್ಸಿಂಗ್‌ ಕೋರ್ಸ್‌ಗ ಳಿಗಾಗಿ ‘ಸರ್ಕಾರಿ ಕೋಟಾ’ದಡಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆದರೆ, ಅರ್ಜಿ ಸಲ್ಲಿಕೆಗೆ ಎರಡೇ ದಿನಗಳು ಬಾಕಿ ಉಳಿದಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (kea.kar.nic.in) ಆನ್‌ಲೈನ್‌ ಅರ್ಜಿ ನಮೂನೆ, ಮಾಹಿತಿ ಪತ್ರ ಸೇರಿ ಯಾವುದೂ ಲಭ್ಯವಿಲ್ಲ!

ಇದರಿಂದ ನರ್ಸಿಂಗ್‌ ಕೋರ್ಸ್‌ಗಳಿಗೆ ದಾಖಲಾಗಬೇಕು ಎಂದು ಬಯಸಿರುವ ರಾಜ್ಯದ ಗ್ರಾಮಾಂತರ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಪರೀಕ್ಷಾ ಪ್ರಾಧಿಕಾರದ ಸಿಬ್ಬಂದಿ ತಮ್ಮ ಅಳಲಿಗೆ ಕಿವಿಗೊಡುತ್ತಿಲ್ಲ ಎಂದು ವಿದ್ಯಾ
ರ್ಥಿಗಳು ದೂರಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆ ಫೆ.4 ರಂದು ಜಾಹೀರಾತು ಪ್ರಕಟಿಸಿತ್ತು. ಅರ್ಜಿ ಸಲ್ಲಿಕೆಗೆ ಫೆ. 11 ಕೊನೆಯ ದಿನ. ಆದರೆ, ಮಂಗಳವಾರ (ಫೆ.9) ಸಂಜೆವರೆಗೂ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಅರ್ಜಿ ನಮೂನೆ, ಮಾಹಿತಿ ಪತ್ರಗಳನ್ನು ಅಪ್‌ ಲೋಡ್‌ ಮಾಡಿಲ್ಲ. ‘ಜಾಹೀ
ರಾತು ಪ್ರಕಟಿಸಿ 5 ದಿನಗಳ ಕಳೆದರೂ ಮಾಹಿತಿ ನೀಡದೇ ಇರುವುದನ್ನು ನೋಡಿದರೆ ಖಾಸಗಿ ಕಾಲೇಜು ಗಳು ಕೇರಳ ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಹಣ ಕ್ಕಾಗಿ ಸೀಟುಗಳನ್ನು ಮಾರಿ ಕೊಳ್ಳಲು ಪ್ರಾಧಿಕಾರದ ಅಧಿಕಾರಿ ಗಳು ನೆರವಾಗುತ್ತಿದ್ದಾರೆಯೇ ಎಂಬ ಸಂಶಯ ಉಂಟಾಗಿದೆ’ ಎಂದು ವಿದ್ಯಾ ರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ ಪರಿಶೀಲಿಸಿದಾಗ ಅಲ್ಲಿ ಬಿಎಸ್ಸಿ ನರ್ಸಿಂಗ್‌ ಕೋರ್ಸ್‌ಗಳ ಮಾಹಿತಿ ಹಾಕದೇ ಇರುವುದು ಕಂಡು ಬಂದಿತ್ತು. ಪ್ರಾಧಿಕಾರದ ಸಿಬ್ಬಂದಿಯನ್ನು ಸಂಪರ್ಕಿಸಿದಾಗ ‘ಇವತ್ತು ಅಥವಾ ನಾಳೆ ಅಪ್‌ಡೇಟ್‌ ಮಾಡುತ್ತೇವೆ’ ಎಂಬ ಉತ್ತರ ಬಂದಿತು.

‘ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸರ್ಕಾರವು ಖಾಸಗಿ ನರ್ಸಿಂಗ್‌ ಕಾಲೇಜುಗಳಲ್ಲಿ (ಬಿಎಸ್ಸಿ) ಸರ್ಕಾರಿ ಕೋಟಾ ನಿಗದಿ ಮಾಡಿದೆ. ರಾಜ್ಯದ ವಿವಿಧ ಖಾಸಗಿ ನರ್ಸಿಂಗ್‌ ಕಾಲೇಜುಗಳಲ್ಲಿ 3,300 ಸೀಟುಗಳು ಸರ್ಕಾರಿ ಕೋಟಾದಡಿ ಲಭ್ಯವಿದೆ. ಒಂದು ವೇಳೆ ಇವತ್ತೇ ಮಾಹಿತಿ ಹಾಕಿದರೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವುದು ಕಷ್ಟ. ಅರ್ಜಿ ಕಡಿಮೆ ಆದಷ್ಟು ಖಾಸಗಿ ಕಾಲೇಜುಗಳಿಗೆ ಹಬ್ಬ. ಉದ್ದೇಶಪೂರ್ವಕವಾಗಿಯೇ ತಡ ಮಾಡಲಾಗುತ್ತಿದೆ‘ ಎಂದು ವಿದ್ಯಾರ್ಥಿಗಳು ದೂರಿದರು.

ಈ ವರ್ಷ ಕೋವಿಡ್‌ನಿಂದಾಗಿ ಎಲ್ಲವೂ ತಡವಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶ ಬಂದು 5 ತಿಂಗಳ ಬಳಿಕ ನರ್ಸಿಂಗ್‌ ಕೋರ್ಸ್‌ ಪ್ರವೇಶಕ್ಕಾಗಿ ಪ್ರಕಟಣೆ ಹೊರಡಿಸಲಾಗಿದೆ. ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಿಗೆ ಹೋಗಲು ಶಕ್ತಿ ಇಲ್ಲದವರು ನರ್ಸಿಂಗ್ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಆಗಸ್ಟ್ ನಲ್ಲೇ ಅರ್ಜಿ ಕರೆಯಬೇಕಿತ್ತು. ಏಳು ತಿಂಗಳು ತಡವಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.


‘ಇನ್ನಷ್ಟು ಸಮಯ ನೀಡಲು ಸಿದ್ಧ’

‘ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಿರುವುದು ಗಮನಕ್ಕೆ ಬಂದಿದೆ. ತಾಂತ್ರಿಕವಾಗಿ ಸಮಸ್ಯೆ ಆಗಿರಬಹುದು. ಈ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಅರ್ಜಿ ಸಲ್ಲಿಕೆಗೆ ಸಮಯ ವಿಸ್ತರಿಸಲು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಕೋರ್ಸ್‌ಗಳು

l ಪ್ರಥಮ ವರ್ಷದ ಕೋರ್ಸ್‌– ಬಿ.ಎಸ್ಸಿ ನರ್ಸಿಂಗ್‌, ಬಿಪಿಟಿ, ಬಿಪಿಒ, ಬಿ.ಎಸ್ಸಿ

l ಎರಡು ವರ್ಷದ ಕೋರ್ಸ್‌– ಪೋಸ್ಟ್‌ ಬೇಸಿಕ್‌ ಬಿ.ಎಸ್ಸಿ ನರ್ಸಿಂಗ್‌

l ಲ್ಯಾಟರಲ್ ಎಂಟ್ರಿ ಕೋರ್ಸ್‌– ಬಿ.ಎಸ್ಸಿ ಅಲೈಡ್‌ ಸೈನ್ಸ್‌

***

ವೆಬ್‌ಸೈಟ್‌ಗಾಗಿ ಹುಡುಕಾಡಿದರೆ ‘ವೈಬ್‌ಸೈಟ್‌ ನಾಟ್‌ ಫೌಂಡ್‌’ ಎಂದು ಬರುತ್ತಿದೆ. ಹೊಲದ ಕೆಲಸ ಮಾಡಿಕೊಂಡು ಸೀಟಿಗಾಗಿ ಪ್ರಯತ್ನಿಸುತ್ತಿದ್ದೇನೆ.

- ಶೇಖರ್‌, ವಿದ್ಯಾರ್ಥಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೇರೆ ಬೇರೆ ಕೋರ್ಸುಗಳ ಕೌನ್ಸೆಲಿಂಗ್ ನಡೆಸುತ್ತಿರುವುದರಿಂದ ಕೊಂಚ ಹಿನ್ನಡೆಯಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಲಾಗುವುದು

- ಡಾ. ಕೆ. ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT